ಕ್ರಿಕೆಟ್ ದೇವರ ಶತಕದ ಶತಕಕ್ಕೆ ಭರ್ತಿ 13 ವರ್ಷ; ಆ ಪಂದ್ಯದ ಫಲಿತಾಂಶ ಏನಾಗಿತ್ತು ಗೊತ್ತಾ?
Sachin Tendulkar's Unbreakable Record: ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಪೂರೈಸಿ ಇಂದಿಗೆ 13 ವರ್ಷಗಳು ತುಂಬಿವೆ. ಬಿಸಿಸಿಐ ಅವರಿಗೆ ಅಭಿನಂದನೆ ಸಲ್ಲಿಸಿದೆ. ಮಾರ್ಚ್ 16, 2012 ರಂದು ಮೀರ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದರು. ಆದಾಗ್ಯೂ ಭಾರತ ಈ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲಬೇಕಾಯಿತು.

ಕ್ರಿಕೆಟ್ ಲೋಕದಲ್ಲಿ ಅಸಂಖ್ಯಾತ ದಾಖಲೆಗಳ ಸರಮಾಲೆ ಕಟ್ಟಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹಲವು ದಾಖಲೆಗಳನ್ನು ಭವಿಷ್ಯದಲ್ಲಿ ಮುರಿಯಲು ಸಾಧ್ಯವೇ ಇಲ್ಲ ಎನ್ನಲಾಗುತ್ತದೆ. ಅಂತಹ ದಾಖಲೆಗಳಲ್ಲಿ ನೂರು ಶತಕಗಳ ದಾಖಲೆಯೂ ಒಂದಾಗಿದೆ. ಹೌದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿರುವ ಏಕೈಕ ಕ್ರಿಕೆಟಿಗನೆಂದರೆ ಸಚಿನ್ ತೆಂಡೂಲ್ಕರ್. ಅವರನ್ನು ಹೊರತುಪಡಿಸಿ ಮತ್ತ್ಯಾವ ಆಟಗಾರನಿಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಸಚಿನ್ ಇಂತಹ ದಾಖಲೆಯನ್ನು ನಿರ್ಮಿಸಿ ಇಂದಿಗೆ ಭರ್ತಿ 13 ವರ್ಷಗಳಾಗಿವೆ. ಕ್ರಿಕೆಟ್ ದೇವರ ಈ ಶತಕದ ಶತಕಗಳ ಸಾಧನೆಯನ್ನು ಸ್ಮರಿಸಿರುವ ಬಿಸಿಸಿಐ (BCCI), ಕ್ರಿಕೆಟ್ನ ಸವ್ಯಸಾಚಿಗೆ ಅಭಿನಂದನೆ ಸಲ್ಲಿಸಿದೆ.
13 ವರ್ಷಗಳ ಹಿಂದೆ ಇದೇ ದಿನ ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಪೂರೈಸಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಷ್ಟೊಂದು ಶತಕಗಳನ್ನು ಬಾರಿಸಿರುವ ಆಟಗಾರನಾಗಿರುವ ಸಚಿನ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಟೆಸ್ಟ್‌ನಲ್ಲಿ 51 ಶತಕಗಳು ಮತ್ತು ಏಕದಿನ ಮಾದರಿಯಲ್ಲಿ 49 ಶತಕಗಳನ್ನು ಸಿಡಿಸಿದ್ದಾರೆ.
A century of centuries! 💯#OnThisDay in 2012, the legendary @sachin_rt scored his 💯th international hundred – the only cricketer to achieve this feat 👏👏#TeamIndia pic.twitter.com/XJ9Bzlb9bO
— BCCI (@BCCI) March 16, 2025
ಶತಕಗಳ ಸರದಾರನಿಗೆ ಅಗ್ರಸ್ಥಾನ
ಮೇಲೆ ಹೇಳಿದಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಹೊರತುಪಡಿಸಿ, ಭಾರತದ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 82 ಶತಕಗಳನ್ನು ಗಳಿಸಿದ್ದಾರೆ, ಆದರೆ ಅವರು ಸಚಿನ್‌ಗಿಂತ ಬಹಳ ಹಿಂದಿದ್ದಾರೆ. ಈ ಇಬ್ಬರ ನಂತರ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಹೆಸರಿನಲ್ಲಿ 71 ಅಂತರರಾಷ್ಟ್ರೀಯ ಶತಕಗಳಿವೆ. ಏಕದಿನ ಮಾದರಿಯಲ್ಲಿ ಅಧಿಕ ಶತಕ ಬಾರಿಸಿದವರಲ್ಲಿ ಕೊಹ್ಲಿ, ಸಚಿನ್‌ರನ್ನು ಹಿಂದಿಕ್ಕಿದ್ದರೂ, ಒಟ್ಟಾರೆಯಾಗಿ ಅವರು ಇನ್ನೂ ಸಚಿನ್‌ಗಿಂತ ಹಿಂದಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಶತಕದ ಶತಕ
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಪಂದ್ಯದ ವೇಳೆ ಸಚಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಪೂರೈಸಿದ ಸಾಧನೆ ಮಾಡಿದರು. ಮಾರ್ಚ್ 16, 2012 ರಂದು ಮೀರ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ, ಸಚಿನ್ 147 ಎಸೆತಗಳಲ್ಲಿ 114 ರನ್ ಗಳಿಸಿದರು. ಸಚಿನ್ ಸಿಡಿಸಿದ ಈ ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ಭಾರತ ಐದು ವಿಕೆಟ್‌ಗಳಿಗೆ 289 ರನ್ ಗಳಿಸಿತು. ಆದಾಗ್ಯೂ ಭಾರತ ಈ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಸೋಲಬೇಕಾಯಿತು.
ಇದನ್ನೂ ಓದಿ: Sachin Tendulkar: ಭಾರತ ರತ್ನ ಸಚಿನ್ ತೆಂಡೂಲ್ಕರ್ ಕಿರೀಟಕ್ಕೆ ಜೀವಮಾನ ಸಾಧನೆ ಪ್ರಶಸ್ತಿ ಗರಿ
2013 ರಲ್ಲಿ ನಿವೃತ್ತಿ
ಮಾಸ್ಟರ್ ಬ್ಲಾಸ್ಟರ್ ಎಂದೇ ಖ್ಯಾತರಾದ ಸಚಿನ್, ತಮ್ಮ ಏಕದಿನ ವೃತ್ತಿಜೀವನದಲ್ಲಿ 18426 ರನ್ ಗಳಿಸಿದ್ದರು. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 463 ಏಕದಿನ ಪಂದ್ಯಗಳನ್ನು ಆಡಿದ್ದು, ಮಾರ್ಚ್ 18, 2012 ರಂದು ಮಿರ್ಪುರದಲ್ಲಿ ಪಾಕಿಸ್ತಾನ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಹಾಗೆಯೇ ತಮ್ಮ ವೃತ್ತಿಜೀವನದಲ್ಲಿ ಒಟ್ಟು ಆರು ಏಕದಿನ ವಿಶ್ವಕಪ್‌ಗಳನ್ನು ಆಡಿದ್ದ ಸಚಿನ್, ಅತಿ ಹೆಚ್ಚು ಬಾರಿ ಏಕದಿನ ವಿಶ್ವಕಪ್ ಆಡಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಸಚಿನ್ 2013 ರ ನವೆಂಬರ್ 16 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




