ಗೋಲ್ಡನ್ ಡಕ್…ಆಟಗಾರನೊಬ್ಬ ಶೂನ್ಯಕ್ಕೆ ಔಟಾಗುವುದನ್ನು ಗೋಲ್ಡನ್ ಡಕ್ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್‌ನಲ್ಲಿ ಗೋಲ್ಡನ್ ಡಕ್ ಝೀರೋಗೆ ಔಟಾದ್ರೆ ಬಳಸುವ ಪದವಲ್ಲ. ಬದಲಾಗಿ ಬ್ಯಾಟ್ಸ್ಮನ್ವೊಬ್ಬ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಒಂದಕ್ಕಿಂತ ಹೆಚ್ಚಿನ ಬಾಲ್ಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರೆ ಅದನ್ನು ಡಕ್ ಔಟ್ ಎಂದು ಕರೆಯಲಾಗುತ್ತದೆ. ಇದಾಗ್ಯೂ ಕ್ರಿಕೆಟ್‌ನಲ್ಲಿ ಗೋಲ್ಡನ್ ಅಲ್ಲದೆ, ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್ಗಳಿವೆ ಎಂದರೆ ನಂಬುತ್ತೀರಾ?..ಹೌದು, ಗೋಲ್ಡನ್ ಡಕ್ ಔಟ್ನಂತೆ ಇತರೆ ಕೆಲ ಔಟ್ಗಳಿಗೆ ಕೆಲ ಪದಗಳನ್ನು ಬಳಸಲಾಗುತ್ತದೆ. ಅಂತಹ ಕೆಲವೊಂದು ಡಕ್ ಔಟ್ಗಳ ಹೆಸರುಗಳನ್ನು ಈ ಕೆಳಗೆ ನೀಡಲಾಗಿದೆ.
ಸಿಲ್ವರ್ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ, ಅದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ.
ಬ್ರೋನ್ಝ್ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ಔಟಾದರೆ ಅದು ಬ್ರೋನ್ಝ್ ಡಕ್.
ಡೈಮಂಡ್ ಡಕ್: ಬ್ಯಾಟ್ಸ್‌ಮನ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾದರೆ ಅದನ್ನು ‘ಡೈಮಂಡ್ ಡಕ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ರನೌಟ್ ಮೂಲಕ ಡೈಮಂಡ್ ಡಕ್ ಔಟಾಗುತ್ತಾರೆ.
ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್: ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಪಂದ್ಯದ ಮೊದಲ ಎಸೆತದಲ್ಲೇ ಔಟಾಗುವುದನ್ನು ಹೀಗೆ ಕರೆಯಲಾಗುತ್ತದೆ.
ಪೇರ್ ಡಕ್: ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದಾದರೆ ಅದನ್ನು ಪೇರ್ ಡಕ್ ಎಂದು ಕರೆಯಲಾಗುತ್ತದೆ.
ಕಿಂಗ್ ಪೇರ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಕಿಂಗ್ ಪೇರ್ ಡಕ್ ಔಟ್ ಎಂದು ಕರೆಯಲಾಗುತ್ತದೆ.
ಡಕ್ ಔಟ್ ಎಂದು ಯಾಕೆ ಕರೆಯಲಾಗುತ್ತೆ? ಇಂಗ್ಲಿಷ್ನಲ್ಲಿ ಡಕ್ ಅಂದರೆ ಬಾತುಕೋಳಿ. ಕ್ರಿಕೆಟ್ಗೂ ಬಾತುಕೋಳಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದರೆ, ಉತ್ತರ ಸಿಂಪಲ್. ನಾವು ಸಾಮಾನ್ಯವಾಗಿ ಝೀರೋಗೆ ಸಿಕ್ಕಾಗ ಬಳಸುವ ಪದ, ಮೊಟ್ಟೆ. ಝೀರೋ ಬಾತುಕೋಳಿಯ ಮೊಟ್ಟೆಯಾಕಾರದಲ್ಲಿ ಇರುವ ಕಾರಣ ಕ್ರಿಕೆಟ್‌ನಲ್ಲಿ ಡಕ್ ಎಂದು ಬಳಸಲಾಗಿದೆ. ಹೀಗಾಗಿ ಶೂನ್ಯಕ್ಕೆ ಔಟಾದರೆ ಡಕ್ ಔಟ್ ಎಂದು ಕರೆಯಲಾಗುತ್ತದೆ.
ವಿರಾಟ್ ಕೊಹ್ಲಿ 4 ಬಾರಿ ಡಕ್ ಔಟ್: ಇನ್ನು ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ನಾಲ್ಕು ಬಾರಿ ಗೋಲ್ಡನ್ ಡಕ್ ಆಗಿದ್ದಾರೆ. ಮೊದಲ ಬಾರಿಗೆ 2008 ರಲ್ಲಿ ಆಶಿಶ್ ನೆಹ್ರಾ ಎಸೆತದಲ್ಲಿ ಡಕ್ ಔಟ್ ಆಗಿದ್ದರು. ಇನ್ನು 2014 ರಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ ಸಂದೀಪ್ ಶರ್ಮಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಹಾಗೆಯೇ 2017 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ನಾಥನ್ ಕೌಲ್ಟರ್-ನೈಲ್ ಅವರಿಂದ ಗೋಲ್ಡನ್ ಡಕ್ ಆಗಿದ್ದರು. ಇನ್ನು ಬಾರಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯದಲ್ಲಿ ದುಷ್ಮಂತ ಚಮೀರಾ ಎಸೆತದಲ್ಲಿ ಡಕ್ ಔಟ್ ಆಗಿದ್ದಾರೆ.
ಡಕ್ ಔಟ್ ದಾಖಲೆ: ಶ್ರೀಲಂಕಾದ ಲೆಜೆಂಡರಿ ಆಫ್ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಗೋಲ್ಡನ್ ಡಕ್ಗೆ ಔಟಾದ ದಾಖಲೆಯನ್ನು ಹೊಂದಿದ್ದಾರೆ. ಮುರಳೀಧರನ್ ಮೊದಲ ಎಸೆತದಲ್ಲಿ ಖಾತೆ ತೆರೆಯದೆ 14 ಬಾರಿ ಔಟಾಗಿದ್ದಾರೆ. ಇನ್ನು ಏಕದಿನ ಪಂದ್ಯದಲ್ಲೂ ಈ ದಾಖಲೆ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಮಾಲಿಂಗ 13 ಬಾರಿ ಗೋಲ್ಡನ್ ಡಕ್ ಆಗಿದ್ದಾರೆ. ಇನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೆಸ್ಟ್, ODI ಮತ್ತು T20 ಎಲ್ಲಾ ಮೂರು ಸ್ವರೂಪಗಳಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ವಜಾಗೊಂಡ ಅನಪೇಕ್ಷಿತ ದಾಖಲೆ ಕೂಡ ಮುರಳೀಧರನ್ ಹೆಸರಿನಲ್ಲಿದೆ. ಮುತ್ತಯ್ಯ ಮುರಳೀಧರನ್ 59 ಬಾರಿ ಖಾತೆ ತೆರೆಯದೆ ಪೆವಿಲಿಯನ್ಗೆ ಮರಳಿದ್ದಾರೆ. ವೆಸ್ಟ್ ಇಂಡೀಸ್‌ನ ಕರ್ಟ್ನಿ ವಾಲ್ಷ್ (54) ಮತ್ತು ಸನತ್ ಜಯಸೂರ್ಯ (53) ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ