IPL 2022: ಭಾರತದಲ್ಲಿ ಕ್ರಿಕೆಟ್ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಿರುವ ವಿಷಯ. ಅದರಲ್ಲೂ ಕೆಲ ಆಟಗಾರರಿಗೆ ಜೀವಕ್ಕೆ ಜೀವ ನೀಡುವ ಅಭಿಮಾನಿಗಳು ಕೂಡ ಕಾಣ ಸಿಗುತ್ತಾರೆ. ಅಂತಹ ಕ್ರೇಜಿ ಅಭಿಮಾನಿಯೊಬ್ಬರು ಬಿಹಾರದ ನವಾಡದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಹೌದು, ಹಾರ್ದಿಕ್ ಪಾಂಡ್ಯ (Hardik Pandya) ಅವರ ಕಟ್ಟಾ ಅಭಿಮಾನಿ ರವಿ ಪಾಂಡ್ಯ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಐಪಿಎಲ್ನಲ್ಲಿ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ ಭರ್ಜರಿ ಆಫರ್ವೊಂದನ್ನು ಘೋಷಿಸಿದ್ದರು. ಅದು ಕೂಡ ಫುಲ್ ಫ್ರೀ ಎಂಬುದು ವಿಶೇಷ.
ರವಿ ಪಾಂಡ್ಯ ನವಾಡದಲ್ಲಿ ಸಲೂನ್ವೊಂದನ್ನು ನಡೆಸುತ್ತಿದ್ದಾರೆ. ಇತ್ತ ಐಪಿಎಲ್ನಲ್ಲಿ ಹೊಸ ಚಾಂಪಿಯನ್ ಆಗಿ ಗುಜರಾತ್ ಟೈಟಾನ್ಸ್ ತಂಡವು ಹೊರಹೊಮ್ಮುತ್ತಿದ್ದಂತೆ ರವಿ ತಮ್ಮ ಬಾರ್ಬರ್ ಶಾಪ್ನಲ್ಲಿ ಬಿಗ್ ಆಫರ್ ನೀಡಿದ್ದಾರೆ. ಅದೇನೆಂದರೆ ಗುಜರಾತ್ ಟೈಟಾನ್ಸ್ ಗೆಲುವಿನ ಪ್ರಯುಕ್ತ ತಮ್ಮ ಸಲೂನ್ಗೆ ಬರುವ ಗ್ರಾಹಕರಿ ಒಂದು ದಿನ ಉಚಿತವಾಗಿ ಹೇರ್ ಕಟ್ ಮತ್ತು ಶೇವಿಂಗ್ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಅಭಿಮಾನಿ ಗುಜರಾತ್ ಟೈಟಾನ್ಸ್ ಗೆಲುವನ್ನು ಫ್ರೀ ಕಟ್ಟಿಂಗ್ ಶೇವಿಂಗ್ ಮೂಲಕ ಸಂಭ್ರಮಿಸಿದ್ದಾರೆ.
ರವಿ ಪಾಂಡ್ಯ ಅವರು ಈ ಬಾರಿ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಬೆಂಬಲಿಸಿದ್ದರು. ಇದಕ್ಕೆ ಮುಖ್ಯ ಕಾರಣ ತನ್ನ ನೆಚ್ಚಿನ ಆಟಗಾರ ಹಾರ್ದಿಕ್ ಪಾಂಡ್ಯ ಆ ತಂಡದ ನಾಯಕತ್ವ ವಹಿಸಿರುವುದು. ಅಷ್ಟೇ ಅಲ್ಲದೆ ಟೈಟಾನ್ಸ್‌ನ ಅದ್ಭುತ ಗೆಲುವಿನ ನಂತರ ರವಿ ಅವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅದನ್ನು ಹೇಗೆ ಆಚರಿಸಬೇಕೆಂದು ಯೋಚಿಸಿದ ಪಾಂಡ್ಯ ಫ್ಯಾನ್, ಒಂದು ದಿನದ ಮಟ್ಟಿಗೆ ತಮ್ಮ ಸಲೂನ್ನಲ್ಲಿ ಉಚಿತ ಸೇವೆ ನೀಡಲು ನಿರ್ಧರಿಸಿದರು.
ಸಾಮಾನ್ಯವಾಗಿ ಬಾರ್ಬರ್ ಶಾಪ್ಗೆ ಜನರು ಬರುತ್ತಲೇ ಇರುತ್ತಾರೆ. ಆದರೆ ಯಾವಾಗ ಉಚಿತ ಎಂಬ ಘೋಷಣೆಯಾಯಿತೋ, ಸಲೂನ್ ಮುಂದೆ ಜನಜಂಗುಳಿ ಏರ್ಪಟ್ಟಿತ್ತು. ರವಿ ಕೂಡ ಯಾರಿಗೂ ನಿರಾಸೆ ಮಾಡದೆ ಎಲ್ಲರಿಗೂ ಉಚಿತ ಸೇವೆ ನೀಡಿದರು. ಅಷ್ಟೇ ಅಲ್ಲದೆ ಗುಜರಾತ್ ಟೈಟಾನ್ಸ್ ಗೆಲುವಿನ ಖುಷಿಯಲ್ಲಿ ಬಂದ ಎಲ್ಲಾ ಗ್ರಾಹಕರು ಮತ್ತು ಸ್ನೇಹಿತರಿಗೆ ಸಿಹಿ ಮತ್ತು ತಂಪು ಪಾನೀಯಗಳನ್ನು ನೀಡುವ ಮೂಲಕ ವಿಜಯೋತ್ಸವವನ್ನು ಆಚರಿಸಿರುವುದು ವಿಶೇಷ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.