
ಕಳೆದ ವರ್ಷ ನ್ಯೂಜಿಲೆಂಡ್, ಈಗ ದಕ್ಷಿಣ ಆಫ್ರಿಕಾ ತಂಡಗಳು ಭಾರತಕ್ಕೆ ಬಂದು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು (Team India) ವೈಟ್‌ವಾಶ್ ಮಾಡಿವೆ. ಈ ಎರಡೂ ಸರಣಿಗಳಲ್ಲಿ ಟೀಂ ಇಂಡಿಯಾವನ್ನು ಗುರುವಾಗಿ ಮುನ್ನಡೆಸಿದ್ದು ಗೌತಮ್ ಗಂಭೀರ್ (Gautam Gambhir). ತವರಿನಲ್ಲಿ ಟೀಂ ಇಂಡಿಯಾವನ್ನು ಮಣಿಸುವುದು ಅಸಾಧ್ಯ ಎನ್ನುವ ಸಮಯದಲ್ಲಿ ಎರಡು ತಂಡಗಳು ಭಾರತಕ್ಕೆ ಬಂದು ಬಲಿಷ್ಠ ತಂಡವನ್ನು ಅವರದ್ದೇ ನೆಲದಲ್ಲಿ ಕ್ಲೀನ್ ಸ್ವೀಪ್ ಮಾಡುವುದೆಂದರೆ ಸುಲಭದ ಮಾತಲ್ಲ. ಆದರೆ ಅಂತಹ ಕಷ್ಟಕರ ಕೆಲಸವನ್ನು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮಾಡಿ ಮುಗಿಸಿವೆ. ಇತ್ತ ಟೀಂ ಇಂಡಿಯಾದ ಸೋಲಿಗೆ ಅನುಭವದ ಕೊರತೆ ಪ್ರಮುಖ ಕಾರಣ ಎನ್ನಬಹುದಾದರೂ, ತಂಡದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರ ಕೆಲವು ನಿರ್ಧಾರಗಳು ತಂಡದ ಕಳಪೆ ಪ್ರದರ್ಶನಕ್ಕೆ ಕಾರಣ ಎನ್ನಬಹುದು. ಹೀಗಾಗಿಯೇ ಟೆಸ್ಟ್ ತಂಡದ ಹೀನಾಯ ಪ್ರದರ್ಶನಕ್ಕೆ ಗಂಭೀರ್ ಅವರನ್ನೇ ನೇರ ಹೊಣೆ ಮಾಡಲಾಗುತ್ತಿದ್ದು, ಟೆಸ್ಟ್ ತಂಡದಿಂದ ಅವರನ್ನು ಹೊರಗಿಡಬೇಕು ಎಂಬ ಕೂಗು ಜೋರಾಗಿದೆ.
ಮೇಲೆ ಹೇಳಿದಂತೆ ಟೀಂ ಇಂಡಿಯಾ ತವರು ನೆಲದಲ್ಲಿ ಮತ್ತೊಂದು ಅವಮಾನಕರ ಸೋಲನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ಗುವಾಹಟಿ ಟೆಸ್ಟ್ ಪಂದ್ಯವನ್ನು 408 ರನ್‌ಗಳಿಂದ ಗೆದ್ದು, ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು ವೈಟ್‌ವಾಶ್ ಮಾಡಿದೆ. ಇದಕ್ಕೂ ಮೊದಲು ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 30 ರನ್‌ಗಳಿಂದ ಗೆದ್ದುಕೊಂಡಿದ್ದ ದಕ್ಷಿಣ ಆಫ್ರಿಕಾ, ಆತಿಥೇಯ ಭಾರತವನ್ನು ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ನಲ್ಲಿ 140 ರನ್‌ಗಳಿಗೆ ಆಲೌಟ್ ಮಾಡಿ 408 ರನ್‌ಗಳ ಭಾರಿ ಅಂತರದ ಜಯ ಸಾಧಿಸಿತು. 13 ತಿಂಗಳ ಅವಧಿಯಲ್ಲಿ ಭಾರತ ತಂಡವೊಂದು ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2024 ರ ಅಕ್ಟೋಬರ್-ನವೆಂಬರ್ನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವು ಭಾರತವನ್ನು 3-0 ಅಂತರದಿಂದ ಸೋಲಿಸಿತು.
IND vs SA: 6 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಟೆಸ್ಟ್ ಪಂದ್ಯ; ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ವಿವರ
ನ್ಯೂಜಿಲೆಂಡ್ ವಿರುದ್ಧ 0-3 ಅಂತರದಲ್ಲಿ ಸೋತಿದ್ದ ಟೀಂ ಇಂಡಿಯಾ, ಈಗ ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದಲ್ಲಿ ಸೋತಿದೆ. ಕೋಲ್ಕತ್ತಾ ಟೆಸ್ಟ್‌ನಲ್ಲಿ 30 ರನ್‌ಗಳಿಂದ ಸೋತ ನಂತರ, ಗುವಾಹಟಿ ಟೆಸ್ಟ್‌ನಲ್ಲಿಯೂ ಟೀಂ ಇಂಡಿಯಾ 408 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಕಳೆದ ವರ್ಷ ಗಂಭೀರ್ ಮೂರು ಸ್ವರೂಪಗಳಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ನೇಮಕಗೊಂಡ ನಂತರ ತವರಿನಲ್ಲಿ ನಡೆದ ಒಂಬತ್ತು ಪಂದ್ಯಗಳಲ್ಲಿ ಭಾರತ ತಂಡವು ಅನುಭವಿಸಿದ ಐದನೇ ಸೋಲು ಇದು. ಉಳಿದ ನಾಲ್ಕು ಗೆಲುವುಗಳು ಮಾತ್ರ ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್‌ನಂತಹ ದುರ್ಬಲ ತಂಡಗಳ ವಿರುದ್ಧ ಬಂದಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:46 pm, Wed, 26 November 25