IND vs ENG: ‘ಸ್ವಲ್ಪ ಸಾಮಾನ್ಯ ಜ್ಞಾನ ಬಳಸಿ’; ಇಂಗ್ಲೆಂಡ್‌ ತಂಡಕ್ಕೆ ಮಾಜಿ ನಾಯಕನ ಸಲಹೆ

India vs England Test Series: ಜೆಫ್ರಿ ಬಾಯ್ಕಾಟ್ ಅವರು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ "ಬಾಝ್‌ಬಾಲ್" ಕ್ರಿಕೆಟ್ ಅನ್ನು ಬಿಟ್ಟು ಸಾಮಾನ್ಯ ಜ್ಞಾನದೊಂದಿಗೆ ಆಡುವಂತೆ ಸಲಹೆ ನೀಡಿದ್ದಾರೆ. ಬಾಝ್‌ಬಾಲ್‌ನಿಂದಾಗಿ ಗೆಲುವುಗಳಿಗಿಂತ ಹೆಚ್ಚಾಗಿ ಡ್ರಾಗಳು ಆಗುತ್ತಿರುವುದನ್ನು ಅವರು ಟೀಕಿಸಿದ್ದಾರೆ. 2027ರ WTC ಫೈನಲ್‌ಗೂ ಅರ್ಹತೆ ಪಡೆಯುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ. ಇಂಗ್ಲೆಂಡ್ ತನ್ನ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬುದು ಬಾಯ್ಕಾಟ್ ಅವರ ಮುಖ್ಯ ಅಭಿಪ್ರಾಯ.

IND vs ENG: ‘ಸ್ವಲ್ಪ ಸಾಮಾನ್ಯ ಜ್ಞಾನ ಬಳಸಿ’; ಇಂಗ್ಲೆಂಡ್‌ ತಂಡಕ್ಕೆ ಮಾಜಿ ನಾಯಕನ ಸಲಹೆ
England Cricket Team

Updated on: Jun 19, 2025 | 5:54 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ ಲೀಡ್ಸ್‌ನಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯಕ್ಕಾಗಿ ಆತಿಥೇಯ ಇಂಗ್ಲೆಂಡ್ ಈಗಾಗಲೇ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಆದರೆ ಟೆಸ್ಟ್ ಪಂದ್ಯ ಪ್ರಾರಂಭವಾಗುವ ಮೊದಲೇ ಇಂಗ್ಲೆಂಡ್‌ ತಂಡಕ್ಕೆ ತಂಡದ ಮಾಜಿ ನಾಯಕ ಜೆಫ್ರಿ ಬಾಯ್ಕಾಟ್ (Geoffrey Boycott) ಅವರಿಂದ ಮಹತ್ವದ ಸಲಹೆಯೊಂದು ಬಂದಿದ್ದು, ಭಾರತದ ವಿರುದ್ಧ ಸಾಮಾನ್ಯ ಜ್ಞಾನವನ್ನು ಬಳಸುವಂತೆ ಕೇಳಿಕೊಂಡಿದ್ದಾರೆ. ವಾಸ್ತವವಾಗಿ, ಇಂಗ್ಲೆಂಡ್‌ನ ಬಾಝ್ ಬಾಲ್ ಕ್ರಿಕೆಟ್ ಜೆಫ್ರಿ ಬಾಯ್ಕಾಟ್ ಅವರ ಅಸಮಾಧಾನಕ್ಕೆ ಕಾರಣವಾಗಿದ್ದು, ಅದನ್ನೆಲ್ಲ ಪಕ್ಕಕ್ಕಿಟ್ಟು, ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ಸಾಮಾನ್ಯ ಜ್ಞಾನವನ್ನು ಬಳಸುವಂತೆ ಕೇಳಿಕೊಂಡಿದ್ದಾರೆ.

ಇಂಗ್ಲೆಂಡ್ ಸಾಮಾನ್ಯ ಜ್ಞಾನ ಬಳಸಬೇಕು- ಬಾಯ್ಕಾಟ್

ದಿ ಟೆಲಿಗ್ರಾಫ್‌ನ ಅಂಕಣದಲ್ಲಿ ಜೆಫ್ರಿ ಬಾಯ್ಕಾಟ್, ‘ಇಂಗ್ಲೆಂಡ್ ಬಾಝ್ ಬಾಲ್ ಕ್ರಿಕೆಟ್ ಮರೆತು ಸಾಮಾನ್ಯ ಜ್ಞಾನದತ್ತ ಗಮನ ಹರಿಸಬೇಕು. ಅಲ್ಲದೆ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮತ್ತು 2027 ರ ಡಬ್ಲ್ಯೂಟಿಸಿ ಫೈನಲ್ ತಲುಪುವತ್ತ ಗಮನಹರಿಸಬೇಕು. ಇಂಗ್ಲೆಂಡ್ ತಂಡವು ಸಾಮಾನ್ಯ ಜ್ಞಾನವನ್ನು ಬಳಸಿದರೆ ಭಾರತವನ್ನು ಸೋಲಿಸಬಹುದು. ಪ್ರಸ್ತುತ ಇಂಗ್ಲೆಂಡ್‌ ತಂಡದ ಬಾಝ್ ಬಾಲ್ ಕ್ರಿಕೆಟ್ ನೋಡಲು ತುಂಬಾ ರೋಮಾಂಚಕಾರಿ ಮತ್ತು ಮೋಜಿನ ಸಂಗತಿಯಾಗಿದೆ. ಆದರೆ ಅದರ ಪರಿಣಾಮವೆಂದರೆ ತಂಡಕ್ಕೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಸಹ ಸಾಧ್ಯವಾಗುತ್ತಿಲ್ಲ.

ಬಾಝ್ ಬಾಲ್ ನಿರಾಶೆ ಮೂಡಿಸಿದೆ

ಇಂಗ್ಲೆಂಡ್‌ನ ಟೆಸ್ಟ್ ತಂಡದಲ್ಲಿ ಬಾಝ್ ಬಾಲ್ ಕ್ರಿಕೆಟ್ ಕೊರೊನಾ ಸಮಯದಲ್ಲಿ ಶುರುವಾಯಿತು. ಅಂದರೆ, ಸ್ಟೋಕ್ಸ್ ಮತ್ತು ಮೆಕಲಮ್ ನಾಯಕ ಮತ್ತು ತರಬೇತುದಾರರಾಗಿ ಜುಗಲ್‌ಬಂದಿ ಪ್ರಾರಂಭವಾದಾಗಿನಿಂದ ಇಂಗ್ಲೆಂಡ್ ತಂಡದಲ್ಲಿ ಬಾಝ್ ಬಾಲ್ ಕ್ರಿಕೆಟ್ ಆರಂಭವಾಯಿತು. ಇಂಗ್ಲೆಂಡ್‌ನ ಈ ಬಾಝ್ ಬಾಲ್ ಕ್ರಿಕೆಟ್ ಪ್ರೇಕ್ಷಕರಿಗೆ ಆಕರ್ಷಕವಾಗಿತ್ತಾದರೂ ಅದು ಇಂಗ್ಲೆಂಡ್‌ ಪ್ರದರ್ಶನದ ಮೇಲೆ ಸರಿಯಾದ ಪರಿಣಾಮ ಬೀರುವಂತೆ ಕಾಣಲಿಲ್ಲ. ಬಾಝ್ ಬಾಲ್ ಕ್ರಿಕೆಟ್ ಅಳವಡಿಸಿಕೊಂಡ ನಂತರ, ಇಂಗ್ಲೆಂಡ್‌ ತಂಡದ ಗೆದ್ದಿದ್ದಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನು ಡ್ರಾ ಮಾಡಿಕೊಂಡಿದೆ.

ಹೀಗಾಗಿ ಇಂಗ್ಲೆಂಡ್‌ನ ಗಮನ ಗೆಲ್ಲುವುದರ ಮೇಲೆ ಇರಬೇಕು, ತಾವು ಎಷ್ಟು ಉತ್ತಮರು ಎಂಬುದನ್ನು ಪ್ರದರ್ಶಿಸುವ ಮೇಲಲ್ಲ ಎಂದು ಜೆಫ್ರಿ ಬಾಯ್ಕಾಟ್ ಒತ್ತಿ ಹೇಳಿದ್ದಾರೆ. ಕಳೆದ ಮೂರು ಡಬ್ಲ್ಯೂಟಿಸಿ ಫೈನಲ್‌ಗಳನ್ನು ಇಂಗ್ಲೆಂಡ್‌ನಲ್ಲಿ ನಡೆಸಲಾಗಿದೆ ಆದರೆ ಇಂಗ್ಲಿಷ್ ತಂಡವು ಒಂದಕ್ಕೂ ಸಹ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ, ಇದು ಮುಜುಗರದ ಸಂಗತಿ. ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ಡಬ್ಲ್ಯೂಟಿಸಿ ಫೈನಲ್‌ಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವುದು ಮತ್ತು ಅದಕ್ಕೆ ಅರ್ಹತೆ ಪಡೆಯುವುದು ತಂಡದ ಪ್ರಯತ್ನವಾಗಿರಬೇಕು ಎಂದಿದ್ದಾರೆ.

IND vs ENG: ಭಾರತ- ಇಂಗ್ಲೆಂಡ್‌ ಟೆಸ್ಟ್ ಸರಣಿ ಯಾವಾಗ ಆರಂಭ? ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ಆಸ್ಟ್ರೇಲಿಯಾ ಇಲ್ಲಿಯವರೆಗೆ ಎರಡು ಬಾರಿ WTC ಫೈನಲ್ ಪ್ರವೇಶಿಸಿವೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಲಾ ಒಮ್ಮೆ ಗೆದ್ದಿವೆ. ಆದರೆ ಬಾಝ್ ಬಾಲ್ ಕ್ರಿಕೆಟ್​ನೊಂದಿಗೆ ಮುನ್ನಡೆಯುತ್ತಿರುವ ಇಂಗ್ಲೆಂಡ್‌ಗೆ ಇಲ್ಲಿಯವರೆಗೆ ಫೈನಲ್​ಗೇರಲು ಸಾಧ್ಯವಾಗಿಲ್ಲ. ಅಂದರೆ, ಈಗ ಬಾಝ್ ಬಾಲ್ ಕ್ರಿಕೆಟ್ ಅನ್ನು ದೂರವಿಡುವ ಮತ್ತು ಸಾಮಾನ್ಯ ಜ್ಞಾನದೊಂದಿಗೆ ಮುಂದುವರಿಯುವ ಸಮಯ ಬಂದಿದೆ ಎಂದು ಜೆಫ್ರಿ ಬಾಯ್ಕಾಟ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ