ಮುಂಬೈ ಇಂಡಿಯನ್ಸ್ ತಂಡದ ಸೋಲಿನ ಸೀಕ್ರೆಟ್ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ!
IPL 2026 MI vs RR: ಐಪಿಎಲ್ನ 69ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್‌ಗಳಲ್ಲಿ 175 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 30 ರನ್ಗಳ ಭರ್ಜರಿ ಜಯ ಸಾಧಿಸಿದೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 69ನೇ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್ ತಂಡ ಮುಗ್ಗರಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 205 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 175 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಕೊನೆಯ ಪಂದ್ಯದಲ್ಲಿ ಮುಂಬೈ ಪಡೆ 30 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಡೆತ್ ಓವರ್‌ಗಳಲ್ಲಿ ಅತಿಯಾದ ರನ್ ಬಿಟ್ಟುಕೊಟ್ಟಿದ್ದು ಮತ್ತು ಪವರ್‌ಪ್ಲೇ ಅವಧಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಸೋಲಿಗೆ ಮುಖ್ಯ ಕಾರಣ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಕೈಕೊಟ್ಟ ಬೌಲರ್‌ಗಳು:
“ನಾವು ಬೌಲಿಂಗ್ ಮಾಡುವಾಗ ಎದುರಾಳಿ ತಂಡಕ್ಕೆ ಕನಿಷ್ಠ 10 ರಿಂದ 15 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಿದೆವು ಎಂದು ನನಗೆ ಅನಿಸುತ್ತದೆ. ಕ್ರೀಡಾಂಗಣದಲ್ಲಿ ತೀವ್ರವಾದ ಸೆಖೆಯ ವಾತಾವರಣವಿತ್ತು. ಆದರೂ ನಮ್ಮ ಬೌಲರ್‌ಗಳು ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಅಂತಿಮ ಹಂತದಲ್ಲಿ ಪಂದ್ಯದ ಮೇಲಿನ ಹಿಡಿತ ಕೈತಪ್ಪಿತು” ಎಂದು ಪಾಂಡ್ಯ ಹೇಳಿದ್ದಾರೆ.
ಡೆತ್ ಓವರ್‌ಗಳು ದುಬಾರಿ:
ಪಂದ್ಯದ ಕೊನೆಯ 5 ಓವರ್‌ಗಳು ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಹೊಡೆತ ನೀಡಿದವು. ಈ ಬಗ್ಗೆ ಮಾತನಾಡಿದ ಪಾಂಡ್ಯ, “ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಕಷ್ಟಕರವಾಗಿರುತ್ತದೆ. ಅಂತಿಮ 5 ಓವರ್‌ಗಳ ಬ್ಲಾಕ್‌ನಲ್ಲಿ ಕೇವಲ 1 ಅಥವಾ 2 ಬೌಂಡರಿಗಳನ್ನು ತಡೆದಿದ್ದರೂ, ಎದುರಾಳಿ ತಂಡವನ್ನು 12-15 ರನ್ ಮುಂಚಿತವಾಗಿಯೇ ನಿಯಂತ್ರಿಸಬಹುದಿತ್ತು. ದುರದೃಷ್ಟವಶಾತ್ ನಾವು ಆ ಕೆಲಸ ಮಾಡಲು ವಿಫಲರಾದೆವು. ಕೊನೆಯ 5 ಓವರ್‌ಗಳಲ್ಲಿ ಎದುರಾಳಿಗಳು ಬಾರಿಸಿದ 73 ರನ್‌ಗಳು ನಮಗೆ ಪಂದ್ಯವನ್ನು ಕೈತಪ್ಪುವಂತೆ ಮಾಡಿದವು” ಎಂದರು.
ಪವರ್‌ಪ್ಲೇನಲ್ಲಿ ವಿಕೆಟ್ ಪತನ:
ಇನ್ನು ಚೇಸಿಂಗ್ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, “ಈ ರನ್ ಮೊತ್ತವನ್ನು ಖಂಡಿತವಾಗಿಯೂ ಬೆನ್ನಟ್ಟಬಹುದಾಗಿತ್ತು. ಆದರೆ ನಾವು ಪವರ್‌ಪ್ಲೇ (ಮೊದಲ 6 ಓವರ್) ಅವಧಿಯಲ್ಲೇ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡೆವು. ಆರಂಭದಲ್ಲೇ ಪ್ರಮುಖ ವಿಕೆಟ್‌ಗಳು ಬಿದ್ದಿದ್ದರಿಂದ, ನಂತರದ ಓವರ್‌ಗಳಲ್ಲಿ ರನ್ ವೇಗವನ್ನು ಕಾಯ್ದುಕೊಳ್ಳುವುದು ನಮಗೆ ಕೇವಲ ‘ಕ್ಯಾಚ್-ಅಪ್’ (ಹಿಂದಿನ ರನ್ ರೇಟ್ ಸರಿದೂಗಿಸುವ) ಆಟವಾಗಿ ಮಾರ್ಪಟ್ಟಿತು” ಎಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್:
ಪಿಚ್ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ, “ನಾನು ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದಾಗ ಚೆಂಡು ಬ್ಯಾಟ್‌ಗೆ ತುಂಬಾ ಚೆನ್ನಾಗಿ ಬರುತ್ತಿತ್ತು. ಪಿಚ್ ಎರಡೂ ಇನಿಂಗ್ಸ್‌ಗಳಲ್ಲೂ ಒಂದೇ ರೀತಿ ವರ್ತಿಸಿದೆ. ಇಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಶೇಪ್ ಕಾಯ್ದುಕೊಂಡು, ಕೇವಲ ಉತ್ತಮ ಕ್ರಿಕೆಟಿಂಗ್ ಶಾಟ್‌ಗಳನ್ನು ಆಡಿದರೆ ರನ್ ಗಳಿಸುವುದು ಸುಲಭವಾಗಿತ್ತು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: IPL 2026: ಡೆಡ್ ಬಾಲ್ನಲ್ಲಿ ಔಟ್ ನೀಡಿದ ಅಂಪೈರ್..!
ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ ಐಪಿಎಲ್ ಮುಂಬೈ ಇಂಡಿಯನ್ಸ್ ಪಾಲಿಗೆ ನಿರಾಶದಾಯಕ. ಆಡಿರುವ 14 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದಿರುವುದು ಕೇವಲ 4 ಮ್ಯಾಚ್ಗಳಲ್ಲಿ ಮಾತ್ರ. ಈ ನಾಲ್ಕು ಗೆಲುವಿನೊಂದಿಗೆ ಐದು ಬಾರಿಯ ಚಾಂಪಿಯನ್ ಅಂಕ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿರುವುದು ಅಭಿಮಾನಿಗಳ ಪಾಲಿಗೆ ಬೇಸರ ಸಂಗತಿ.
Published On - 9:27 am, Mon, 25 May 26





