
ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾಗಮನದ ಕನಸಿಗೆ ಮತ್ತೊಮ್ಮೆ ಗಾಯದ ಆತಂಕ ಎದುರಾಗಿದೆ. ಬೆಂಗಳೂರಿನ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (CoE) ಯಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಅವರಿಗೆ ಕಾಲಿನ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, ಮುಂಬರುವ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಗೆ ಅವರು ಲಭ್ಯರಿರುವುದು ಅನುಮಾನ ಎನ್ನಲಾಗಿದೆ.
ಸೆಪ್ಟೆಂಬರ್ 13, 2026 ರಿಂದ ಆರಂಭವಾಗಲಿರುವ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂಲಕ ಪಾಂಡ್ಯ ಕಂಬ್ಯಾಕ್ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ಹೊಸ ಹಿನ್ನಡೆಯು ಬಿಸಿಸಿಐ ಆಯ್ಕೆ ಸಮಿತಿಗೆ ತಲೆನೋವು ತಂದಿಟ್ಟಿದೆ.
ಮೂಲಗಳ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅಭ್ಯಾಸದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ ಸಂಪೂರ್ಣ ವೇಗದಲ್ಲಿ ಬೌಲಿಂಗ್ ಮಾಡುವಾಗ ಅವರ ಕಾಲಿನಲ್ಲಿ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿದೆ.
ಬಿಸಿಸಿಐ ವೈದ್ಯಕೀಯ ತಂಡವು ಅವರ ಬೌಲಿಂಗ್ ಲೋಡ್ ಅನ್ನು ಸದ್ಯಕ್ಕೆ ಸ್ಥಗಿತಗೊಳಿಸುವಂತೆ ಸೂಚಿಸಿದೆ. ಸರಣಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವುದರಿಂದ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸುವುದು ಕಷ್ಟ ಎನ್ನಲಾಗುತ್ತಿದೆ. ಹೀಗಾಗಿ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಲ್ಲೂ ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.
ಏಷ್ಯನ್ ಗೇಮ್ಸ್ಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಸ್ಥಾನ ನೀಡಲಾಗಿಲ್ಲ. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಅವರು ಸಂಪೂರ್ಣ ಫಿಟ್ನೆಸ್ ಸಾಧಿಸಿದರೂ ಏಷ್ಯನ್ ಗೇಮ್ಸ್ನಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ.
ಅಂದರೆ ಹಾರ್ದಿಕ್ ಪಾಂಡ್ಯ ಕಂಬ್ಯಾಕ್ಗಾಗಿ ಅಕ್ಟೋಬರ್ವರೆಗೆ ಕಾಯಲೇಬೇಕು. ಅಕ್ಟೋಬರ್ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿ ನಡೆಯಲಿದ್ದು, ಈ ಸರಣಿಯ ಮೂಲಕ ಪಾಂಡ್ಯ ಅವರ ಪುನರಾಗಮನವನ್ನು ಎದುರು ನೋಡಬಹುದು.
ಇದನ್ನೂ ಓದಿ: ಶತಕದ ಪಂದ್ಯದಲ್ಲಿ ದಾಖಲೆಯ ಸೆಂಚುರಿ ಸಿಡಿಸಿದ ಹೆಟ್ಮೆಯರ್
ಏಷ್ಯನ್ ಗೇಮ್ಸ್ಗೆ ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪಾನಯಕ), ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ ಬುಮ್ರಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಶಿವಂ ದುಬೆ, ವರುಣ್ ಚಕ್ರವರ್ತಿ, ವೈಭವ್ ಸೂರ್ಯವಂಶಿ.