ಪಾಕ್ ತಂಡದ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಕರ್ಸ್ಟನ್ ರಾಜೀನಾಮೆ

ಪಾಕಿಸ್ತಾನ್ ಸೀಮಿತ ಓವರ್​ಗಳ ತಂಡದ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಬೆನ್ನಲ್ಲೇ ಅತ್ತ ಪಾಕಿಸ್ತಾನ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ಗ್ಯಾರಿ ಕರ್ಸ್ಟನ್ ತ್ಯಜಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪಾಕ್ ತಂಡಕ್ಕೆ ಹೊಸ ಕೋಚ್ ನೇಮಕವಾಗಲಿದ್ದಾರೆ.

ಪಾಕ್ ತಂಡದ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಕರ್ಸ್ಟನ್ ರಾಜೀನಾಮೆ
Gary Kirsten
Follow us
|

Updated on: Oct 28, 2024 | 11:56 AM

ಪಾಕಿಸ್ತಾನ್ ತಂಡದ ಸೀಮಿತ ಓವರ್​ಗಳ ತಂಡಗಳ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಕರ್ಸ್ಟನ್ ರಾಜೀನಾಮೆ ನೀಡಿದ್ದಾರೆ. ಕರ್ಸ್ಟನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಕೆಲವು ಆಟಗಾರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಹೀಗಾಗಿ ಕೋಚ್ ಹುದ್ದೆಯನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನವೇ ಕರ್ಸ್ಟನ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ  ನವೆಂಬರ್ 4 ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿಲ್ಲ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೂಡ ಬದಲಿ ಕೋಚ್ ಆಯ್ಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದೆ ವರದಿಯಾಗಿತ್ತು.

ಇದೀಗ ಈ ವರದಿ ನಿಜವಾಗಿದ್ದು, ಕೇವಲ 6 ತಿಂಗಳಲ್ಲೇ ಪಾಕಿಸ್ತಾನ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಗ್ಯಾರಿ ಕರ್ಸ್ಟನ್ ಕೆಳಗಿಳಿದಿದ್ದಾರೆ. ಸೌತ್ ಆಫ್ರಿಕಾದ ಮಾಜಿ ಆಟಗಾರನ ಈ ನಿರ್ಧಾರಕ್ಕೆ ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಡುವೆ ಭಿನ್ನಾಭಿಪ್ರಾಯ.

ಪಾಕ್ ತಂಡದ ಉನ್ನತ-ಕಾರ್ಯಕ್ಷಮತೆಯ ತರಬೇತುದಾರರನ್ನಾಗಿ ಡೇವಿಡ್ ರೀಡ್ ಅವರನ್ನು ನೇಮಿಸುವಂತೆ ಕರ್ಸ್ಟನ್ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದರು. ಆದರೆ ಈ ಕೋರಿಕೆಗೆ ಪಾಕ್ ಕ್ರಿಕೆಟ್ ಮಂಡಳಿ ಒಲವು ತೋರಿಲ್ಲ. ಇದರಿಂದ ಪಿಸಿಬಿ ಹಾಗೂ ಕೋಚ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ.

ಅತ್ತ ಕೆಲ ಆಟಗಾರರ ಜೊತೆಗೂ ಗ್ಯಾರಿ ಕರ್ಸ್ಟನ್ ಉತ್ತಮ ಸಂಬಂಧ ಹೊಂದಿಲ್ಲ. ಈ ಬಗ್ಗೆ ಆಟಗಾರರು ಕೂಡ ಪಾಕ್ ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಕರ್ಸ್ಟನ್ ತಮ್ಮ ಹುದ್ದೆಗೆ ರಾಜೀನಾಮೆ ನಿರ್ಧರಿಸಿದ್ದಾರೆ. ಅದರಂತೆ ಇದೀಗ ಕೋಚ್ ಹುದ್ದೆಗೆ ಗುಡ್ ಬೈ ಹೇಳಿದ್ದಾರೆ.

ಗ್ಯಾರಿ ಕರ್ಸ್ಟನ್ ಈ ಹಿಂದೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಅದರಲ್ಲೂ 2011 ರಲ್ಲಿ ಕರ್ಸ್ಟನ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಇದಾದ ಬಳಿಕ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಆ ಬಳಿಕ ಗ್ಯಾರಿ ಕರ್ಸ್ಟನ್ ಐಪಿಎಲ್​ ಕೋಚ್ ಹುದ್ದೆಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು 2024 ರಲ್ಲಿ ಪಾಕ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾದ ಕರ್ಸ್ಟನ್ ನೇತೃತ್ವದಲ್ಲಿ ಪಾಕ್ ತಂಡವು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಐರ್ಲೆಂಡ್ ವಿರುದ್ದ ಟಿ20 ಸರಣಿ ಗೆದ್ದಿದ್ದ ಪಾಕ್ ತಂಡ ಆ ಬಳಿಕ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿತ್ತು.

ಇನ್ನು ಟಿ20 ವಿಶ್ವಕಪ್​ನಲ್ಲಿ ಯುಎಸ್​ಎ ಹಾಗೂ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು. ಇದೀಗ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬರುತ್ತಿದ್ದು, ಅದಕ್ಕೂ ಮುನ್ನ ಪಾಕ್ ಕ್ರಿಕೆಟ್ ಮಂಡಳಿ ಹೊಸ ಕೋಚ್​ನ ನೇಮಕ ಮಾಡುವ ಸಾಧ್ಯತೆಯಿದೆ.

ಪಾಕ್ ತಂಡದ ನೂತನ ಸಂಭಾವ್ಯ ಕೋಚ್​ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಹೆಸರು ಮುಂಚೂಣಿಯಲ್ಲಿದೆ. ಗಿಲೆಸ್ಪಿ ಈಗಾಗಲೇ ಪಾಕಿಸ್ತಾನ್ ಟೆಸ್ಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಸೀಮಿತ ಓವರ್​ ತಂಡಗಳ ಕೋಚ್ ಹುದ್ದೆ ಒಲಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಇದನ್ನೂ ಓದಿ: 4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

ಇವರ ಜೊತೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಅಕಿಬ್ ಜಾವೇದ್ ಹೆಸರು ಕೂಡ ಕೇಳಿ ಬರುತ್ತಿದ್ದು, ಹೀಗಾಗಿ ಗ್ಯಾರಿ ಕರ್ಸ್ಟನ್ ತಮ್ಮ ಹುದ್ದೆಗೆ ಗಿಲೆಸ್ಪಿ ಅಥವಾ ಅಕಿಬ್ ಹೊಸ ಕೋಚ್ ಆಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.