
ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026) ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡವು ಮೇ 31 ರಂದು ನಡೆಯಲಿರುವ ಐಪಿಎಲ್ ಫೈನಲ್ಗೆ ಎಂಟ್ರಿ ಕೊಡಲಿದೆ. ಹಾಗೆಯೇ ಸೋತ ತಂಡದ ಐಪಿಎಲ್ ಅಭಿಯಾನ ಅಂತ್ಯಗೊಳ್ಳಲಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಗೆಲ್ಲಲು ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುವುದು ದಿಟ.
ಕುತೂಹಲಕಾರಿ ವಿಷಯ ಎಂದರೆ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ನ ಪ್ಲೇಆಫ್ ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆದ್ದ ಇತಿಹಾಸವೇ ಇಲ್ಲ. ಅಂದರೆ ಎರಡು ಬಾರಿ ಮುಖಾಮುಖಿಯಾದಾಗಲೂ ಆರ್ಆರ್ ವಿರುದ್ಧ ಗೆಲ್ಲುವಲ್ಲಿ ಗುಜರಾತ್ ಟೈಟಾನ್ಸ್ ತಂಡ ಯಶಸ್ವಿಯಾಗಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಪ್ಲೇಆಫ್ ಹಂತದಲ್ಲಿ 2 ಬಾರಿ ಸೋತಿರುವ ರಾಜಸ್ಥಾನ್ ರಾಯಲ್ಸ್ ಈ ಬಾರಿ ಹಿಸ್ಟರಿ ಬದಲಿಸುತ್ತಾ? ಎಂಬುದೇ ಕುತೂಹಲ. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸತತ 6 ಪಂದ್ಯಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ. ಈ ಅರ್ಹತೆಯೊಂದಿಗೆ ಇದೀಗ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅತ್ತ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ಸರಪಳಿ ಕಳಚಿರುವ ರಾಜಸ್ಥಾನ್ ರಾಯಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ ಕೂಡ ಗೆಲ್ಲಲಿದೆಯಾ ಎಂಬುದೇ ಸದ್ಯ ಕುತೂಹಲ.
ಅತ್ತ ರಾಜಸ್ಥಾನ್ ರಾಯಲ್ಸ್ ಹಿಸ್ಟರಿ ಬದಲಿಸಲು ಪ್ಲ್ಯಾನ್ ರೂಪಿಸುತ್ತಿದ್ದರೆ, ಇತ್ತ ಗುಜರಾತ್ ಟೈಟಾನ್ಸ್ ತಂಡವು ಪ್ಲೇಆಫ್ನಲ್ಲಿ ಆರ್ಆರ್ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಲು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಅಂದರೆ 2022ರ ಕ್ವಾಲಿಫೈಯರ್ ಪಂದ್ಯದ ಫಲಿತಾಂಶವನ್ನೇ ಮರು ಸೃಷ್ಟಿಸಲು ಗುಜರಾತ್ ಟೈಟಾನ್ಸ್ ಪ್ಲ್ಯಾನ್ ರೂಪಿಸಿಕೊಂಡಿದೆ.
ಇದನ್ನೂ ಓದಿ: AB de Villiers: ವೈಭವ್ನ ನೋಡಿದಾಗ ನನಗೆ ಆ ಬ್ಯಾಟರ್ ನೆನಪಾಗ್ತಾರೆ!
ಈ ಪ್ಲ್ಯಾನ್ಗೆ ಮರು ಪ್ಲ್ಯಾನ್ ರೂಪಿಸಿ ರಾಜಸ್ಥಾನ್ ರಾಯಲ್ಸ್ ಫೈನಲ್ಗೇರಲಿದೆಯಾ? ಅಥವಾ ಗುಜರಾತ್ ಟೈಟಾನ್ಸ್ ಮೂರನೇ ಬಾರಿ ಫೈನಲ್ಗೆ ಎಂಟ್ರಿ ಕೊಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.