ಪ್ರಸ್ತುತ ಚೊಚ್ಚಲ ರಣಜಿ ಪಂದ್ಯವನ್ನಾಡುತ್ತಿರುವ ಲೆಜೆಂಡರಿ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಮ್ಮ ರಣಜಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ್ದಾರೆ. ಗೋವಾ ಪರ ಆಡಿದ ಅರ್ಜುನ್ ರಾಜಸ್ಥಾನ ವಿರುದ್ಧ 120 ರನ್ ಗಳಿಸಿದ್ದರು. ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿರುವ ಅರ್ಜುನ್ಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಇದರಲ್ಲಿ ಅರ್ಜುನ್ ಅಕ್ಕ ಸಾರಾ ತೆಂಡೂಲ್ಕರ್ ಕೂಡ ಸೇರಿದ್ದು, ತಮ್ಮ ಯಶಸ್ವಿಗೆ ವಿಭಿನ್ನವಾಗಿ ಶುಭ ಹಾರೈಸಿದ್ದಾರೆ.
ಅರ್ಜುನ್ ಶತಕವನ್ನು ಕೊಂಡಾಡಿರುವ ಸಾರಾ ತೆಂಡೂಲ್ಕರ್, ನಿನ್ನ ಎಲ್ಲಾ ಶ್ರಮಕ್ಕೆ ಪ್ರತಿಫಲವಿದೆ. ತಾಳ್ಮೆ ನಿಧಾನವಾಗಿ ಫಲ ನೀಡುತ್ತಿದೆ. ಇದು ಆರಂಭ ಮಾತ್ರ. ನಾನು ನಿನ್ನ ಅಕ್ಕನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಆವೃತ್ತಿಯವರೆಗೂ ಮುಂಬೈ ತಂಡದಲ್ಲಿದ್ದ ಅರ್ಜುನ್ ತೆಂಡೂಲ್ಕರ್ಗೆ ಆಡುವ ಇಲೆವೆನ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಮುಂಬೈ ತಂಡ ತೊರೆದಿದ್ದ ಅರ್ಜುನ್ ಗೋವಾ ಪರ ರಣಜಿ ಆಡಲು ನಿರ್ಧರಿಸಿದ್ದರು.
ಅರ್ಜುನ್ ತೆಂಡೂಲ್ಕರ್ ತಮ್ಮ ತಂದೆಯಂತೆಯೇ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಸಚಿನ್ 34 ವರ್ಷಗಳ ಹಿಂದೆ ಅಂದರೆ ಕೇವಲ ತನ್ನ 15 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ಅರ್ಜುನ್ ತೆಂಡೂಲ್ಕರ್ ಗೋವಾ ಪರ ಆಡುವ ಮೊದಲು ಯುವರಾಜ್ ಸಿಂಗ್ ತಂದೆ ಯೋಗರಾಜ್ ಅವರಿಂದ ತರಬೇತಿ ಪಡೆದಿದ್ದರು. ಚಂಡೀಗಢದಲ್ಲಿ 15 ದಿನ ತಂಗಿದ್ದ ಯೋಗರಾಜ್ ನೀನು ಸಚಿನ್ ಮಗ ಎನ್ನುವುದನ್ನು ಮರೆತುಬಿಡು ಎಂದಿದ್ದರು. ಯೋಗರಾಜ್ ಅವರ ಈ ಗುರು ಮಂತ್ರ ಫಲ ನೀಡಿದ್ದು, ಅರ್ಜುನ್ ಶತಕ ಬಾರಿಸುವ ಮೂಲಕ ಅವರ ಕುಟುಂಬಕ್ಕೆ ಸಂತಸ ತಂದಿದ್ದಾರೆ.
Published On - 12:43 pm, Thu, 15 December 22