IND vs SA: ಭಾರತ- ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಪ್ರಮುಖ ಬದಲಾವಣೆಗೆ ಮುಂದಾದ ಬಿಸಿಸಿಐ

India vs South Africa Test series: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಗುವಾಹಟಿ ಟೆಸ್ಟ್ ಪಂದ್ಯದ ಸೆಷನ್‌ಗಳಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ ತಂದಿದೆ. ನವೆಂಬರ್ 22 ರಂದು ನಡೆಯುವ ಈ ಎರಡನೇ ಟೆಸ್ಟ್‌ನಲ್ಲಿ, ಮೊದಲ ಸೆಷನ್ ನಂತರ ಊಟದ ಬದಲು ಚಹಾ ವಿರಾಮ ನೀಡಲಾಗುವುದು. ಗುವಾಹಟಿಯಲ್ಲಿ ಬೇಗ ಸೂರ್ಯಾಸ್ತವಾಗುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಬದಲಾವಣೆ ರಣಜಿ ಟ್ರೋಫಿಯಲ್ಲೂ ಪ್ರಯೋಗಗೊಂಡಿತ್ತು.

IND vs SA: ಭಾರತ- ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಪ್ರಮುಖ ಬದಲಾವಣೆಗೆ ಮುಂದಾದ ಬಿಸಿಸಿಐ
Team India

Updated on: Oct 30, 2025 | 4:08 PM

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ನವೆಂಬರ್ 14 ರಂದು ಆರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ನಂತರ ಎರಡನೇ ಟೆಸ್ಟ್ ನವೆಂಬರ್ 22 ರಂದು ಗುವಾಹಟಿಯಲ್ಲಿ (Guwahati Test) ಆರಂಭವಾಗಲಿದೆ. ಇದೀಗ ಈ ಪಂದ್ಯದ ಸೆಷನ್​ಗಳಲ್ಲಿ ಪ್ರಮುಖ ಬದಲಾವಣೆ ಮಾಡಲು ಬಿಸಿಸಿಐ ಮುಂದಾಗಿದೆ. ಅಂದರೆ ಈ ಟೆಸ್ಟ್​ನಲ್ಲಿ ಮೊದಲ ಸೆಷನ್​ ನಂತರ ಊಟದ ಬದಲು ಚಹಾ ವಿರಾಮ ನೀಡಲು ಚಿಂತಿಸಲಾಗಿದೆ. ಇದಕ್ಕೆ ಕಾರಣವನ್ನು ಸಹ ಬಿಸಿಸಿಐ ವಿವರಿಸಿದೆ.

ಊಟದ ಬದಲು ಚಹಾ ವಿರಾಮ

ವಾಸ್ತವವಾಗಿ ಟೆಸ್ಟ್​ ಕ್ರಿಕೆಟ್​​ನಲ್ಲಿ ದಿನದಾಟ ಆರಂಭವಾದ ಬಳಿಕ ಮೊದಲ ಸೆಷನ್ ಅಂತ್ಯಕ್ಕೆ ಊಟದ ವಿರಾಮವನ್ನು ನೀಡಲಾಗುತ್ತದೆ. ಆ ಬಳಿಕ ಎರಡನೇ ಸೆಷನ್ ಆರಂಭವಾಗಲಿದ್ದು, ಈ ಸೆಷನ್ ಅಂತ್ಯಕ್ಕೆ ಚಹಾ ವಿರಾಮ ನೀಡಲಾಗುತ್ತದೆ. ನಂತರ ದಿನದಾಟದ ಕೊನೆಯ ಸೆಷನ್ ಅಂದರೆ ಮೂರನೇ ಸೆಷನ್ ಆರಂಭವಾಗುತ್ತದೆ. ಇದು ಟೆಸ್ಟ್ ಪಂದ್ಯಗಳಲ್ಲಿ ಸಾಮಾನ್ಯ ಅನುಕ್ರಮವಾಗಿದೆ. ಆದರೆ ನವೆಂಬರ್ 22 ರಿಂದ ಗುವಾಹಟಿಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನಲ್ಲಿ ಈ ಅನುಕ್ರಮವು ಬದಲಾಗಲಿದೆ.

ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಗಳ ಪ್ರಕಾರ, ಮೊದಲ ಸೆಷನ್ ಅಂತ್ಯಕ್ಕೆ ಊಟದ ಬದಲು ಚಹಾ ವಿರಾಮವನ್ನು ನೀಡಲಾಗುತ್ತದೆ. ಗುವಾಹಟಿಯಲ್ಲಿ ಬೇಗನೇ ಸೂರ್ಯಾಸ್ತವಾಗುವುದು ಇದಕ್ಕೆ ಕಾರಣವಾಗಿದೆ. ಹೀಗಾಗಿ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ನ ಮೊದಲ ಸೆಷನ್ ಬೆಳಿಗ್ಗೆ 9 ರಿಂದ ಬೆಳಿಗ್ಗೆ 11 ರವರೆಗೆ ಇರಲಿದ್ದು, ನಂತರ ಬೆಳಿಗ್ಗೆ 11 ರಿಂದ ಬೆಳಿಗ್ಗೆ 11:20 ರವರೆಗೆ ಚಹಾ ವಿರಾಮವಿರುತ್ತದೆ. ಎರಡನೇ ಸೆಷನ್ ಬೆಳಿಗ್ಗೆ 11:20 ರಿಂದ ಆರಂಭವಾಗಿ ಮಧ್ಯಾಹ್ನ 1:20 ರವರೆಗೆ ನಡೆಯಲಿದೆ. ಊಟದ ವಿರಾಮ ಮಧ್ಯಾಹ್ನ 1:20 ರಿಂದ ಮಧ್ಯಾಹ್ನ 2 ರವರೆಗೆ ಇದ್ದರೆ, ಮೂರನೇ ಸೆಷನ್ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಇರುತ್ತದೆ.

IND vs SA: ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ರಣಜಿ ಟ್ರೋಫಿಯಲ್ಲಿ ಪ್ರಯೋಗ

ಭಾರತದಲ್ಲಿ ಟೆಸ್ಟ್ ಪಂದ್ಯಗಳು ಸಾಮಾನ್ಯವಾಗಿ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗುತ್ತವೆ. 40 ನಿಮಿಷಗಳ ಊಟದ ವಿರಾಮ (ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 12:10 ರವರೆಗೆ) ಇರುತ್ತದೆ. ಇದರ ನಂತರ, ಎರಡನೇ ಸೆಷನ್ ಪುನರಾರಂಭವಾಗುತ್ತದೆ. ಎರಡೂ ತಂಡಗಳು 20 ನಿಮಿಷಗಳ ಚಹಾ ವಿರಾಮವನ್ನು ತೆಗೆದುಕೊಳ್ಳುತ್ತವೆ (ಮಧ್ಯಾಹ್ನ 2:10 ರಿಂದ ಮಧ್ಯಾಹ್ನ 2:30 ರವರೆಗೆ). ಇದರ ನಂತರ ಮಧ್ಯಾಹ್ನ 2:30 ರಿಂದ ಸಂಜೆ 4:30 ರವರೆಗೆ ಮೂರನೇ ಸೆಷನ್ ಇರುತ್ತದೆ. ಪಂದ್ಯದ ಅಧಿಕಾರಿಗಳು ತಂಡಗಳಿಗೆ ದಿನಕ್ಕೆ 90 ಓವರ್‌ಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅರ್ಧ ಗಂಟೆ ನೀಡಬಹುದು. ಈ ಹಿಂದೆ, ಬಿಸಿಸಿಐ ಸೂರ್ಯಾಸ್ತವನ್ನು ಗಣನೆಗೆ ತೆಗೆದುಕೊಂಡು ರಣಜಿ ಟ್ರೋಫಿ ಪಂದ್ಯಗಳಿಗೂ ಸೆಷನ್ ಸಮಯದಲ್ಲಿ ಬದಲಾವಣೆ ಮಾಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:04 pm, Thu, 30 October 25