ಸ್ಟೀವ್ ಸ್ಮಿತ್​ರನ್ನು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪುನಃ ನಾಯಕನಾಗಿ ಆರಿಸಬೇಕು ಅನ್ನುತ್ತಾರೆ ಮಾಜಿ ವಿಕೆಟ್​​​ಕೀಪರ್-ಬ್ಯಾಟರ್ ಇಯಾನ್ ಹೀಲಿ

2018 ರಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ ನಡೆದ ಚೆಂಡನ್ನು ವಿರೂಪಗೊಳಿಸಿದ ಪ್ರಕರಣವೊಂದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಬಳಿಕ ಸ್ಮಿತ್ ಎಲ್ಲ ಆವೃತ್ತಿಗಳ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು

ಸ್ಟೀವ್ ಸ್ಮಿತ್​ರನ್ನು ಟೆಸ್ಟ್ ಕ್ರಿಕೆಟ್ ತಂಡಕ್ಕೆ ಪುನಃ ನಾಯಕನಾಗಿ ಆರಿಸಬೇಕು ಅನ್ನುತ್ತಾರೆ ಮಾಜಿ ವಿಕೆಟ್​​​ಕೀಪರ್-ಬ್ಯಾಟರ್ ಇಯಾನ್ ಹೀಲಿ
ಸ್ಟೀವ್ ಸ್ಮಿತ್

ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್​ ನಡುವೆ ದಿ ಆ್ಯಶಸ್​ ಸರಣಿ ಡಿಸೆಂಬರ್ ಎರಡನೇ ವಾರದಿಂದ ಆರಂಭವಾಗಲಿದೆ. ಜೋ ರೂ​ಟ್​ ನಾಯಕತ್ವದ ಆಂಗ್ಲರ ತಂಡ ಈಗಾಗಲೇ ಕಾಂಗರೂಗಳ ನಾಡಿನಲ್ಲಿ ಅಭ್ಯಾಸದ ಪಂದ್ಯಗಳನ್ನು ಆಡುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯ (ಸಿಎ) ಈ ಪ್ರತಿಷ್ಠಿತ ಸರಣಿಗೆ ಹೊಸ ನಾಯಕನನ್ನು ಆಯ್ಕೆ ಮಾಡಬೇಕಿದೆ. 2018 ರ ಮಾರ್ಚ್​ ನಿಂದ ನಾಯಕತ್ವ ನಿಭಾಯಿಸುತ್ತಿದ್ದ ಟಿಮ್ ಪೈನ್ ಅಶ್ಲೀಲ ಮೆಸೇಜುಗಳನ್ನು ಕಳಿಸಿದ ಪ್ರಕರಣದಲ್ಲಿ ಮುಖಕ್ಕೆ ಮಸಿ ಬಳಿದುಕೊಂಡು ನಾಯಕತ್ವ ತ್ಯಜಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ ಗೆ ಉಪನಾಯಕನಾಗಿರುವ ವೇಗದ ಬೌಲರ್ ಪ್ಯಾಟ್​ ಕಮಿನ್ಸ್ ಬಡ್ತಿ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆಯಾದರೂ ಅಲ್ಲಿನ ಕ್ರಿಕೆಟ್ ಮಂಡಳಿ ಯಾವುದಕ್ಕೂ ಅವಸರಿಸುತ್ತಿಲ್ಲ.

ಸಿಎಗೆ ಕೆಲವು ಹೆಸರುಗಳನ್ನು ಸೂಚಿಸಲಾಗಿದೆ. ಅವುಗಳಲ್ಲಿ ಮಾಜಿ ನಾಯಕ ಮತ್ತು ವಿಶ್ವದ ಅಗ್ರಮಾನ್ಯ ಬ್ಯಾಟರ್​​​ಗಳಲ್ಲಿ ಒಬ್ಬರಾಗಿರುವ ಸ್ಟೀವ್ ಸ್ಮಿತ್​ ಅವರು ಹೆಸರೂ ಇದೆ. ಆಸ್ಟ್ರೇಲಿಯದ ಮಾಜಿ ವಿಕೆಟ್​ ಕೀಪರ್-ಬ್ಯಾಟರ್ ಇಯಾನ್ ಹೀಲಿ ಅವರು ಸ್ಮಿತ್​ ಪರ ಬ್ಯಾಟ್​ ಮಾಡಿದ್ದಾರೆ. ಕ್ರೀಡಾ ವೆಬ್​ ಸೈಟೊಂದರ ಜೊತೆ ಮಾತಾಡಿರುವ ಹೀಲಿ, ‘ಕ್ರಿಕೆಟ್ ಆಸ್ಟ್ರೇಲಿಯಗೆ ಪೈನ್ ಅವರನ್ನೇ ನಾಯಕನಾಗಿ ಮುಂದುವರಿಸುವ ಇಚ್ಛೆಯಿತ್ತು. ಆದರೆ ಪೈನೀ ತಾನಾಗೇ ರಾಜೀನಾಮೆ ಸಲ್ಲಿಸಿ ಸ್ಥಾನವನ್ನು ತ್ಯಜಿಸಿದ್ದಾರೆ,’ ಎಂದಿದ್ದಾರೆ.

ನಾಯಕನ ಸ್ಥಾನಕ್ಕೆ ಸೀನಿಯರ್ ಆಟಗಾರ ಮತ್ತು ನಾಯಕತ್ವದ ಅನುಭವ ಇರುವ ಸ್ಟೀವ್ ಸ್ಮಿತ್ ಅವರನ್ನು ಪರಿಗಣಿಸುವುದು ಒಳಿತು ಅಂತ ಹೀಲಿ ಹೇಳುತ್ತಾರೆ.

‘ಸ್ಮಿತ್​ ರನ್ನು ಯಾಕೆ ಪರಿಗಣಿಸಬಾರದು? ಅವರು ನಾಯಕತ್ವಕ್ಕೆ ಮರಳುವುದನ್ನು ನೋಡಲೆ ನಾನು ಉತ್ಸುಕನಾಗಿದ್ದೇನೆ. ಸೋಂಬೇರಿ ನಾಯಕ ಅನಿಸಿಕೊಂಡಿದ್ದಕ್ಕೆ ಅವರು ದುಬಾರಿ ಬೆಲೆ ತೆರಬೇಕಾಯಿತು. ಅದಕ್ಕಾಗಿ ಅವರಲ್ಲಿ ಪಾಪಪ್ರಜ್ಞೆ ಕಾಡುತ್ತಿರಬಹುದು,’ ಎಂದು ಹೀಲಿ ಹೇಳಿದ್ದಾರೆ.

ನಿಮಗೆ ನೆನಪಿರಬಹುದು, 2018 ರಲ್ಲಿ ಆಸ್ಟ್ರೇಲಿಯ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾಗ ನಡೆದ ಚೆಂಡನ್ನು ವಿರೂಪಗೊಳಿಸಿದ ಪ್ರಕರಣವೊಂದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಬಳಿಕ ಸ್ಮಿತ್ ಎಲ್ಲ ಆವೃತ್ತಿಗಳ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು ಮತ್ತು ಅವರು ಹಾಗೂ ಆಗ ತಂಡದ ಉಪನಾಯಕರಾಗಿದ್ದ ಡೇವಿಡ್​ ವಾರ್ನರ್ ಅವರನ್ನು ಒಂದು ವರ್ಷದ ಅವಧಿಗೆ ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧಿಸಲಾಗಿತ್ತು.

‘ಅವತ್ತು ಮೈದಾನದಲ್ಲಿದ್ದ ಬಹಳಷ್ಟು ಜನ ಸ್ಮಿತ್​ ಚೆಂಡನ್ನು ಸ್ಕ್ರ್ಯಾಚ್​ ಮಾಡುತ್ತಿದ್ದರು ಅಂತ ಹೇಳಿದ್ದಾರೆ, ಆದರೆ ಒಬ್ಬ ನಾಯಕನಾಗಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಅಂತ ಗೊತ್ತಿರಲಿಲ್ಲವೇ? ಅದು ಅವರು ಎಸಗಿದ ಪ್ರಮಾದವಲ್ಲ ಅಪರಾಧ ಆಗಿತ್ತು ಮತ್ತು ಅದಕ್ಕಾಗಿ ಒಂದು ವರ್ಷವನ್ನು ಕಳೆದುಕೊಂಡರು,’ ಅಂತ ಹೀಲಿ ಹೇಳಿದ್ದಾರೆ.

ಆಸ್ಟ್ರೇಲಿಯದ ಪರ 119 ಟೆಸ್ಟ್​ ಮತ್ತು 168 ಒಡಿಐ ಗಳನ್ನಾಡಿದ ಹೀಲಿ, ಸ್ಮಿತ್ ಅವರನ್ನು ಪುನಃ ನಾಯಕನ ಸ್ಥಾನಕ್ಕೆ ಪರಿಗಣಿಸಲು ತಮ್ಮದೇನು ಅಭ್ಯಂತರವಿಲ್ಲ ಎಂದು ಹೇಳಿದ್ದಾರಲ್ಲದೆ ಅವರನ್ನು ಉಪನಾಯನಾಗಿ ನೇಮಕ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.

ಆಸ್ಟ್ರೇಲಿಯದ ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ಮುಂದಿನ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಕ್ರಿಕೆಟ್ ಆಸ್ಟ್ರೇಲಿಯ ಒಂದು ಜಂಟಿ ಸಮಿತಿಯನ್ನು ರಚಿಸಿದ್ದು, ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೀ, ಅದರ ಅಧ್ಯಕ್ಷ ರಿಚರ್ಡ್​ ಪ್ರಾಡೆನ್ಸ್ಟೀನ್ ಮತ್ತು ಮಂಡಳಿ ನಿರ್ದೇಶಕ ಮೆಲ್ ಜೋನ್ಸ್​ ಸಮಿತಿಯ ಸದಸ್ಯರಾಗಿದ್ದಾರೆ.

ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಲಾಗಿರುವ ಆಟಗಾರರ ಸಂದರ್ಶನವನ್ನು ಸಮಿತಿಯು ನಡೆಸಿ ಈ ಆಟಗಾರರಿಗೆ ಆಸ್ಟ್ರೇಲಿಯ ಪುರುಷರ ಕ್ರಿಕೆಟ್​ ತಂಡದ ಬಗ್ಗೆ ತಮ್ಮ ವಿಜನ್ ತಿಳಿಸುವಂತೆ ಹೇಳಲಿದೆ. ಬಳಿಕ ಅವರ ಯೋಜನೆ, ಅನಿಸಿಕೆಗಳನ್ನು ಸಿಎ ಮುಂದೆ ಕೊಂಡೊಯ್ಯಲಿದೆ. ಅಲ್ಲಿ ಪರಾಮರ್ಶೆ ನಡೆದ ಮೇಲೆ ಹೊಸ ನಾಯಕನ ಘೋಷಣೆಯಾಗುತ್ತದೆ.

ಇದನ್ನೂ ಓದಿ:    RCB: ನಾಯಕತ್ವ ತೊರೆದ ಕೊಹ್ಲಿ, ಕ್ರಿಕೆಟ್​ಗೆ ವಿದಾಯ ಹೇಳಿದ ಎಬಿಡಿ! ಯಾರಾಗ್ತಾರೆ ಆರ್​ಸಿಬಿ ಮುಂದಿನ ಕ್ಯಾಪ್ಟನ್?

Click on your DTH Provider to Add TV9 Kannada