ಕೌಲಾಲಂಪುರ್ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಬಯುಮಾಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬಹ್ರೇನ್ ಮತ್ತು ಹಾಂಗ್ ಕಾಂಗ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹಾಂಗ್ ಕಾಂಗ್ ಪರ ಜೀಶನ್ ಅಲಿ 29 ರನ್ ಬಾರಿಸಿದರೆ, ಶಾಹಿದ್ ವಾಸಿಫ್ 31 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಹಾಂಗ್ ಕಾಂಗ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಕಲೆಹಾಕಿತು.
130 ರನ್ಗಳ ಸುಲಭ ಗುರಿ ಬೆನ್ನತ್ತಿದ ಬಹ್ರೇನ್ ಪರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪ್ರಶಾಂತ್ ಕುರುಪ್ 31 ರನ್ ಬಾರಿಸಿದರು. ಇನ್ನು ನಾಯಕ ಅಹ್ಮರ್ ಬಿನ್ ನಾಸಿರ್ 24 ಎಸೆತಗಳಲ್ಲಿ 36 ರನ್ ಚಚ್ಚಿದರು. ಇದಾಗ್ಯೂ ಕೊನೆಯ ಓವರ್ನಲ್ಲಿ ಗೆಲ್ಲಲು 13 ರನ್ಗಳ ಅವಶ್ಯಕತೆಯಿತ್ತು.
ನಸ್ರುಲ್ಲಾ ರಾಣಾ ಎಸೆದ 20ನೇ ಓವರ್ನ ಮೊದಲ 5 ಎಸೆತಗಳಲ್ಲಿ ಬಹ್ರೇನ್ ಬ್ಯಾಟರ್ಗಳು 12 ರನ್ ಕಲೆಹಾಕಿದರು. ಆದರೆ ಕೊನೆಯ ಎಸೆತದಲ್ಲಿ ಅಹ್ಮರ್ ನಾಸಿರ್ ಕ್ಯಾಚ್ ನೀಡಿದರು. ಪರಿಣಾಮ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತು.
ಪಂದ್ಯವು ಟೈ ಆದ ಕಾರಣ ಫಲಿತಾಂಶಕ್ಕಾಗಿ ಸೂಪರ್ ಓವರ್ ಆಡಿಸಲಾಯಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಬಹ್ರೇನ್ ಪರ ಆರಂಭಿಕರಾಗಿ ಅಹ್ಮರ್ ನಾಸಿರ್ ಮತ್ತು ಆಸಿಫ್ ಅಲಿ ಕಣಕ್ಕಿಳಿದರು.
ಹಾಂಗ್ ಕಾಂಗ್ ಬೌಲರ್ ಎಹ್ಸಾನ್ ಖಾನ್ ಎಸೆದ ಸೂಪರ್ ಓವರ್ನ ಮೊದಲ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿಲ್ಲ. ಎರಡನೇ ಎಸೆತದಲ್ಲಿ ಅಹ್ಮರ್ ನಾಸಿರ್ (0) ಔಟಾದರು. ಮೂರನೇ ಎಸೆತದಲ್ಲಿ ಸೊಹೈಲ್ ಅಹ್ಮದ್ (0) ಕೂಡ ಕ್ಯಾಚ್ ನೀಡಿದ್ದಾರೆ. ಇದರೊಂದಿಗೆ ಬಹ್ರೇನ್ ತಂಡ ಸೂಪರ್ ಓವರ್ನಲ್ಲಿ ಶೂನ್ಯಕ್ಕೆ ಆಲೌಟ್ ಆದ ಅನಗತ್ಯ ದಾಖಲೆಯನ್ನು ಬರೆಯಿತು.
ಇನ್ನು ಒಂದು ರನ್ಗಳ ಗುರಿ ಪಡೆದ ಹಾಂಗ್ ಕಾಂಗ್ ತಂಡವು ಮೂರು ಎಸೆತಗಳನ್ನು ಎದುರಿಸಿದ್ದರು. ಈ ಮೂಲಕ ರಣರೋಚಕ 0 ರನ್ಗಳ ಸೂಪರ್ ಓವರ್ ಫೈಟ್ನಲ್ಲಿ ಕೊನೆಗೂ ಹಾಂಗ್ ಕಾಂಗ್ ತಂಡ ಗೆಲುವು ದಾಖಲಿಸಿತು.
ಇದನ್ನೂ ಓದಿ: ವಿಶ್ವ ದಾಖಲೆ… ಮುಂಬೈ ಇಂಡಿಯನ್ಸ್ ಮುಡಿಗೆ 12ನೇ ಟ್ರೋಫಿ
ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ತಂಡವೊಂದು ಸೂಪರ್ ಓವರ್ನಲ್ಲಿ ಬ್ಯಾಟ್ ಮಾಡಿ 0 ರನ್ಗಳಿಸಿದೆ. ಅಲ್ಲದೆ ಎದುರಾಳಿ ತಂಡಕ್ಕೆ ಕೇವಲ 1 ರನ್ಗಳ ಗುರಿ ನೀಡಿದೆ. ಈ ಮೂಲಕ ಬಹ್ರೇನ್ ತಂಡವು ಟಿ20 ಕ್ರಿಕೆಟ್ನಲ್ಲಿ 0 ರನ್ಗಳೊಂದಿಗೆ ಅನಗತ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
Published On - 12:53 pm, Sun, 16 March 25