‘ಬಟ್ಟೆ ಒಗೆಸುತ್ತಿದ್ದರು, ತಂದೆಯ ಶಿಫಾರಸ್ಸಿನಿಂದ ತಂಡದಲ್ಲಿ ಸ್ಥಾನ’: ರಮೀಜ್- ಮಲಿಕ್ ಮೇಲೆ ಅಕ್ರಂ ಗಂಭೀರ ಆರೋಪ

| Updated By: ಪೃಥ್ವಿಶಂಕರ

Updated on: Nov 27, 2022 | 1:49 PM

ಮಲಿಕ್ ನನ್ನನ್ನುನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು. ನನಗೆ ಅವರು (ಮಲಿಕ್) ಬಟ್ಟೆ ಒಗೆಯಲು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಲು ಹೇಳುತ್ತಿದ್ದರು ಎಂದು ಅಕ್ರಂ ಆರೋಪಿಸಿದ್ದಾರೆ.

‘ಬಟ್ಟೆ ಒಗೆಸುತ್ತಿದ್ದರು, ತಂದೆಯ ಶಿಫಾರಸ್ಸಿನಿಂದ ತಂಡದಲ್ಲಿ ಸ್ಥಾನ’: ರಮೀಜ್- ಮಲಿಕ್ ಮೇಲೆ ಅಕ್ರಂ ಗಂಭೀರ ಆರೋಪ
Wasim Akram
Follow us on

ಪಾಕ್ ಕ್ರಿಕೆಟ್ ಲೋಕವನ್ನು ಆಳಿದ ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಂ ಅಕ್ರಂ (Wasim Akram) ತಮ್ಮ ಜೀವನ ಚರಿತ್ರೆಯನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅಕ್ರಂ ವೃತ್ತಿಬದುಕಿನ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹೊಂದಿರುವ ಪುಸ್ತಕ ಮಾರುಕಟ್ಟೆಗೆ ಬರುತ್ತಿದೆ. ಅದರಲ್ಲೂ ಈ ಪುಸ್ತಕದಲ್ಲಿ ಅನೇಕ ಅಚ್ಚರಿಯ ಸಂಗತಿಗಳನ್ನು ಉಲ್ಲೇಖಿಸಿರುವ ಅಕ್ರಂ, ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಪಾಕ್ ಕ್ರಿಕೆಟ್ ಮಂಡಳಿಯ (Pakistan Cricket Board) ಪ್ರಸ್ತುತ ಅಧ್ಯಕ್ಷ ರಮೀಜ್ ರಾಜಾ (Rameez Raja) ಬಗ್ಗೆ ಆರೋಪಗಳ ಮೂಟೆ ಹೊರಿಸಿದ್ದಾರೆ.

ರಮೀಜ್ ಮಾತ್ರವಲ್ಲ, ಅಕ್ರಮ್ ತನ್ನ ಪುಸ್ತಕದಲ್ಲಿ ಪಾಕಿಸ್ತಾನದ ಮತ್ತೊಬ್ಬ ಮಾಜಿ ನಾಯಕ ಸಲೀಂ ಮಲಿಕ್ ಬಗ್ಗೆಯೂ ಉಲ್ಲೇಖಿಸಿದ್ದು, ಅವರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ಪಾಕ್ ತಂಡದ ಮಾಜಿ ನಾಯಕರಾಗಿರುವ ಮಲಿಕ್ ಹಾಗೂ ಅಕ್ರಂ 1992 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದಲ್ಲಿ ಜೊತೆಯಾಗಿ ಆಡಿದ್ದರು.

ತಂದೆಯ ಶಿಫಾರಸ್ಸಿನಿಂದ ತಂಡದಲ್ಲಿ ಸ್ಥಾನ

ರಮೀಜ್ ರಾಜಾ ಬಗ್ಗೆ ತಮ್ಮ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ ಹಂಚಿಕೊಂಡಿರುವ ಅಕ್ರಂ, ರಮೀಜ್ ರಾಜಾ ಅವರ ತಂದೆ ಕಮಿಷನರ್ ಆಗಿದ್ದರಿಂದ ಅವರ ಶಿಫಾರಸ್ಸಿನ ಮೇಲೆ ಅವರು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಲ್ಲದೆ ಆಟದ ವೇಳೆ ಯಾವಾಗಲೂ ಸ್ಲಿಪ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಾಜಾ ಈ ವೇಳೆ ಕ್ಯಾಚ್ ಹಿಡಿದದ್ದಕ್ಕಿಂತ ಕೈಬಿಟ್ಟಿದ್ದೆ ಹೆಚ್ಚು. ಅವರು ಸ್ಲಿಪ್‌ನಲ್ಲಿ ಸಾಕಷ್ಟು ಕ್ಯಾಚ್‌ಗಳನ್ನು ಬಿಡುತ್ತಿದ್ದರು ಎಂದು ಅಕ್ರಮ್ ತಮ್ಮ ಪುಸ್ತಕದಲ್ಲಿ ಎಲ್ಲೇಖಿಸಿದ್ದಾರೆ ಎಂದು ವೆಬ್‌ಸೈಟ್‌ವೊಂದರಲ್ಲಿ ವರದಿಯಾಗಿದೆ.

ಸಲೀಂ ಮಲಿಕ್ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು

ಪಾಕಿಸ್ತಾನದ ಮಾಜಿ ನಾಯಕ ಸಲೀಂ ಮಲಿಕ್ ಮೇಲೂ ಗಂಭೀರ್ ಆರೋಪ ಹೊರಿಸಿರುವ ಅಕ್ರಂ, ಮಲಿಕ್ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು. ನನಗೆ ಅವರು (ಮಲಿಕ್) ಬಟ್ಟೆ ಒಗೆಯಲು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಲು ಹೇಳುತ್ತಿದ್ದರು. ಅಲ್ಲದೆ ಒಂದು ಪ್ರವಾಸದಲ್ಲಿ ಅವರು ನನ್ನನ್ನು ಮಸಾಜ್ ಮಾಡಲು ಸಹ ಕೇಳಿದ್ದರು ಎಂದು ಅಕ್ರಂ ಆರೋಪಿಸಿದ್ದಾರೆ.

ಆದಾಗ್ಯೂ, ಅಕ್ರಂ ಅವರ ಈ ಸ್ಫೋಟಕ ಹೇಳಿಕೆಗಳು ಕೇವಲ ಪ್ರಚಾರದ ಸ್ಟಂಟ್. ಅವುಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಮಾಜಿ ನಾಯಕ ಮಲಿಕ್ ಹೇಳಿಕೊಂಡಿದ್ದಾರೆ. ಅಲ್ಲದೆ ಮಲಿಕ್ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ್ದು, ಈ ವಿಷಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದಿದ್ದಾರೆ.

Published On - 1:47 pm, Sun, 27 November 22