ಸೆಮಿಫೈನಲ್​ನಲ್ಲಿ ಸೋಲು; ಬ್ರಸೆಲ್ಸ್‌ನ ಬೀದಿಗಳಲ್ಲಿ ಕೋಲಾಹಲ ಎಬ್ಬಿಸಿದ ಮೊರೊಕನ್ ಫ್ಯಾನ್ಸ್! ವಿಡಿಯೋ

| Updated By: ಪೃಥ್ವಿಶಂಕರ

Updated on: Dec 15, 2022 | 12:14 PM

FIFA World Cup 2022: ಬೆಲ್ಜಿಯಂನ ಬ್ರಸೆಲ್ಸ್‌ನ ಬೀದಿಗಳಲ್ಲಿ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿರುವ ಮೊರೊಕನ್ ಅಭಿಮಾನಿಗಳು ಕಸದ ತೊಟ್ಟಿಗಳಂತಹ ಇತರ ವಸ್ತುಗಳನ್ನು ಪೊಲೀಸರತ್ತ ಎಸೆದು ಪುಂಡಾಟ ಮೆರೆದಿದ್ದಾರೆ.

ಸೆಮಿಫೈನಲ್​ನಲ್ಲಿ ಸೋಲು; ಬ್ರಸೆಲ್ಸ್‌ನ ಬೀದಿಗಳಲ್ಲಿ ಕೋಲಾಹಲ ಎಬ್ಬಿಸಿದ ಮೊರೊಕನ್ ಫ್ಯಾನ್ಸ್! ವಿಡಿಯೋ
ಗಲಭೆ ಸೃಷ್ಟಿಸಿದ ಮೊರೊಕನ್ ಫ್ಯಾನ್ಸ್
Follow us on

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ (FIFA World Cup) ಅಂತಿಮ ಹಂತ ತಲುಪಿದೆ. ಬುಧವಾರ ಅಲ್​ ಬಯಾತ್ ಸ್ಟೇಡಿಂ​ನಲ್ಲಿ ನಡೆದ ದ್ವಿತೀಯ ಸೆಮಿ ಫೈನಲ್​ ಹಣಾಹಣಿಯಲ್ಲಿ ಮೊರಾಕ್ಕೊ ತಂಡವನ್ನು 2-0 ಗೋಲ್​ಗಳಿಂದ ಮಣಿಸಿದ ಫ್ರಾನ್ಸ್​ (France vs Morocco) ತಂಡ ಪ್ರಶಸ್ತಿ ಸುತ್ತಿಗೇರಿದೆ. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಬಲಿಷ್ಠ ಫ್ರಾನ್ಸ್ ಜಯ ಸಾಧಿಸಿದ ಪರಿಣಾಮ ಫೈನಲ್​ನಲ್ಲಿ ಅರ್ಜೆಂಟೀನಾ (France vs Argentina) ವಿರುದ್ಧ ಕಪ್​ಗಾಗಿ ಹೋರಾಟ ನಡೆಸಲಿದೆ. ಈ ಕಡೆ ಫ್ರಾನ್ಸ್ ವಿರುದ್ಧ ಮೊರಾಕ್ಕೊ ತಂಡದ ಸೋಲನ್ನು ಅರಗಿಸಿಕೊಳ್ಳದ ಮೊರೊಕನ್ ಅಭಿಮಾನಿಗಳು ಬೆಲ್ಜಿಯಂನ ಬೀದಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಬಂದ ಪೊಲೀಸರೊಂದಿಗೆಯೂ ವಾಗ್ವಾದ ನಡೆಸಿದ್ದಾರೆ.

ಬೆಲ್ಜಿಯಂನ ಬ್ರಸೆಲ್ಸ್‌ನ ಬೀದಿಗಳಲ್ಲಿ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರಹಾಕಿರುವ ಮೊರೊಕನ್ ಅಭಿಮಾನಿಗಳು ಕಸದ ತೊಟ್ಟಿಗಳಂತಹ ಇತರ ವಸ್ತುಗಳನ್ನು ಪೊಲೀಸರತ್ತ ಎಸೆದು ಪುಂಡಾಟ ಮೆರೆದಿದ್ದಾರೆ. ಉದ್ರಿಕ್ತರ ಗುಂಪನ್ನು ಚದುರಿಸುವ ಸಲುವಾಗಿ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಜೊತೆ ಜಲ ಪಿರಂಗಿ ಬಳಸಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ವಾಸ್ತ್ಯಕ್ಕೆ ತೊಂದರೆಯೊಡ್ಡಿದ ಕೆಲವನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, ಮೊರೊಕನ್ ಅಭಿಮಾನಿಗಳು ಸೃಷ್ಟಿಸಿದ ಈ ಕಿಡಿಗೇಡಿತನದಲ್ಲಿ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.

ಐಪಿಎಲ್​ ತಂಡವನ್ನೇ ಖರೀದಿಸುವ ಸಾಮರ್ಥ್ಯ ಹೊಂದಿರುವ ಮೆಸ್ಸಿ ಎಷ್ಟು ಸಾವಿರ ಕೋಟಿಯ ಒಡೆಯ ಗೊತ್ತಾ?

ಫೈನಲ್‌ಗೆ ಫ್ರಾನ್ಸ್

ಫಿಫಾ ವಿಶ್ವಕಪ್ 2022 ರ ಸೆಮಿಫೈನಲ್‌ನಲ್ಲಿ ಮೊರಾಕೊವನ್ನು ಸೋಲಿಸುವ ಮೂಲಕ, ಫ್ರಾನ್ಸ್ ಸತತ ಎರಡನೇ ಬಾರಿಗೆ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಈ ಮೂಲಕ 2002ರಲ್ಲಿ ಬ್ರೆಜಿಲ್ ನಂತರ ಈ ಸಾಧನೆ ಮಾಡಿದ ಎರಡನೇ ತಂಡ ಎನಿಸಿಕೊಂಡಿದೆ. 2-0 ಗೋಲುಗಳಿಂದ ಮೊರಾಕೊವನ್ನು ಸೋಲಿಸಿದ ಫ್ರಾನ್ಸ್, ಇದೀಗ ಫೈನಲ್​ನಲ್ಲಿ ಅರ್ಜೆಂಟೀನಾವನ್ನು ಎದುರಿಸಲಿದೆ. ಫಿಫಾ ವಿಶ್ವಕಪ್ 2022 ರ ಅಂತಿಮ ಪಂದ್ಯವು ಡಿಸೆಂಬರ್ 18 ರಂದು ನಡೆಯಲಿದೆ.

ವಿಶ್ವಕಪ್ ಸೆಮಿಫೈನಲ್‌ ಆಡಿದ ಮೊದಲ ಆಫ್ರಿಕನ್ ತಂಡ ಮೊರಾಕೊ

ಫ್ರಾನ್ಸ್ ವಿರುದ್ಧದ ಸೋಲಿನ ನಂತರ ಮಾತನಾಡಿದ ಮೊರಾಕೊ ತಂಡದ ಮ್ಯಾನೇಜರ್, ತಮ್ಮ ತಂಡದ ಪ್ರದರ್ಶನವು ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮವಾಗಿತ್ತು. ಸೆಮಿಫೈನಲ್ ಸೋಲು ನಮ್ಮಿಂದ ದೊಡ್ಡ ಯಶಸ್ಸನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಫಿಫಾ ವಿಶ್ವಕಪ್‌ನ ಇತಿಹಾಸದಲ್ಲಿ ಸೆಮಿಫೈನಲ್‌ನಲ್ಲಿ ಆಡಿದ ಮೊದಲ ಆಫ್ರಿಕನ್ ತಂಡ ಮೊರಾಕೊ. ಅಲ್ಲದೆ ಸ್ಪೇನ್, ಪೋರ್ಚುಗಲ್‌ನಂತಹ ದೊಡ್ಡ ತಂಡಗಳನ್ನು ಮಣಿಸಿದ ಕೀರ್ತಿ ಮೊರಾಕೊ ತಂಡಕ್ಕೆ ಸಲ್ಲುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Thu, 15 December 22