
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಲಿದ್ದಾರಾ? ಈ ಮಿಲಿಯನ್ ಡಾಲರ್ ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಪಾಂಡ್ಯ ಹಂಚಿಕೊಂಡ ಒಂದು ಪೋಸ್ಟ್. ಈ ಪೋಸ್ಟ್ ಬೆನ್ನಲ್ಲೇ ಹಾರ್ದಿಕ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಇದರೊಂದಿಗೆ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ಹರಿದಾಡುತ್ತಿದೆ.
ಸೋಮವಾರ (ಮೇ 25) ಹಾರ್ದಿಕ್ ಪಾಂಡ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಒಂದು ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಲ್ಯಾಪ್ ಟಾಪ್, ಮೊಬೈಲ್ ಇತ್ತು. ಆ ಮೊಬೈಲ್ ಸ್ಕ್ರೀನ್ ಮೇಲೆ ಸಮಯ 07:07 ಎಂದು ತೋರಿಸಲಾಗಿತ್ತು. ಕ್ರಿಕೆಟ್ ಲೋಕದಲ್ಲಿ ‘7’ ಎಂದರೆ ಅದು ಎಂ.ಎಸ್. ಧೋನಿ.
ಹೀಗಾಗಿ, ಹಾರ್ದಿಕ್ ಪಾಂಡ್ಯ ಬೇಕೆಂದೇ ಧೋನಿ ಅವರ ನಂಬರ್ ಇರುವ ಸಮಯದ ಫೋಟೋ ಹಾಕಿ, ತಾವು CSK ಸೇರುವ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಲಾರಂಭಿಸಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಈ ಬಾರಿಯ ಐಪಿಎಲ್ ನಡುವೆ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ಗೆ ಟ್ರೇಡ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಪಾಂಡ್ಯ ಹಂಚಿಕೊಂಡಿರುವ ಪೋಸ್ಟ್ನಿಂದಾಗಿ ಈ ಸುದ್ದಿಯು ಮಹತ್ವ ಪಡೆದುಕೊಂಡಿದೆ.
;
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಕಳೆದ ಎರಡು ಸೀಸನ್ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಹೀಗಾಗಿಯೇ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೈ ಬಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಇದರ ನಡುವೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಸಿಎಸ್ಕೆ ಸಿಇಒ ಕಾಸಿ ವಿಶ್ವನಾಥನ್ ಅವರೊಂದಿಗೆ ಮೈದಾನದಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿರುವುದು ಕಂಡುಬಂದಿತ್ತು.
ಈ ಮಾತುಕತೆ ಬೆನ್ನಲ್ಲೇ ಸಿಎಸ್ಕೆ ರುತುರಾಜ್ ಗಾಯಕ್ವಾಡ್ ಅಥವಾ ಶಿವಂ ದುಬೆಯನ್ನು ನೀಡಿ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹುಟ್ಟಿಕೊಂಡಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಹಂಚಿಕೊಂಡ ಒಂದೇ ಒಂದು ಪೋಸ್ಟ್ನಿಂದ ಈ ಸುದ್ದಿಗಳು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: RCB ಪರ ಇನಿಂಗ್ಸ್ ಆರಂಭಿಸುವವರು ಯಾರು?
ಇದಾಗ್ಯೂ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕಡೆಯಿಂದಾಗಲಿ, ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಕಡೆಯಿಂದಾಗಲಿ ಈ ಟ್ರೇಡಿಂಗ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂಟ್ರಿ ಕೊಡುವ ಬಗ್ಗೆ ಖಚಿತತೆ ಸಿಗಲು ಮತ್ತೊಂದಷ್ಟು ದಿನಗಳವರೆಗೆ ಕಾಯಲೇಬೇಕಾಗುತ್ತದೆ.
Published On - 8:11 am, Tue, 26 May 26