ಏಕದಿನ ವಿಶ್ವಕಪ್ಗೂ ಮುನ್ನ ನಡೆಯಲಿರುವ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಕಾಣಿಸಿಕೊಳ್ಳುವುದು ಅನುಮಾನ. ಪಾದದ ನೋವಿನಿಂದ ಬಳಲುತ್ತಿರುವ ಮ್ಯಾಕ್ಸಿ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಇದೇ ಗಾಯದ ಕಾರಣ ಮ್ಯಾಕ್ಸ್ವೆಲ್ ಇತ್ತೀಚೆಗೆ ನಡೆದ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಇದೀಗ ಸೆಪ್ಟೆಂಬರ್ ಅಂತ್ಯದ ವೇಳೆ ಅವರು ಸಂಪೂರ್ಣ ಗುಣಮುಖರಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಭಾರತದ ವಿರುದ್ಧದ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಏಕದಿನ ವಿಶ್ವಕಪ್ನಿಂದ ಹೊರಕ್ಕೆ?
ಭಾರತ-ಆಸ್ಟ್ರೇಲಿಯಾ ನಡುವಣ 3 ಪಂದ್ಯಗಳ ಏಕದಿನ ಸರಣಿಯು ಸೆಪ್ಟೆಂಬರ್ 22 ರಿಂದ ಶುರುವಾಗಲಿದೆ. ಈ ಸರಣಿಯು ಮುಗಿಯುವುದು ಸೆಪ್ಟೆಂಬರ್ 27 ರಂದು. ಇದರ ಬೆನ್ನಲ್ಲೇ ಅಂದರೆ, ಸೆಪ್ಟೆಂಬರ್ 29 ರಿಂದ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯಗಳು ಆರಂಭವಾಗಲಿದೆ.
ಆದರೆ ಇತ್ತ ಟೀಮ್ ಇಂಡಿಯಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿರುವ ಗ್ಲೆನ್ ಮ್ಯಾಕ್ಸ್ವೆಲ್ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದ್ದು, ಆಸ್ಟ್ರೇಲಿಯಾ ತಂಡವು ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8 ರಂದು ಆಡಲಿದೆ. ಈ ವೇಳೆಗೆ ಗ್ಲೆನ್ ಮ್ಯಾಕ್ಸ್ವೆಲ್ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಬಹುದು.
ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿ ವೇಳಾಪಟ್ಟಿ:
ಸ್ಟಾರ್ ಆಟಗಾರರಿಗೆ ಗಾಯ:
ಪ್ರಸ್ತುತ ಆಸ್ಟ್ರೇಲಿಯಾದಲ್ಲಿನ ಸ್ಟಾರ್ ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ತಂಡದ ನಾಯಕ ಪ್ಯಾಟ್ ಕಮಿನ್ಸ್, ಉಪನಾಯಕ ಸ್ಟೀವ್ ಸ್ಮಿತ್ ಗಾಯದ ಹಿನ್ನಲೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಇನ್ನು ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಗಾಯದ ಕಾರಣ ಆ್ಯಶಸ್ ಸರಣಿ ಬಳಿಕ ಯಾವುದೇ ಪಂದ್ಯವಾಡಿಲ್ಲ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಈ ಎಲ್ಲಾ ಆಟಗಾರರು ಭಾರತದ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡರೆ ಮಾತ್ರ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದನ್ನು ಖಚಿತಪಡಿಸಿಕೊಳ್ಳಬಹುದು. ಆ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಿಂದ ಹೊರಗುಳಿಯಬಹುದು.