
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಜಯ ಸಾಧಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್‌ಗಳಲ್ಲಿ 204 ರನ್ಗಳಿಸಿ 6 ರನ್ಗಳಿಂದ ಸೋಲೊಪ್ಪಿಕೊಂಡಿದ್ದರು.
ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ಹಂಗಾಮಿ ನಾಯಕ ರಶೀದ್ ಖಾನ್, ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸೋಲಿಗೆ ಕಾರಣವಾದ ಅಂಶಗಳ ಮುಂದಿಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಎದುರಾಳಿ ತಂಡವನ್ನು 210 ರನ್‌ಗಳ ಒಳಗೆ ನಿಯಂತ್ರಿಸಿದ್ದು ಬೌಲರ್‌ಗಳ ದೊಡ್ಡ ಸಾಧನೆ. ಈ ಪಿಚ್‌ನಲ್ಲಿ ಆ ಮೊತ್ತವನ್ನು ಬೆನ್ನಟ್ಟುವುದು ಕಷ್ಟವಿರಲಿಲ್ಲ. ಇದಾಗ್ಯೂ ನಾವು ವಿಫಲವಾದೆವು ಎಂದು ರಶೀದ್ ಖಾನ್ ಹೇಳಿದ್ದಾರೆ.
ಬ್ಯಾಟಿಂಗ್‌ನಲ್ಲಿ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ, ಪಂದ್ಯದ 12 ಮತ್ತು 13ನೇ ಓವರ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. “ಆ ಸಮಯದಲ್ಲಿ ನಾವು ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡೆವು. ವಿಕೆಟ್ ಬೀಳದಿದ್ದರೆ ಪ್ರತಿ ಓವರ್‌ಗೆ 9-10 ರನ್ ಗಳಿಸುವುದು ಈ ಪಿಚ್‌ನಲ್ಲಿ ದೊಡ್ಡ ವಿಷಯವಾಗಿರಲಿಲ್ಲ” ಎಂದು ರಶೀದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಕೊನೆಯ ಓವರ್‌ನಲ್ಲಿ ಕೇವಲ ಒಂದು ಬೌಂಡರಿ ಅಗತ್ಯವಿತ್ತು. ಎದುರಾಳಿ ಬೌಲರ್ ತುಷಾರ್ ದೇಶಪಾಂಡೆ ಅವರ ಅದ್ಭುತ ಯಾರ್ಕರ್ ಎಸೆತಗಳನ್ನು ರಶೀದ್ ಶ್ಲಾಘಿಸಿದರು. ಆದರೂ, ಬೌಲರ್ ಲಯ ತಪ್ಪಿದ ಒಂದು ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ತಮಗೆ ಸಾಧ್ಯವಾಗಲಿಲ್ಲ. ಅಂತಿಮ ಎರಡು 2 ಓವರ್‌ಗಳಲ್ಲಿ ಬೌಂಡರಿಗಳು ಬರದಿರುವುದು ನಮ್ಮ ಸೋಲಿಗೆ ಕಾರಣವಾಯಿತು ಎಂದು ರಶೀದ್ ಖಾನ್ ಹೇಳಿದ್ದಾರೆ.
ಇದೇ ವೇಳೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಅವರ ಫಿಟ್ನೆಸ್ ಬಗ್ಗೆ ಅಪ್‌ಡೇಟ್ ನೀಡಿದ ರಶೀದ್ ಖಾನ್, “ಗಿಲ್ ಅವರಿಗೆ ಸ್ನಾಯು ಸೆಳೆತ (muscle spasm) ಉಂಟಾಗಿತ್ತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮುಂದಿನ ಪಂದ್ಯದ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸವಿದೆ” ಎಂದರು.
ಇದನ್ನೂ ಓದಿ: ಇಬ್ಬರು ನಾಯಕರುಗಳು ಕಣಕ್ಕಿಳಿಯದಿರಲು ಇದುವೇ ಕಾರಣ..!
ಈ ಸೋಲಿನಿಂದ ಗುಜರಾತ್ ಟೈಟಾನ್ಸ್ ಕಂಗೆಟ್ಟಿಲ್ಲ. ಇದೊಂದು ದೀರ್ಘಾವಧಿಯ ಟೂರ್ನಿಯಾಗಿದ್ದು, ಮಾಡಿದ ತಪ್ಪುಗಳಿಂದ ಪಾಠ ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಮರಳುತ್ತೇವೆ ಎಂಬ ಭರವಸೆಯನ್ನು ರಶೀದ್ ಖಾನ್ ಅಭಿಮಾನಿಗಳಿಗೆ ನೀಡಿದ್ದಾರೆ.