IPL 2022: ಪಂಜಾಬ್ ಕಿಂಗ್ಸ್ ವಿರುದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ಹಾದಿ ಕಠಿಣವಾಗಿದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್ಸಿಬಿಗೆ ಇನ್ನೂ ಒಂದು ಪಂದ್ಯವಿದ್ದು, ಈ ಪಂದ್ಯದಲ್ಲಿ ಉಭಯ ತಂಡಗಳು ಗೆದ್ದರೆ ಇಲ್ಲಿ ನೆಟ್ ರನ್ ರೇಟ್ ಲೆಕ್ಕಾಚಾರಗಳು ಬರಲಿದೆ. ಆದರೆ ಮತ್ತೊಂದೆಡೆ 3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೂ ಕೂಡ ಉಭಯ ತಂಡಗಳಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಏಕೆಂದರೆ ಪಾಯಿಂಟ್ಸ್ ಟೇಬಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು 16 ಪಾಯಿಂಟ್ಸ್ನೊಂದಿಗೆ 3ನೇ ಸ್ಥಾನದಲ್ಲಿದೆ. ಇಲ್ಲಿ ಲಕ್ನೋ ತಂಡದ ನೆಟ್ ರನ್ ರೇಟ್ ಇರುವುದು 0.262 ಮಾತ್ರ. ಅಂದರೆ ಕೊನೆಯ ಪಂದ್ಯದಲ್ಲಿ ಕೆಕೆಆರ್ ವಿರುದ್ದ ಗೆದ್ದರೆ ಮಾತ್ರ ಲಕ್ನೋ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಒಂದು ವೇಳೆ ಸೋತರೆ ನೆಟ್ ರನ್ ರೇಟ್ ಕಡಿಮೆಯಾಗಲಿದೆ. ಆದರೆ ಇಲ್ಲಿ ಲಕ್ನೋ ತಂಡದ ಸೋಲು ಆರ್ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಬೇಕಿದ್ದರೆ ಹೀನಾಯವಾಗಿ ಸೋಲಬೇಕು. ಅಂದರೆ ಕೆಕೆಆರ್ ವಿರುದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಬರೋಬ್ಬರಿ 80 ರನ್ಗಳ ಅಂತರದಿಂದ ಸೋಲಬೇಕಾಗುತ್ತದೆ.
ಇದನ್ನೂ ಓದಿ: IPL 2022: ಏನಿದು RCB ಹಾಲ್ ಆಫ್ ಫೇಮ್ ಪ್ರಶಸ್ತಿ?
ಇತ್ತ ಆರ್ಸಿಬಿ ತಂಡವು ಗುಜರಾತ್ ಟೈಟನ್ಸ್ ವಿರುದ್ದ 70 ರನ್ಗಳಿಗಿಂತ ಅಧಿಕ ರನ್ಗಳಿಂದ ಗೆದ್ದರೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕಿಂತ ಹೆಚ್ಚಿನ ನೆಟ್ ರನ್ ರೇಟ್ ಪಡೆಯಬಹುದು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೂ, ಆರ್ಸಿಬಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಫಲಿತಾಂಶವನ್ನು ಆಧರಿಸಿ ಪ್ಲೇಆಫ್ಗೆ ಪ್ರವೇಶಿಸಬಹುದು. ಇದಕ್ಕಾಗಿ ಲಕ್ನೋ ತಂಡವು ಕೆಕೆಆರ್ ವಿರುದ್ದ 80 ರನ್ಗಳಿಂದ ಸೋತು, ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ 70 ರನ್ಗಳಿಂದ ಗೆಲ್ಲಬೇಕು. ಇದರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ ರನ್ ರೇಟ್ ಕುಸಿಯಲಿದೆ. ಇತ್ತ ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಆರ್ಸಿಬಿ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಶಿಸಬಹುದು.
ಇದರ ಹೊರತಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಸೋತರೆ, ಆರ್ಸಿಬಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಅಂದರೆ ಡೆಲ್ಲಿ ವಿರುದ್ದ ಮುಂಬೈ ಗೆದ್ದರೆ, ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಗೆಲುವು ಸಾಧಿಸಿದರೆ ಸಾಕು. ಈ ಮೂಲಕ 16 ಪಾಯಿಂಟ್ಸ್ನೊಂದಿಗೆ ನೇರವಾಗಿ ಪ್ಲೇಆಫ್ ಪ್ರವೇಶಿಸಬಹುದು. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಮುಂದಿನ ಪಂದ್ಯದಲ್ಲಿ ಗೆದ್ದರೆ, ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ದ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್ ಪ್ರವೇಶಿಸಬಹುದು.
ಒಟ್ಟಿನಲ್ಲಿ ಆರ್ಸಿಬಿ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲು ಇದೀಗ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಫಲಿತಾಂಶಗಳನ್ನು ಎದುರು ನೋಡಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:25 pm, Tue, 17 May 22