AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CPL 2023: 12 ಸಿಕ್ಸರ್‌ ಸಹಿತ 45 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ದೈತ್ಯ ರಹಕೀಮ್ ಕಾರ್ನ್‌ವಾಲ್..!

Rahkeem Cornwall: ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿಂಡೀಸ್ ತಂಡದ ಸ್ಫೋಟಕ ಬ್ಯಾಟರ್ ರಹಕೀಮ್ ಕಾರ್ನ್‌ವಾಲ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಲೀಗ್​ನಲ್ಲಿ ಬಾರ್ಬಡೋಸ್ ರಾಯಲ್ಸ್‌ ಕಣಕ್ಕಿಳಿಯುತ್ತಿರುವ ಕಾರ್ನ್‌ವಾಲ್ ಪಂದ್ಯಾವಳಿಯ 18 ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 45 ಎಸೆತಗಳ ಶತಕ ಸಿಡಿಸಿದ್ದಾರೆ.

CPL 2023: 12 ಸಿಕ್ಸರ್‌ ಸಹಿತ 45 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ದೈತ್ಯ ರಹಕೀಮ್ ಕಾರ್ನ್‌ವಾಲ್..!
ರಹಕೀಮ್ ಕಾರ್ನ್‌ವಾಲ್
ಪೃಥ್ವಿಶಂಕರ
|

Updated on: Sep 04, 2023 | 2:39 PM

Share

ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (Caribbean Premier League) ವಿಂಡೀಸ್ ತಂಡದ ಸ್ಫೋಟಕ ಬ್ಯಾಟರ್ ರಹಕೀಮ್ ಕಾರ್ನ್‌ವಾಲ್ (Rahkeem Cornwall) ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಲೀಗ್​ನಲ್ಲಿ ಬಾರ್ಬಡೋಸ್ ರಾಯಲ್ಸ್‌ ಕಣಕ್ಕಿಳಿಯುತ್ತಿರುವ ಕಾರ್ನ್‌ವಾಲ್ ಪಂದ್ಯಾವಳಿಯ 18 ನೇ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ (SKN Patriots vs Barbados Royals) ವಿರುದ್ಧದ ಪಂದ್ಯದಲ್ಲಿ ಕೇವಲ 45 ಎಸೆತಗಳ ಶತಕ ಸಿಡಿಸಿದ್ದಾರೆ. ಆದರೆ ಇದೇ ಕಾರ್ನ್ವಾಲ್ ಪಂದ್ಯಾವಳಿಯ ಹಿಂದಿನ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ರನ್ಔಟ್ ಆಗುವ ಮೂಲಕ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು. ಆದರೆ ಇದೀಗ ಸ್ಫೋಟಕ ಶತಕ ಸಿಡಿಸುವ ಮೂಲಕ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ.

221 ರನ್​ಗಳ ಟಾರ್ಗೆಟ್

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡ ಆರಂಭಿಕರಿಬ್ಬರ ಅರ್ಧಶತಕ ಹಾಗೂ ನಾಯಕನ ಸ್ಫೋಟಕ ಅರ್ಧಶತಕದ ನೆರವಿನಿಂದ 221 ರನ್​ಗಳ ದಾಖಲೆಯ ಗುರಿ ನೀಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಆಂಡ್ರೆ ಫ್ಲೆಚರ್ 37 ಎಸೆತಗಳಲ್ಲಿ 56 ರನ್ ಬಾರಿಸಿದರೆ, ಮತ್ತೊಬ್ಬ ಆರಂಭಿಕ ವಿಲ್ ಸ್ಮಿದ್ 36 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 63 ರನ್ ಬಾರಿಸಿದರು. ಈ ಇಬ್ಬರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿದ ನಾಯಕ ಶೆರ್ಫೇನ್ ರುದರ್ಫೋರ್ಡ್ 27 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ ಅಜೇಯ 65 ರನ್ ಸಿಡಿಸಿದರು.

ಓಡುವ ಬದಲು ಜಾಗಿಂಗ್; ಮೊದಲ ಎಸೆತದಲ್ಲೇ ರನೌಟ್ ಆದ 150 ಕೆಜಿ ತೂಕದ ಬ್ಯಾಟರ್! ವಿಡಿಯೋ ನೋಡಿ

ಇನ್ನು ಈ ಗುರಿ ಬೆನ್ನಟ್ಟಿದ ರಾಯಲ್ಸ್ ತಂಡ ಆರಂಭಿಕ ಕಾರ್ನ್‌ವಾಲ್ ಅವರ ಸ್ಫೋಟಕ ಶತಕ ಹಾಗೂ ನಾಯಕ ರೋವ್ಮನ್ ಪೊವೆಲ್ ಅವರ ಅಜೇಯ 49 ರನ್​ಗಳ ಇನ್ನಿಂಗ್ಸ್​ನಿಂದಾಗಿ ಕೇವಲ 18.2 ಓವರ್​ಗಳಲ್ಲಿ ದಾಖಲೆಯ ಗುರಿಯನ್ನು ಬೆನ್ನಟ್ಟಿತು. ತಂಡದ ಪರ ಶತಕದ ಇನ್ನಿಂಗ್ಸ್ ಆಡಿದ ದೈತ್ಯ ಕಾರ್ನ್‌ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

4 ಬೌಂಡರಿ, 12 ಸಿಕ್ಸರ್ ಸಹಿತ ಶತಕ

ರಾಯಲ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಕಾರ್ನ್‌ವಾಲ್, ಮತ್ತೊಬ್ಬ ಆರಂಭಿಕ ಮೇಯರ್ಸ್​ ಅವರೊಂದಿಗೆ ಮೊದಲ ವಿಕೆಟ್​ಗೆ 41 ರನ್​ಗಳ ಜೊತೆಯಾಟ ಹಂಚಿಕೊಂಡರು. ಆ ಬಳಿಕ ಇವಾನ್ಸ್ ಜೊತೆಗೆ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಕಾರ್ನ್‌ವಾಲ್ ಕೇವಲ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 12 ಬೃಹತ್ ಸಿಕ್ಸರ್‌ಗಳು ಸೇರಿದಂತೆ 102 ರನ್ ಚಚ್ಚಿದರು. ಅದರಲ್ಲೂ ಕಾರ್ನ್‌ವಾಲ್ ಬಾರಿಸಿದ ಎರಡು ಸಿಕ್ಸರ್​ಗಳು 110 ಮತ್ತು 111 ಮೀಟರ್‌ಗಳಷ್ಟು ದೂರ ಹೋಗಿ ಬಿದ್ದವು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ