ಅಫ್ಘಾನಿಸ್ತಾನ್ ತಂಡದ ಯುವ ವೇಗಿ ನವೀನ್ ಉಲ್ ಹಕ್ (Naveen-ul-Haq) ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿರುವ ನವೀನ್ಗೆ ತಂಡ ಮೆಂಟರ್ ಗೌತಮ್ ಗಂಭೀರ್ (Gautam Gambhir) ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನವೀನ್ ಉಲ್ ಹಕ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಗಂಭೀರ್, ಹುಟ್ಟುಹಬ್ಬದ ಶುಭಾಶಯಗಳು ನವೀನ್ ಉಲ್ ಹಕ್. ನಿನ್ನಂತಹ ವ್ಯಕ್ತಿಗಳು ತುಂಬಾ ಕಡಿಮೆ. ಎಂದಿಗೂ ನೀ ಬದಲಾಗಬೇಡ ಎಂದು ಹಾರೈಸಿದ್ದಾರೆ.
ಇದೀಗ ಗೌತಮ್ ಗಂಭೀರ್ ಅವರ ಈ ಶುಭಾಶಯ ವೈರಲ್ ಆಗಿದೆ. ಇದಕ್ಕೆ ಒಂದು ಕಾರಣ ವಿರಾಟ್ ಕೊಹ್ಲಿ ಅಭಿಮಾನಿಗಳು ಎಂದರೆ ತಪ್ಪಾಗಲಾರದು. ಏಕೆಂದರೆ ಗಂಭೀರ್ ಅವರ ಈ ಪೋಸ್ಟ್ಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇವರಲ್ಲಿ ಕೆಲವರು ಗಂಭೀರ್ ಅವರನ್ನು ಕಿಚಾಯಿಸಿದರೆ, ಮತ್ತೆ ಕೆಲವರು ನವೀನ್ ಉಲ್ ಹಕ್ ಅವರ ಕಾಲೆಳೆದಿದ್ದಾರೆ.
ಐಪಿಎಲ್ 2023 ರಲ್ಲಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ ನಡುವೆ ವಾಕ್ಸಮರ ನಡೆದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು ಜಯ ಸಾಧಿಸಿದಾಗ ಗೌತಮ್ ಗಂಭೀರ್ ಆರ್ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚಿಕೊಂಡು ಇರುವಂತೆ ಸನ್ನೆ ಮಾಡಿದ್ದರು.
ಇದಾದ ಬಳಿಕ ಲಕ್ನೋನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇದೇ ಮಾದರಿಯಲ್ಲಿ ತಿರುಗೇಟು ನೀಡಿದ್ದರು. ಇದರ ನಡುವೆ ವಿರಾಟ್ ಕೊಹ್ಲಿ ಲಕ್ನೋ ತಂಡದ ನವೀನ್ ಉಲ್ ಹಕ್ ಅವರನ್ನು ಗುರಾಯಿಸಿದ್ದರು.
ಇನ್ನು ಪಂದ್ಯ ಮುಗಿದ ಬಳಿಕ ಹಸ್ತಲಾಘವ ನೀಡುವ ವೇಳೆ ನವೀನ್ ಉಲ್ ಹಕ್ ಕೊಹ್ಲಿಯ ಕೈ ಎಳೆದಾಡಿ ಜಗಳಕ್ಕಿಳಿದಿದ್ದರು. ಇದೇ ವೇಳೆ ಗೌತಮ್ ಗಂಭೀರ್ ಜಗಳಕ್ಕೆ ಎಂಟ್ರಿ ಕೊಟ್ಟಿದ್ದರು. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗಂಭೀರ್ ಹಾಗೂ ಕೊಹ್ಲಿ ಮೈದಾನದಲ್ಲೇ ಕಿತ್ತಾಡಿಕೊಂಡಿದ್ದರು.
ಇದನ್ನೂ ಓದಿ: ನಾನಲ್ಲ, ಜಗಳ ಶುರು ಮಾಡಿದ್ದೇ ಕೊಹ್ಲಿ ಎಂದ ನವೀನ್ ಉಲ್ ಹಕ್
ಈ ಅನುಚಿತ ವರ್ತನೆಗೆ ವಿರಾಟ್ ಕೊಹ್ಲಿ ಹಾಗೂ ಗಂಭೀರ್ಗೆ ಬಿಸಿಸಿಐ ಪಂದ್ಯದ ಶೇ.100 ರಷ್ಟು ಮೊತ್ತ ದಂಡ ವಿಧಿಸಿದ್ದರು. ಮತ್ತೊಂದೆಡೆ ನವೀನ್ ಉಲ್ ಹಕ್ ಪಂದ್ಯ ಶೇ.50 ರಷ್ಟು ಮೊತ್ತ ದಂಡ ಪಾವತಿಸಬೇಕಾಯಿತು. ಇದೀಗ ಗೌತಮ್ ಗಂಭೀರ್ ಯುವ ಕ್ರಿಕೆಟಿಗ ನವೀನ್ ಉಲ್ ಹಕ್ಗೆ ನೀನು ಬದಲಾಗಬೇಡ ಎಂದು ಶುಭಾಶಯ ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ.