ರಾಜ್ಯ ಸರ್ಕಾರದಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಕೆಎಸ್​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಸರ್ಕಾರದ ಕಡೆಯಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯ ಸರ್ಕಾರದಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್
RCB

Updated on: Dec 10, 2025 | 2:23 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತವರಿನಲ್ಲಿ ಕಣಕ್ಕಿಳಿದೆಯಾ? ಈ ಪ್ರಶ್ನೆಗೆ ಅತೀ ಶೀಘ್ರದಲ್ಲೇ ಉತ್ತರ ದೊರೆಯಲಿದೆ. ಅಂದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ಪಂದ್ಯಗಳಿಗೆ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಕೆಎಸ್ ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಈ ಭೇಟಿಯ ಬಳಿಕ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವೆಂಕಟೇಶ್ ಪ್ರಸಾದ್ ಅವರು ಬೆಂಗಳೂರಿನಲ್ಲಿ ಪಂದ್ಯ ಆಯೋಜಿಸಲು ಪರ್ಮಿಷನ್ ಕೊಡಬೇಕೆಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಚರ್ಚಿಸಿ ನಾಳೆ ನಡೆಯಲಿರುವ ಕ್ಯಾಬಿನೆಟ್​ನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದೇನೆ.

ನಮಗೆ ಕ್ರಿಕೆಟ್ ನಿಲ್ಲಿಸಬೇಕೆಂದು ಯಾವುದೇ ಉದ್ದೇಶವಿಲ್ಲ. ಆದರೆ ಜನಸಂದಣಿ ನಿಯಂತ್ರಣ ವಿಚಾರದಲ್ಲಿ ನಾವು ಕೆಲ ನಿಯಮಗಳನ್ನು ಪಾಲಿಸಬೇಕಿದೆ. ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಆಯೋಗ ಶಿಫಾರಸು ಮಾಡಿರುವ ಸಲಹೆಗಳನ್ನು ನಾವು ಪಾಲನೆ ಮಾಡಬೇಕಿದೆ.

ಒಂದೇ ಸಲ ಪಾಲನೆ ಮಾಡಲು ಸಾಧ್ಯವಾಗದೇ ಇರಬಹುದು. ಆದರೆ ಅದನ್ನೆಲ್ಲಾ ಪಾಲನೆ ಮಾಡಬೇಕೆಂದು ನಮ್ಮ ಉದ್ಧೇಶ. ಇದಕ್ಕೆ ಕೆಎಸ್​ಸಿಎ ನೂತನ ಅಧ್ಯಕ್ಷರು ಕೂಡ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯದ ಗೌರವ, ಸ್ವಾಭಿಮಾನ ಏನಿದೆ, ಅದಕ್ಕೆ ಧಕ್ಕೆ ಬರದಂತೆ ಎಲ್ಲಾ ನಮ್ಮ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಅದರಂತೆ ಆರ್​ಸಿಬಿ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಅನುವು ಮಾಡಿಕೊಡುವ ಸಲುವಾಗಿ ನಾಳೆ ನಡೆಯಲಿರುವ ಕ್ಯಾಬಿನೆಟ್​ ಸಭೆಯಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸ. ಇತ್ತ ಸರ್ಕಾರದ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳು ನಡೆಯುವುದು ಬಹುತೇಕ ಖಚಿತ ಎಂದೇ ಹೇಳಬಹುದು.

ಆರ್​ಸಿಬಿ ಸ್ಟೇಡಿಯಂಗೆ ನಿಷೇಧವೇಕೆ?

ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. ಈ ಕಾಲ್ತುಳಿತ ದುರಂತ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.

ಈ ತನಿಖೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳು ಬಹಿರಂಗವಾಗಿದ್ದವು. ಅಲ್ಲದೆ ಕ್ರೀಡಾಂಗಣದ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಈ ದುರಂತದ ಬಳಿಕ ಬಿಸಿಸಿಐ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿರಲಿಲ್ಲ.

ಇದನ್ನೂ ಓದಿ: ಕೇವಲ ೧ ರನ್​ನಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಟೀಮ್ ಇಂಡಿಯಾ

ಇದೀಗ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಆಯೋಗವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸೂಚಿಸಲಾದ ಸಲಹೆಗಳನ್ನು ಪಾಲಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದೆ. ಹೀಗಾಗಿ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಸಿಗಲಿದೆ.