IML 2025: ಸಚಿನ್, ಯುವಿ ಸಿಡಿಲಬ್ಬರ; ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಫೈನಲ್ಗೇರಿದ ಇಂಡಿಯಾ
International Masters League T20: ರಾಯ್‌ಪುರದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ20 ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದೆ. 220 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕೇವಲ 126 ರನ್ಗಳಿಗೆ ಆಲೌಟ್ ಆಯಿತು. ಯುವರಾಜ್ ಸಿಂಗ್ (59) ಮತ್ತು ಸಚಿನ್ ತೆಂಡೂಲ್ಕರ್ (42) ಅವರ ಅದ್ಭುತ ಬ್ಯಾಟಿಂಗ್ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಗೆಲುವು ತಂದುಕೊಟ್ಟಿತು.

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ20 ಲೀಗ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು, ಶೇನ್ ವಾಟ್ಸನ್ ನಾಯಕತ್ವದ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವನ್ನು ಹೀನಾಯವಾಗಿ ಮಣಿಸಿ ಮೊದಲ ತಂಡವಾಗಿ ಫೈನಲ್ಗೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ ತಂಡ 20 ಓವರ್‌ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡ, ಇಂಡಿಯಾ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 126 ರನ್ಗಳಿಗೆ ಆಲೌಟ್ ಆಯಿತು.
ಭಾರತಕ್ಕೆ ಆರಂಭಿಕ ಆಘಾತ
ಈ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಅಂಬಾಟಿ ರಾಯುಡು ಕೇವಲ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಪವನ್ ನೇಗಿ 46 ರನ್ಗಳ ಜೊತೆಯಾಟ ಕಟ್ಟಿದರು. ಈ ವೇಳಿ ನೇಗಿ 14 ರನ್ ಬಾರಿಸಿ ಔಟಾದರು.
ಸಚಿನ್- ಯುವಿ ಸ್ಫೋಟಕ ಬ್ಯಾಟಿಂಗ್
ನಂತರ ಬಂದ ಯುವರಾಜ್ ಸಿಂಗ್ ತಮ್ಮ ಹೊಡಿಬಡಿ ಆಟದ ಮೂಲಕ ಬೌಂಡರಿಗಳ ಮಳೆಗರೆದರು. ಯುವಿ ಕೇವಲ 30 ಎಸೆತಗಳಲ್ಲಿ 1 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್ಗಳ ಸಹಿತ 59 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಆದರೆ ಯುವಿ ವಿಕೆಟ್ ಪತನಕ್ಕೂ ಮುನ್ನ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ನಾಯಕ ಸಚಿನ್ ಕೂಡ 30 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 42 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಟುವರ್ಟ್ ಬಿನ್ನಿ 36 ರನ್, ಯೂಸುಫ್ ಪಠಾಣ್ 36 ರನ್, ಇರ್ಫಾನ್ ಪಠಾಣ್ 19 ರನ್ ಬಾರಿಸಿ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 220 ರನ್ಗಳಿಗೆ ಕೊಂಡೊಯ್ದರು.
ತತ್ತರಿಸಿದ ಆಸ್ಟ್ರೇಲಿಯಾ ಇನ್ನಿಂಗ್ಸ್
ಗೆಲ್ಲಲು 221 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡಕ್ಕೆ ಯಾವ ಹಂತದಲ್ಲೂ ಒಂದು ಉತ್ತಮ ಜೊತೆಯಾಟ ಸಿಕ್ಕಲಿಲ್ಲ. ತಂಡ 15 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರ ಶಾನ್ ಮಾರ್ಷ್, ಬೆನ್ ಡಂಕ್ ಹಾಗೂ ನಾಥನ್ ರಿಯರ್ಡನ್ ತಲಾ 21 ರನ್ಗಳನ್ನು ಕಲೆಹಾಕಿ ಇನ್ನಿಂಗ್ಸ್ ನಿಭಾಯಿಸುವ ಕೆಲಸಕ್ಕೆ ಮುಂದಾದರಾದರೂ ಅದಕ್ಕೆ ಭಾರತದ ಬೌಲರ್ಗಳು ಅವಕಾಶ ನೀಡಲಿಲ್ಲ. ತಂಡದ ಪರ ಏಕಾಂಗಿ ಹೋರಾಟ ನಿಡಿದ ಬೆನ್ ಕಟ್ಟಿಂಗ್ 39 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡ 18.1 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಲಷ್ಟೇ ಶಕ್ತವಾಗಿ 94 ರನ್ಗಳಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 pm, Thu, 13 March 25