
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 46.4 ಓವರ್ಗಳಲ್ಲಿ 236 ರನ್ಗಳಿಗೆ ಆಲೌಟ್ ಆಗಿತ್ತು. ಹೀಗೆ ಆಸೀಸ್ ಪಡೆ ಬಹುಬೇಗನೆ ಆಲೌಟ್ ಆಗಲು ಮುಖ್ಯ ಕಾರಣ ಯುವ ವೇಗಿ ಹರ್ಷಿತ್ ರಾಣಾ.
ಈ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದ ಹರ್ಷಿತ್ ರಾಣಾ 8.4 ಓವರ್ಗಳಲ್ಲಿ ಕೇವಲ 39 ರನ್ಗಳಿಗೆ 4 ವಿಕೆಟ್ ಕಬಳಿಸಿದ್ದರು. ಆದರೆ ಈ ಪ್ರದರ್ಶನಕ್ಕೆ ಪರೋಕ್ಷ ಕಾರಣ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಏಕೆಂದರೆ ಈ ಮ್ಯಾಚ್ಗೂ ಮುನ್ನ ಗಂಭೀರ್ ಕಡೆಯಿಂದ ಹರ್ಷಿತ್ ರಾಣಾಗೆ ಖಡಕ್ ವಾರ್ನಿಂಗ್ ಲಭಿಸಿತ್ತು.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಅದರಲ್ಲೂ ಕೆಲ ಮಾಜಿ ಆಟಗಾರರು ಗೌತಮ್ ಗಂಭೀರ್ ಅವರನ್ನು ಗುರಿಯಾಗಿಸಿ ಹರ್ಷಿತ್ ರಾಣಾ ಆಯ್ಕೆ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು.
ಇದಕ್ಕೆ ಉತ್ತರ ನೀಡಬೇಕಾದ ಹರ್ಷಿತ್ ರಾಣಾ ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ರಾಣಾ ಮೇಲೆ ಗಂಭೀರ್ಗೆ ಆಕ್ರೋಶವಿತ್ತು. ಇದಾಗ್ಯೂ ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಲು ಗೌತಮ್ ಗಂಭೀರ್ ನಿರ್ಧರಿಸಿದ್ದರು.
ಆದರೆ ಅದಕ್ಕೂ ಮುನ್ನ ಹರ್ಷಿತ್ ರಾಣಾ ಅವರನ್ನು ತಮ್ಮ ಬಳಿ ಕರೆದಿದ್ದ ಗೌತಮ್ ಗಂಭೀರ್, ಇದುವೇ ಕೊನೆ… ಉತ್ತಮ ಪ್ರದರ್ಶನ ನೀಡಲೇಬೇಕು. ಇಲ್ಲದಿದ್ದರೆ ತಂಡದಿಂದ ಕೈ ಬಿಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಈ ವಾರ್ನಿಂಗ್ ಫಲವಾಗಿ ಮೂರನೇ ಏಕದಿನ ಪಂದ್ಯದಲ್ಲಿ ಹರ್ಷಿತ್ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ರಾಣಾ ಅವರ ಬಾಲ್ಯದ ಕೋಚ್ ಶರ್ವಣ್ ಬಹಿರಂಗಪಡಿಸಿದ್ದಾರೆ.
ಮೂರನೇ ಪಂದ್ಯಕ್ಕೂ ಮುನ್ನ ಬಾಲ್ಯದ ಕೋಚ್ ಶರ್ವಣ್ ಅವರಿಗೆ ಕರೆ ಮಾಡಿದ್ದ ಹರ್ಷಿತ್ ರಾಣಾ, ಒತ್ತಡದಲ್ಲಿರುವುದಾಗಿ ತಿಳಿಸಿದ್ದರು. ಈ ವೇಳೆ ಶರ್ವಣ್ ಟೀಮ್ ಇಂಡಿಯಾ ವೇಗಿಗೆ ಆತ್ಮ ವಿಶ್ವಾಸ ತುಂಬಿದ್ದರು. ಇದೇ ವೇಳೆ ಗೌತಮ್ ಗಂಭೀರ್ ನೀಡಿರುವ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ.
ಈ ವೇಳೆ ನೀ ನಿನ್ನ ಮೇಲೆ ನಂಬಿಕೆಯಿಡು. ಗೌತಮ್ ಗಂಭೀರ್ಗೆ ಪ್ರತಿಭೆಯನ್ನು ಹೇಗೆ ಗುರುತಿಸಬೇಕೆಂದು ಗೊತ್ತಿದೆ. ಹೀಗಾಗಿ ಅವರು ನಿನ್ನನ್ನು ಬೆಂಬಲಿಸುತ್ತಾರೆ. ಅವರು ಅನೇಕ ಕ್ರಿಕೆಟಿಗರನ್ನು ಬೆಂಬಲಿಸಿದ್ದಾರೆ, ಹಾಗೆ ಬೆಂಬಲಿಸಿದ ಆಟಗಾರರು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಗೌತಮ್ ಗಂಭೀರ್ ಅವರ ಗದರಿಕೆಯನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವಂತೆ ಸೂಚಿಸಿದ್ದೆ ಎಂದು ಶರ್ವಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೀಗೂ ಉಂಟೆ… ಹೀಗೊಂದು ‘ನತದೃಷ್ಟ’ದ ವಿಶ್ವ ದಾಖಲೆ
ಅದರಂತೆ ಮೂರನೇ ಏಕದಿನ ಪಂದ್ಯದಲ್ಲಿ ಬೌನ್ಸರ್ ಎಸೆತಗಳ ಮೂಲಕ ಗಮನ ಸೆಳೆದ ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ಗೌತಮ್ ಗಂಭೀರ್ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ತನ್ನ ಆಯ್ಕೆಯನ್ನು ಟೀಕಿಸಿದವರಿಗೆ ಪ್ರದರ್ಶನದ ಮೂಲಕವೇ ಉತ್ತರ ನೀಡಿದ್ದಾರೆ.