IPL 2025: ರಿಂಕು ಸಿಂಗ್ ಸಿಡಿಲಬ್ಬರ: 277 ರನ್ ಚಚ್ಚಿದ KKR-P
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್-18 ಮಾರ್ಚ್ 22 ರಿಂದ ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಐಪಿಎಲ್ 2025 ಕ್ಕೆ ಚಾಲನೆ ದೊರೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಕ್ಕಾಗಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ತಯಾರಿ ಆರಂಭಿಸಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೆಕೆಆರ್ ಅಭ್ಯಾಸ ಪಂದ್ಯಗಳನ್ನಾಡುತ್ತಿದ್ದು, ಈ ಪಂದ್ಯದ ವೇಳೆ ರಿಂಕು ಸಿಂಗ್, ಕ್ವಿಂಟನ್ ಡಿಕಾಕ್, ಆ್ಯಂಡ್ರೆ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಅಭ್ಯಾಸ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ್ಪಲ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಗೋಲ್ಡ್ ಹೆಸರಿನಲ್ಲಿ ಕೆಕೆಆರ್ ಆಟಗಾರರನ್ನು ಕಣಕ್ಕಿಳಿಸಲಾಗಿತ್ತು. ಇಲ್ಲಿ KKR-P ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದರೆ, KKR-G ತಂಡದ ನಾಯಕರಾಗಿ ವೆಂಕಟೇಶ್ ಅಯ್ಯರ್ ಕಾಣಿಸಿಕೊಂಡಿದ್ದಾರೆ.
ಅದರಂತೆ ಮೊದಲು ಬ್ಯಾಟ್ ಮಾಡಿದ KKR-ಗೋಲ್ಡ್ ತಂಡದ ಪರ ವೆಂಕಟೇಶ್ ಅಯ್ಯರ್ ಅಜೇಯ 61 ರನ್ ಬಾರಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಲವ್ನೀತ್ ಸಿಸೋಡಿಯಾ 46 ರನ್ ಗಳಿಸಿದರು. ಈ ಮೂಲಕ KKR-G ತಂಡ 20 ಓವರ್‌ಗಳಲ್ಲಿ 215 ರನ್ ಕಲೆಹಾಕಿದೆ.
216 ರನ್ಗಳ ಗುರಿ ಪಡೆದ KKR-ಪರ್ಪಲ್ ಪರ ಆರಂಭಿಕನಾಗಿ ಕಣಕ್ಕಿಳಿದ ಎಡಗೈ ದಾಂಡಿಗ ಕ್ವಿಂಟನ್ ಡಿಕಾಕ್ ಕೇವಲ 22 ಎಸೆತಗಳಲ್ಲಿ 52 ರನ್ ಚಚ್ಚಿದ್ದಾರೆ. ಇನ್ನು ಆ್ಯಂಡ್ರೆ ರಸೆಲ್ 23 ಎಸೆತಗಳಲ್ಲಿ ಅಜೇಯ 59 ರನ್ ಬಾರಿಸಿದರು. ಮತ್ತೊಂದೆಡೆ ರಿಂಕು ಸಿಂಗ್ ಕೂಡ ಸಿಡಿಲಬ್ಬರ ಪ್ರದರ್ಶಿಸಿದರು.
ಪರಿಣಾಮ KKR-P ತಂಡವು 15.5 ಓವರ್‌ಗಳಲ್ಲಿ 216 ರನ್‌ಗಳನ್ನು ಗಳಿಸಿದೆ. ಇದಾದ ಬಳಿಕ ಬ್ಯಾಟಿಂಗ್ ಮುಂದುವರೆಸಿದ ಕೊಲ್ಕತ್ತಾ ನೈಟ್ ರೈಡರ್ಸ್ ಪರ್ಪಲ್ ತಂಡಕ್ಕೆ 250 ರನ್ಗಳ ಗುರಿ ನೀಡಲಾಯಿತು. ಈ ವೇಳೆ ಸಿಕ್ಸ್-ಫೋರ್ಗಳ ಸುರಿಮಳೆಗೈದ ರಿಂಕು ಸಿಂಗ್ ತಮ್ಮದೇ ತಂಡದ ಬೌಲರ್ಗಳ ಬೆಂಡೆತ್ತಿದರು.
17.5 ಓವರ್‌ಗಳಲ್ಲಿ 250 ರನ್ಗಳ ಗುರಿ ತಲುಪಿದ KKR-P ತಂಡಕ್ಕೆ ಮತ್ತೆ 280 ರನ್ಗಳ ಟಾರ್ಗೆಟ್ ನೀಡಲಾಗಿದೆ. ಆದರೆ ಕೊನೆಯ 13 ಎಸೆತಗಳಲ್ಲಿ KKR-ಪರ್ಪಲ್ ಬ್ಯಾಟರ್ಗಳು 27 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 20 ಓವರ್‌ಗಳಲ್ಲಿ 277 ರನ್ ಬಾರಿಸಿ, ಮೂರನೇ ಟಾರ್ಗೆಟ್ನಲ್ಲಿ ಸೋಲೊಪ್ಪಿಕೊಂಡಿತು.
ರಿಂಕು ಸಿಂಗ್ ಬ್ಯಾಟಿಂಗ್:
Walked in and chose destruction! 40* (19) for Rinku 😮💨🔥
Follow our Knights LIVE & EXCLUSIVELY on the Knight Club app! https://t.co/9JbRDlx0kS 📲🔗 pic.twitter.com/9QmTyeoltK
— KolkataKnightRiders (@KKRiders) March 15, 2025
ಇನ್ನು KKR-ಪರ್ಪಲ್ ತಂಡದ ತಂಡದ ಪರ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಿಂಕು ಸಿಂಗ್ ಕೇವಲ 33 ಎಸೆತಗಳಲ್ಲಿ ಅಜೇಯ 77 ರನ್ ಬಾರಿಸಿ ಮೊದಲೆರಡು ಟಾರ್ಗೆಟ್ಗಳ ಗೆಲುವಿನ ರೂವಾರಿ ಎನಿಸಿಕೊಂಡರು.
Published On - 10:23 am, Sun, 16 March 25