ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಣ ನಿರ್ಣಾಯಕ ಮೂರನೇ ಟೆಸ್ಟ್ ಪಂದ್ಯಕ್ಕೆ ಇಂದು ಚಾಲನೆ ಸಿಗಲಿದೆ. ಕೇಪ್ ಟೌನ್ನ (Cape Town) ನ್ಯೂಲ್ಯಾಂಡ್ಸ್ ಮೈದಾನ ಈ ರೋಚಕ ಕದನಕ್ಕೆ ಸಾಕ್ಷಿಯಾಗಲಿದೆ. ವಿರಾಟ್ ಕೊಹ್ಲಿ (Virat Kohli) ಪಡೆ ಈ ಟೆಸ್ಟ್ ಗೆದ್ದರೆ ಹರಿಣಗಳ ನಾಡಿನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದಂತಾಗುತ್ತದೆ. ಇತ್ತ ಕಿಂಗ್ ಕೊಹ್ಲಿ ಕೂಡ ಅಬ್ಬರಿಸಲೇ ಬೇಕಾದ ಒತ್ತಡದಲ್ಲಿದ್ದಾರೆ. ಒಂದು ಕಡೆ ಕೊಹ್ಲಿ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದರೆ ಮತ್ತೊಂದೆಡೆ ಫಾರ್ಮ್ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಹೀಗಿರುವಾಗ ಇತ್ತೀಚೆಗಷ್ಟೆ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡ ಹರ್ಭಜನ್ ಸಿಂಗ್ (Harbhajan Singh) ಅವರು ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ಟೀಮ್ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಭಜ್ಜಿ ಕಳೆದ ಎರಡು ವರ್ಷಗಳಿಂದ ಕೊಹ್ಲಿ ಅನುಭವಿಸುತ್ತಿರುವ ಶತಕದ ಬರ ಈ ಪಂದ್ಯದಲ್ಲಿ ನೀಗಲಿದೆ ಎಂದು ಹೇಳಿದ್ದಾರೆ. “ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಲಿದ್ದಾರೆ. ಜೊತೆಗೆ ಕೊಹ್ಲಿ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳಲಿದ್ದಾರೆ ಎಂಬುದು ನನ್ನ ಭಾವನೆ. ಆತ ಶತಕ ಬಾರಿಸುವುದನ್ನು ನೋಡಿ ಅದಾಗಲೇ ಬಹಳ ಕಾಲವಾಯಿತು. ಅವರ ಜೊತೆಗೆ ಪೂಜಾರ, ರಹಾನೆಯಂತಾ ಆಟಗಾರರು ಕೂಡ ಅದ್ಭುತ ಪ್ರದರ್ಶನ ನಿಡಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಅವರಿಂದ ಅರ್ಧ ಶತಕಗಳು ಮಾತ್ರ ಬರುತ್ತಿವೆ. ಅದು ಶತಕವಾಗಿ ಪರಿವರ್ತನೆಯಾಗಬೇಕಿದೆ,” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಕೊನೆಯದಾಗಿ ಶತಕವನ್ನು ಸಿಡಿಸಿದ್ದರು. ಅದಾಗಿ ಎರಡು ವರ್ಷ ಕಳೆದಿದ್ದು ಕೊಹ್ಲಿ ಬ್ಯಾಟ್‌ನಿಂದ ಈವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಸೆಂಚುರಿ ಬಂದಿಲ್ಲ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಹಲವು ಅರ್ಧ ಶತಕಗಳನ್ನು ಸಿಡಿಸಿದ್ದರೂ ಶತಕವನ್ನಾಗಿ ಪರಿವರ್ತಿಸಲು ವಿಫಲವಾಗಿದ್ದಾರೆ. ಇದೀಗ ಮೂರನೇ ಟೆಸ್ಟ್ ಮೇಲೆ ಎಲ್ಲರ ಕಣ್ಣಿದೆ.
ಇನ್ನು ಭಾರತ ಈ ಪಂದ್ಯದಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯಬೇಕು ಎಂಬುದು ಹರ್ಭಜನ್ ಮಾತು. “ನಾವು 350-400 ರನ್‌ಗಳನ್ನು ಗಳಿಸಬೇಕಿದೆ, ಅಲ್ಲದೆ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಬೇಕು. ಹೀಗೆ ಮಾಡಿದಲ್ಲಿ ಭಾರತ ಈ ಪಂದ್ಯವನ್ನು ತನ್ನ ಕಡೆ ವಾಲಿಸಬಹುದು. ಕೆಎಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮಯಾಂಕ್ ಉತ್ತಮ ಆರಂಭವನ್ನು ಪಡೆಯುತ್ತಾರೆ ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಗುತ್ತಿದ್ದಾರೆ. ಈ ಪಂದ್ಯವನ್ನು ಭಾರತ ಪರಿಪೂರ್ಣವಾಗಿ ಆಡಲಿದೆ ಎಂಬ ವಿಶ್ವಾಸ ನನಗಿದೆ,” ಎಂದಿದ್ದಾರೆ ಹರ್ಭಜನ್.
South Africa vs India: ಮೂರನೇ ಟೆಸ್ಟ್ನಿಂದ ರಿಷಭ್ ಪಂತ್ ಔಟ್?: ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್
South Africa vs India: ಭಾರತ ಆಫ್ರಿಕಾ ನಿರ್ಣಾಯಕ ಕದನಕ್ಕೆ ಅಡ್ಡಿ ಆಗ್ತಾನ ವರುಣ: ಕೇಪ್ ಟೌನ್ ಹವಾಮಾನ ಹೇಗಿದೆ?