IND vs NZ 1st T20: ಇಂದು ಭಾರತ-ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ: ಪಾಂಡ್ಯ ಪಡೆಗೆ ಮತ್ತೊಂದು ಅಗ್ನಿ ಪರೀಕ್ಷೆ
New Zealand vs India 1st T20I: ಇಂದು ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಸೋತ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳು ವಿಶ್ರಾಂತಿಯ ಬಳಿಕ ಮತ್ತೆ ಮುಖಾಮುಖಿ ಆಗುತ್ತಿದೆ. ಕಿವೀಸ್ ನಾಡಲ್ಲಿ ಬೀಡು ಬಿಟ್ಟಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಇಂದು ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಉತ್ಸಾಹಿ ತರುಣರಿಂದ ತಂಡ ಕೂಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಭಾರತ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ.
ಟೀಮ್ ಇಂಡಿಯಾ ಪರ ಓಪನರ್ಗಳಾಗಿ ಯಾರು ಆಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಿಷಬ್ ಪಂತ್, ಇಶಾನ್ ಕಿಶನ್ ಮತ್ತು ಶುಭ್‌ಮನ್ ಗಿಲ್ ಎಂಬ ಮೂರು ಆಯ್ಕೆಗಳಿವೆ. ಸಂಜು ಸ್ಯಾಮ್ಸನ್ ಮಿಂಚಬೇಕಾದ ಒತ್ತಡದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್, ದೀಪಕ್ ಹೂಡ ನಂತರದ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಆಯ್ಕೆ ಕೂಡ ಇದೆ. ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವ ನಿರೀಕ್ಷೆಯಿದೆ. ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಪೈಕಿ ಯಾರಿಗೆ ಸ್ಥಾನ ಎಂಬುದು ನೋಡಬೇಕಿದೆ. ಅಂತೆಯೆ ಟಿ20 ವಿಶ್ವಕಪ್ನಲ್ಲಿ ಒಂದೂ ಪಂದ್ಯವನ್ನು ಆಡದ ಯುಜ್ವೇಂದ್ರ ಚಹಲ್ ಇಂದು ಕಣಕ್ಕಿಳಿಯಲಿದ್ದಾರೆ.
ನ್ಯೂಜಿಲೆಂಡ್ ತಂಡ ಸ್ಟಾರ್ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮತ್ತು ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಕೇನ್ ವಿಲಿಯಮ್ಸನ್ ನಾಯಕತ್ವ ತಂಡದಕ್ಕಿದ್ದು, ಫಿನ್ ಅಲೆನ್, ಡೆವೊನ್ ಕಾನ್ವೆ, ಗ್ಲೆನ್ ಫಿಲಿಪ್ಸ್, ಡ್ಯಾರಿ ಮಿಚೆಲ್ರಂತಹ ಅಪಾಯಕಾರಿ ಬ್ಯಾಟರ್ಗಳಿದ್ದಾರೆ. ಟಿಮ್ ಸೌಥೀ, ಮಿಚೆಲ್ ಸ್ಯಾಂಟನರ್, ಆ್ಯಡಂ ಮಿಲ್ನೆ, ಲೂಕಿ ಫರ್ಗುಸನ್ರಂತಹ ಘಾತಕ ಬೌಲರ್ ಕೂಡ ಇದ್ದಾರೆ.
ಮಳೆ ಸಾಧ್ಯತೆ:
ವೆಲ್ಲಿಂಗ್ಟನ್ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಪಡಿಸಬಹುದು. ವೆಲ್ಲಿಂಗ್ಟನ್ ಬಿಡುಗಡೆ ಮಾಡಿರುವ ಹವಾಮಾನ ವರದಿಯ ಪ್ರಕಾರ, ಪಂದ್ಯದ ದಿನ ಬೆಳಗ್ಗೆ ಶೇ. 98 ರಷ್ಟು ಮಳೆ ಆಗಲಿದೆ ಎಂದು ಹೇಳಿದೆ. ಮಧ್ಯಾಹ್ನದ ಹೊತ್ತಿಗೆ ಶೇ. 73, ಸಂಜೆ ವೇಳೆಗೆ ಶೇ. 60 ರಷ್ಟು ಮಳೆ ಮತ್ತು ಪಂದ್ಯ ಆರಂಭವಾಗುವ ಹೊತ್ತಿಗೆ ಶೇ. 54 ರಷ್ಟು ಮಳೆ ಸುರಿಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಅದೇ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ 7:30 PM ಗೆ ಆರಂಭವಾಗುತ್ತದೆ. ಈ ಹೊತ್ತಿಗೆ ಶೇ. 54 ರಷ್ಟು ಮಳೆ ಬರುವ ಸಾಧ್ಯತೆ ಇದೆಯಂತೆ. ಹೀಗಾದಲ್ಲಿ ಪಂದ್ಯ ನಡೆಯುವುದು ಅನುಮಾನ. ತಾಪಮಾನ 15-19 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆಯಂತೆ. ವೆಲ್ಲಿಂಗ್ಟನ್ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿದ್ದು ಪಂದ್ಯ ಶುರುವಾದರೆ ದೊಡ್ಡ ಮೊತ್ತದ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.
ಪಂದ್ಯ ಎಷ್ಟು ಗಂಟೆಗೆ?:
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಬೆಳಗ್ಗೆ 11.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ನೇರ ಪ್ರಸಾರ ದೂರದರ್ಶನದಲ್ಲಿ ಇರಲಿದೆ. ಅಮೆಜಾನ್ ಪ್ರೈಮ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕಾಣಲಿದೆ.
ಉಭಯ ತಂಡಗಳು:
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
Published On - 7:55 am, Fri, 18 November 22