IND vs BAN: ಪೂಜಾರ, ಅಯ್ಯರ್, ಅಶ್ವಿನ್ ಅರ್ಧಶತಕ; 404 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ
IND vs BAN: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 404 ರನ್‌ಗಳಿಗೆ ಆಲೌಟ್ ಆಗಿದೆ.
ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ((India Vs Bangladesh)) 404 ರನ್‌ಗಳಿಗೆ ಆಲೌಟ್ ಆಗಿದೆ. ಚಟ್ಟೋಗ್ರಾಮ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಆದರೆ ಆರಂಭಿಕರ ವೈಫಲ್ಯದಿಂದ ಕಂಗೆಟ್ಟಿದ್ದ ಭಾರತಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಚೇತೇಶ್ವರ್ ಪೂಜಾರ (Cheteshwar Pujara and Shreyas Iyer) ಸಿಡಿಸಿದ ಅರ್ಧಶತಕ ನೆರವಾಯಿತು. ಎರಡನೇ ದಿನದಾಟದಲ್ಲಿ ಅದ್ಭುತ ಜೊತೆಯಾಟ ನಡೆಸಿದ ಅಶ್ವಿನ್ (Ravichandran Ashwin) ಹಾಗೂ ಕುಲ್ದೀಪ್ ಯಾದವ್ (Kuldeep Yadav) ತಂಡವನ್ನು 400 ರ ಸನಿಹಕ್ಕೆ ತಂದರು. ಅಂತಮವಾಗಿ ಉಮೇಶ್ ಯಾದವ್ ಹಾಗೂ ಸಿರಾಜ್ ತಂಡವನ್ನು 400 ರ ಗಡಿ ದಾಟಿಸಿದರು.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು 278 ರನ್ಗಳಿಂದ ಇನ್ನಿಂಗ್ಸ್ ಮುಂದುವರೆಸಿದ ಭಾರತ, ಅಂತಿಮ 4 ವಿಕೆಟ್ಗಳನ್ನು ಕಳೆದುಕೊಂಡು 404 ರನ್ ಕಲೆಹಾಕಿತು. ತಂಡದ ಪರ ಎರಡನೇ ದಿನದಾಟವನ್ನು ಆರಂಭಿಸಿದ ಅಶ್ವಿನ್ ಹಾಗೂ ಅಯ್ಯರ್ ತಂಡಕ್ಕೆ ಕೆಲವು ರನ್‌ಗಳ ಕೊಡುಗೆ ನೀಡಿದರು. ಮೊದಲ ದಿನದಾಟದಲ್ಲಿ ಎರಡು ಜೀವದಾನಗಳ ಲಾಭ ಪಡೆದು ಅರ್ಧಶತಕ ಸಿಡಿಸಿದ್ದ ಅಯ್ಯರ್ಗೆ ಎರಡನೇ ದಿನದಲ್ಲೂ ಮತ್ತೊಂದು ಅವಕಾಶ ಸಿಕ್ಕಿತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳದ ಅಯ್ಯರ್ 86 ರನ್‌ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
2. ಅಶ್ವಿನ್- ಕುಲ್ದೀಪ್ ಅರ್ಧಶತಕದ ಜೊತೆಯಾಟ
ಆದರೆ ಅಯ್ಯರ್ ವಿಕೆಟ್ ಬಳಿಕ ಜೊತೆಯಾದ ಅಶ್ವಿನ್ ಹಾಗೂ ಕುಲ್ದೀಪ್ ಬಾಂಗ್ಲಾ ಆಟಗಾರರ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು. ಈ ಇಬ್ಬರು ಜೊತೆಗೂಡಿ 93 ರನ್‌ಗಳ ಜೊತೆಯಾಟ ನಡೆಸಿದರು. ಈ ಹಂತದಲ್ಲಿ ಅಶ್ವಿನ್ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 58 ರನ್ ಬಾರಿಸಿದರೆ, ಕುಲ್ದೀಪ್ ಯಾದವ್ 5 ಬೌಂಡರಿ ಸಹಿತ 40 ರನ್ ಚಚ್ಚಿದರು. ಬಾಂಗ್ಲಾ ಬೌಲರ್ಗಳಿಗೆ ತಲೆನೋವಾಗಿದ್ದ ಈ ಇಬ್ಬರ ಜೊತೆಯಾಟವನ್ನು ಮುರಿಯುವಲ್ಲಿ ಮೆಹದಿ ಹಸನ್ ಯಶಸ್ವಿಯಾದರು. ಸ್ಟಂಪ್ ಔಟ್ ಆಗುವ ಮೂಲಕ ಅಶ್ವಿನ್ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಕುಲ್ದೀಪ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಇಬ್ಬರ ವಿಕೆಟ್ ಬಳಿಕ ಬಂದ ಉಮೇಶ್ ಹಾಗೂ ಸಿರಾಜ್ ಸ್ಫೋಟಕ ಇನ್ನಿಂಗ್ಸ್ ಮೂಲಕ ತಂಡವನ್ನು 400ರ ಗಡಿ ದಾಟಿಸಿದರು.
ತಮ್ಮನ ಚೊಚ್ಚಲ ಶತಕಕ್ಕೆ ಭಾವನಾತ್ಮಕ ಸಂದೇಶ ಬರೆದು ಶುಭ ಹಾರೈಸಿದ ಸಾರಾ ತೆಂಡೂಲ್ಕರ್..!
3. 7 ರನ್‌ಗಳ ಅಂತರದಲ್ಲಿ 3 ವಿಕೆಟ್ ಪತನ
ಮೊದಲ ದಿನ ಭಾರತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದಾಗ ಕೇವಲ 7 ರನ್‌ಗಳ ಅಂತರದಲ್ಲಿ 3 ವಿಕೆಟ್‌ಗಳು ಪತನಗೊಂಡವು. ಭಾರತದ ಆರಂಭಿಕ ಜೋಡಿ 41 ರನ್‌ಗಳ ಜೊತೆಯಾಟ ನಡೆಸಿ ಬೇರೆ ಬೇರೆಯಾಯಿತು. ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ನಂತರ ಕೇವಲ 4 ರನ್ ಅಂತರದಲ್ಲೇ ಭಾರತ 2ನೇ ವಿಕೆಟ್ ಪತನವಾಯಿತು. ಬಳಿಕ ಮತ್ತೆ ಮೂರು ರನ್ ಕಲೆಹಾಕುವುದರೊಳಗೆ ಮೂರನೇ ವಿಕೆಟ್ ಪತನವಾಯಿತು. ಇದಾದ ಬಳಿಕ ಚೇತೇಶ್ವರ್ ಪೂಜಾರ ಜೊತೆಗೂಡಿ ರಿಷಬ್ ಪಂತ್ ಭಾರತದ ತತ್ತರಿಸಿದ ಇನ್ನಿಂಗ್ಸ್ ನಿಭಾಯಿಸಲು ಯತ್ನಿಸಿದರು. ಆದರೆ ಭಾರತದ ಸ್ಕೋರ್ 112 ರನ್ ಇದ್ದಾಗ, ಪಂತ್ ಕೂಡ ಔಟಾದರು.
4. ಪೂಜಾರ- ಅಯ್ಯರ್ ಶತಕದ ಜೊತೆಯಾಟ
ಪಂತ್ ವಿಕೆಟ್ ಬಳಿಕ ಜೊತೆಯಾದ ಅಯ್ಯರ್ ಮತ್ತು ಪೂಜಾರ ಶತಕದ ಜೊತೆಯಾಟವನ್ನಾಡಿದರು. ಇಬ್ಬರೂ ಬಾಂಗ್ಲಾದೇಶದ ಬೌಲರ್‌ಗಳ ಮುಂದೆ ತಾಳ್ಮೆಯಿಂದ ಬ್ಯಾಟ್ ಬೀಸಿ ಅರ್ಧಶತಕ ಪೂರೈಸಿದರು. ಇಬ್ಬರೂ 112 ರನ್‌ಗಳ ಜೊತೆಯಾಟ ನಡೆಸಿ ತಂಡದ ಸ್ಕೋರನ್ನು 261 ರನ್‌ಗಳಿಗೆ ಕೊಂಡೊಯ್ದರು. ಈ ಹಂತದಲ್ಲಿ 90 ರನ್ ಗಳಿಸಿ ಆಡುತ್ತಿದ್ದ ಪೂಜಾರ 2019 ರಿಂದ ಎದುರಿಸುತ್ತಿರುವ ಶತಕದ ಬರವನ್ನು ಕೊನೆಗೊಳಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ತೈಜುಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೂಜಾರ ಪೆವಿಲಿಯನ್ಗೆ ಮರಳಿದರು. ಇದರೊಂದಿಗೆ ಅವರ 19 ನೇ ಟೆಸ್ಟ್ ಶತಕದ ಕಾಯುವಿಕೆಯೂ ಹೆಚ್ಚಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Thu, 15 December 22