AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashes 2025-26: ಇಂಗ್ಲೆಂಡ್‌ ಒಂದೇ ಒಂದು ಪಂದ್ಯವನ್ನು ಗೆಲ್ಲುವುದಿಲ್ಲ ಎಂದ ಆಸೀಸ್ ಲೆಜೆಂಡರಿ ವೇಗಿ

Ashes 2025-26: ಗ್ಲೆನ್ ಮೆಕ್‌ಗ್ರಾತ್ ಅವರು ಆಸ್ಟ್ರೇಲಿಯಾ ಆಶಸ್ ಸರಣಿಯನ್ನು 5-0 ಅಂತರದಿಂದ ಗೆಲ್ಲುವುದಾಗಿ ಭವಿಷ್ಯ ನುಡಿದಿದ್ದಾರೆ. ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗ ದುರ್ಬಲವಾಗಿದ್ದು, ಆಸ್ಟ್ರೇಲಿಯಾದ ವೇಗಿಗಳು ಮತ್ತು ನಾಥನ್ ಲಿಯಾನ್ ಅವರ ಸ್ಪಿನ್ ದಾಳಿಗೆ ಇಂಗ್ಲೆಂಡ್ ಸೆಣಸಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Ashes 2025-26: ಇಂಗ್ಲೆಂಡ್‌ ಒಂದೇ ಒಂದು ಪಂದ್ಯವನ್ನು ಗೆಲ್ಲುವುದಿಲ್ಲ ಎಂದ ಆಸೀಸ್ ಲೆಜೆಂಡರಿ ವೇಗಿ
Aus Vs Eng
ಪೃಥ್ವಿಶಂಕರ
|

Updated on: Aug 08, 2025 | 8:39 PM

Share

ತನ್ನ ತವರು ನೆಲದಲ್ಲಿ ಟೀಂ ಇಂಡಿಯಾ (Team India) ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದ್ದ ಇಂಗ್ಲೆಂಡ್‌ ತಂಡಕ್ಕೆ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಪಡೆದುಕೊಂಡಿದ್ದ ಆಂಗ್ಲ ತಂಡಕ್ಕೆ ಸರಣಿ ಗೆಲ್ಲುವ ಅವಕಾಶ ಸಾಕಷ್ಟಿದ್ದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ ಸರಣಿಯನ್ನು 2-2 ರಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಯಿತು. ಇದೀಗ ತವರಿನಲ್ಲಿ ಸರಣಿ ಗೆಲ್ಲದ ಮುಜುಗರಕ್ಕೊಳಗಾಗಿರುವ ಆಂಗ್ಲರಿಗೆ, ಆಸ್ಟ್ರೇಲಿಯಾದ ಭಯ ಶುರುವಾಗಿದೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾತ್ (Glenn McGrath), ಆಶಸ್ ಸರಣಿಯಲ್ಲಿ (Ashes Series 2025) ಇಂಗ್ಲೆಂಡ್‌ ತಂಡ ಒಂದೇ ಒಂದು ಪಂದ್ಯವನ್ನು ಗೆಲ್ಲುವುದಿಲ್ಲ ಎಂಬ ಭವಿಷ್ಯ ಬೇರೆ ನುಡಿದಿದ್ದಾರೆ.

ವಾಸವಾಗಿದ್ದಾರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಪ್ರತಿಷ್ಠಿತ ಆಶಸ್ ಸರಣಿ ನವೆಂಬರ್ 21 ರಿಂದ ಪ್ರಾರಂಭವಾಗಲಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ. ಆಶಸ್ ಸರಣಿಯು ಎರಡೂ ತಂಡಗಳಿಗೆ ಯಾವಾಗಲೂ ಪ್ರತಿಷ್ಠೆಯ ಕಣವಾಗಿದೆ. ಈ ಸರಣಿಗೆ ಇನ್ನೂ ಬಹಳ ಸಮಯವಿದೆ. ಆದರೆ ಅದಕ್ಕೂ ಮೊದಲು, ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಕ್‌ಗ್ರಾತ್ ಆಶಸ್ ಸರಣಿಯ ಬಗ್ಗೆ ಭವಿಷ್ಯ ನುಡಿದಿದ್ದು, ಆಸ್ಟ್ರೇಲಿಯಾ ಏಕಪಕ್ಷೀಯವಾಗಿ ಸರಣಿಯನ್ನು ಗೆಲ್ಲುತ್ತದೆ ಎಂದಿದ್ದಾರೆ.

ಗ್ಲೆನ್ ಮೆಕ್‌ಗ್ರಾತ್ ಹೇಳಿದ್ದೇನು?

‘ಆಸ್ಟ್ರೇಲಿಯಾ ಸರಣಿಯನ್ನು 5-0 ಅಂತರದಿಂದ ಗೆಲ್ಲುತ್ತದೆ. ನನಗೆ ಆಸ್ಟ್ರೇಲಿಯಾದ ಮೇಲೆ ಸಂಪೂರ್ಣ ನಂಬಿಕೆ ಇದೆ. ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ನಾಥನ್ ಲಿಯಾನ್ ಮತ್ತು ಮಿಚೆಲ್ ಸ್ಟಾರ್ಕ್ ತವರಿನಲ್ಲಿ ತುಂಬಾ ಅಪಾಯಕಾರಿಯಾಗಬಹುದು. ಇಂಗ್ಲೆಂಡ್ ಈ ನಾಲ್ವರಿಂದ ಸವಾಲನ್ನು ಎದುರಿಸಲಿದೆ. ಅಲ್ಲದೆ, ಇಂಗ್ಲೆಂಡ್‌ನ ಟ್ರ್ಯಾಕ್ ರೆಕಾರ್ಡ್ ಅಷ್ಟು ಉತ್ತಮವಾಗಿಲ್ಲ. ಆದ್ದರಿಂದ ಇಂಗ್ಲೆಂಡ್ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದೇ ಎಂದು ನೋಡಲು ಆಸಕ್ತಿದಾಯಕವಾಗಿರುತ್ತದೆ’ ಎಂದು ಮೆಕ್‌ಗ್ರಾತ್ ಬಿಬಿಸಿ ರೇಡಿಯೊದಲ್ಲಿ ಹೇಳಿದ್ದಾರೆ.

2015 ರಿಂದ ಇಂಗ್ಲೆಂಡ್ ತಂಡವು ಆಶಸ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. 2015 ರಲ್ಲಿ ಇಂಗ್ಲೆಂಡ್ ತಂಡವು ತವರಿನಲ್ಲಿ ಆಶಸ್ ಸರಣಿಯನ್ನು ಗೆದ್ದಿತು. ಅದಾದ ನಂತರ, ಇಂಗ್ಲೆಂಡ್ ತಂಡವು ಒಮ್ಮೆಯೂ ಸರಣಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ.

‘ನಿಜವಾಗಿಯೂ ಬೇಸರವಾಗಿದೆ’; ರಿಷಭ್ ಪಂತ್ ಬಳಿ ಕ್ಷಮೆಯಾಚಿಸಿದ ಇಂಗ್ಲೆಂಡ್‌ ವೇಗಿ

ಈ ಬಗ್ಗೆ ಮಾತನಾಡಿದ ಮೆಕ್​ಗ್ರಾತ್, ‘ಇಂಗ್ಲೆಂಡ್ ತನ್ನ ಬೌಲಿಂಗ್ ವಿಭಾಗವನ್ನು ಬಲಪಡಿಸಿಕೊಳ್ಳಬೇಕಾಗಿದೆ. ಇಂಗ್ಲೆಂಡ್‌ನ ಅಗ್ರ ಮತ್ತು ಮಧ್ಯಮ ಕ್ರಮಾಂಕ ಎದುರಿಸುತ್ತಿರುವ ಸವಾಲು ಆಸ್ಟ್ರೇಲಿಯಾದ ವೇಗಿ ಮತ್ತು ಸ್ಪಿನ್ನರ್ ನಾಥನ್ ಲಿಯಾನ್ ಆಗಿರುತ್ತದೆ. ಜೋ ರೂಟ್ ಮತ್ತು ನಾಥನ್ ಲಿಯಾನ್ ನಡುವಿನ ಹೋರಾಟವು ದೊಡ್ಡದಾಗಿರುತ್ತದೆ. ಈ ಸರಣಿಯು ರೂಟ್‌ಗೆ ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ರೂಟ್ ಇದುವರೆಗೆ ವಿಶೇಷವಾದದ್ದೇನೂ ಮಾಡಿಲ್ಲ. ಆಸ್ಟ್ರೇಲಿಯಾದಲ್ಲಿ ರೂಟ್ ಒಂದೇ ಒಂದು ಶತಕ ಗಳಿಸಲು ಸಾಧ್ಯವಾಗಿಲ್ಲ. ಆದರೆ ರೂಟ್ ಪ್ರಸ್ತುತ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಮೆಕ್‌ಗ್ರಾತ್ ಹೇಳಿದ್ದಾರೆ.

ಆಶಸ್ ಸರಣಿ ವೇಳಾಪಟ್ಟಿ

  1. ಮೊದಲ ಪಂದ್ಯ, ನವೆಂಬರ್ 21-25, ಪರ್ತ್
  2. ಎರಡನೇ ಪಂದ್ಯ, ಡಿಸೆಂಬರ್ 4 ರಿಂದ 8, ಗಾಬಾ
  3. ಮೂರನೇ ಪಂದ್ಯ, ಡಿಸೆಂಬರ್ 17-21, ಅಡಿಲೇಡ್ ಓವಲ್
  4. ನಾಲ್ಕನೇ ಪಂದ್ಯ, ಡಿಸೆಂಬರ್ 26-30, ಮೆಲ್ಬೋರ್ನ್
  5. ಐದನೇ ಪಂದ್ಯ, ಜನವರಿ 4-8, ಸಿಡ್ನಿ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ