ಒಬ್ಬಂಟಿಯಾಗಿ ಕುಳಿತು ಅಳಬೇಕ?: ಕುಟುಂಬವನ್ನು ದೂರವಿಟ್ಟ ಬಿಸಿಸಿಐ ವಿರುದ್ಧ ಗುಡುಗಿದ ವಿರಾಟ್ ಕೊಹ್ಲಿ
Virat Kohli Criticizes BCCI's Family Restriction Rule: ವಿರಾಟ್ ಕೊಹ್ಲಿ ಅವರು ಬಿಸಿಸಿಐನ ಹೊಸ ಕುಟುಂಬ ನಿಯಮದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಉಪಸ್ಥಿತಿಯನ್ನು ಸೀಮಿತಗೊಳಿಸುವ ಈ ನಿಯಮವು ಆಟಗಾರರ ಮನೋಬಲವನ್ನು ಕುಗ್ಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕುಟುಂಬದ ಬೆಂಬಲವು ಆಟಗಾರರಿಗೆ ಅತ್ಯಗತ್ಯ ಎಂದು ಒತ್ತಿ ಹೇಳಿದ ಕೊಹ್ಲಿ, ಈ ನಿಯಮವು ಅನ್ಯಾಯಕರ ಎಂದೂ ಹೇಳಿದ್ದಾರೆ. ಆಟಗಾರರ ಕಳಪೆ ಪ್ರದರ್ಶನಕ್ಕೆ ಕುಟುಂಬವನ್ನು ದೂಷಿಸುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ (Virat KOhli) ಮಾರ್ಚ್ 15 ರಂದು ತಮ್ಮ ಐಪಿಎಲ್ ತಂಡವನ್ನು ಸೇರಿಕೊಂಡರು. ಈ ದಿನದಂದು ಫ್ರಾಂಚೈಸಿ, ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ‘ಇನ್ನೋವೇಷನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಅಂತಹ ಪ್ರಶ್ನೆಗಳಲ್ಲಿ ಇತ್ತೀಚೆಗೆ ಬಿಸಿಸಿಐ ತಂದಿರುವ ಕುಟುಂಬವನ್ನು ಆಟಗಾರರಿಂದ ದೂರವಿಡುವ ನಿಯಮದ ಬಗ್ಗೆಯೂ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಬೇಸರದಿಂದಲೇ ಉತ್ತರಿಸಿದ ಕೊಹ್ಲಿ, ಆಟಗಾರರ ಕಳಪೆ ಪ್ರದರ್ಶನಕ್ಕೂ ಕುಟುಂಬ ಸದಸ್ಯರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಆಟಗಾರರ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬಸ್ಥರ ಉಪಸ್ಥಿತಿ ಖಂಡಿತವಾಗಿಯೂ ಆಟಗಾರರಿಗೆ ನೆರವಾಗಲಿದೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಿಯಮದ ಬಗ್ಗೆ ಕೊಹ್ಲಿ ಹೇಳಿದ್ದೇನು?
ಪ್ರವಾಸದ ಸಮಯದಲ್ಲಿ ಕುಟುಂಬದವರ ಉಪಸ್ಥಿತಿಯನ್ನು ಸೀಮಿತಗೊಳಿಸಿ ಕಳಪೆ ಪ್ರದರ್ಶನಕ್ಕೆ ಅವರನ್ನು ದೂಷಿಸಿದ್ದಕ್ಕಾಗಿ ನಿರಾಶೆ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ, ‘ಮೈದಾನದಲ್ಲಿ ಏನಾದರೂ ಆಟಗಾರನಿಗೆ ಅಹಿತಕರ ಸಂಗತಿ ನಡೆದರೆ, ಆತನಿಗೆ ಕುಟುಂಬದ ನೆರವು ಎಷ್ಟು ಮುಖ್ಯ ಎಂಬುದನ್ನು ಇಂತಹವರು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಆಟದ ಮೇಲೆ ನಿಯಂತ್ರಣವಿಲ್ಲದವರನ್ನು ಗುರಿಯಾಗಿಸಿ ಅವರನ್ನು ಆಟಗಾರರಿಂದ ದೂರವಿಡುವುದು ನನಗೆ ತುಂಬಾ ನಿರಾಶೆಯಾಗಿದೆ. ಅನವಶ್ಯಕವಾಗಿ ಆಟಗಾರರ ಕುಟುಂಬದ ಮೇಲೆ ಆರೋಪ ಹೊರಿಸಲಾಗುತ್ತಿದೆ.
ಆಟಗಾರನಿಗೆ ಅವನ ಕುಟುಂಬ ಬಹಳ ಮುಖ್ಯ
ಇದೇ ಸಂದರ್ಭದಲ್ಲಿ ಆಟಗಾರರು ತಮ್ಮ ಪ್ರದರ್ಶನವನ್ನು ಸುಧಾರಿಸಲು ಕುಟುಂಬವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದ ವಿರಾಟ್ ಕೊಹ್ಲಿ, ‘ನಿಮ್ಮ ಕುಟುಂಬ ನಿಮ್ಮ ಜೊತೆಯೇ ಇರಬೇಕಾ ಎಂಬ ಪ್ರಶ್ನೆಯನ್ನು ಯಾವುದೇ ಆಟಗಾರನನ್ನು ನೀವು ಕೇಳಿದರೆ, ಅವನು ಖಂಡಿತವಾಗಿಯೂ ಹೌದು ಎಂದು ಹೇಳುತ್ತಾನೆ. ಆಟದ ವೇಳೆ ಆಟಗಾರನಿಗೆ ಅಹಿತಕರ ಘಟನೆ ನಡೆದರೆ, ಆತ ಕೋಣೆಯಲ್ಲಿ ಒಬ್ಬಂಟಿಯಾಗಿ ಕುಳಿತು ದುಃಖಿತನಾಗಲು ಬಯಸುವುದಿಲ್ಲ. ಇಂತಹ ಸಂದರ್ಭದಲ್ಲಿ ಆತನ ಕುಟುಂಬ ಆತನನ್ನು ಆ ದುಃಖದಿಂದ ಬಹುಬೇಗನೇ ಹೊರಗೆ ಕರೆದುಕೊಂಡು ಬರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಷರತ್ತಿನ ಮೇರೆಗೆ ಟಿ20 ಕ್ರಿಕೆಟ್ಗೆ ಮರಳುತ್ತೇನೆ ಎಂದ ಕೊಹ್ಲಿ; ವಿಡಿಯೋ ನೋಡಿ
ಬಿಸಿಸಿಐ ನಿಯಮ ಹೇಳುವುದೇನು?
ವಾಸ್ತವವಾಗಿ ಕಳೆದ ವರ್ಷ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆ ನಂತರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಸೇರಿದಂತೆ ಅನೇಕ ಆಟಗಾರರು ಸಂಪೂರ್ಣವಾಗಿ ವಿಫಲರಾದರು. ಇದಾದ ನಂತರ, ಬಿಸಿಸಿಐ ಕಟ್ಟುನಿಟ್ಟಾದ ಪ್ರಯಾಣ ನಿಯಮವನ್ನು ರೂಪಿಸಿತು. ಅದರಡಿಯಲ್ಲಿ ವಿದೇಶಿ ಪ್ರವಾಸಗಳ ಸಮಯದಲ್ಲಿ ಆಟಗಾರರ ಕುಟುಂಬಗಳ ಉಪಸ್ಥಿತಿಯನ್ನು ಸೀಮಿತಗೊಳಿಸಿತು. ನಿಯಮಗಳ ಪ್ರಕಾರ, ಈಗ ಆಟಗಾರರ ಮಡದಿಯರು ಮತ್ತು ಅವರ ಮಕ್ಕಳು ಪ್ರತಿ ಸರಣಿಯಲ್ಲಿ ಎರಡು ವಾರಗಳವರೆಗೆ ಮಾತ್ರ ಆಟಗಾರರ ಜೊತೆಗಿರಬೇಕು. ಬಿಸಿಸಿಐನ ಈ ನಿಯಮ ತಂಡದ ಭಾಗಶಃ ಆಟಗಾರರಲ್ಲಿ ಅಸಮಾಧಾನ ಮೂಡಿಸಿದೆ ಎಂಬುದು ಕೊಹ್ಲಿಯ ಈ ಹೇಳಿಕೆಯಿಂದ ಖಚಿತವಾದಂತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Sun, 16 March 25




