ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಆ ’18 ರನ್‌ಗಳು’

ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಬ್ಯಾಟರ್‌ಗಳು ಗಳಿಸಿದ ರನ್‌ಗಳಿಗಿಂತ, ಬೌಲರ್‌ಗಳು ಉಡುಗೊರೆಯಾಗಿ ನೀಡಿದ ರನ್‌ಗಳೇ ಪಂದ್ಯದ ಹಣೆಬರಹವನ್ನು ನಿರ್ಧರಿಸುತ್ತವೆ! ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಿಸಿದ 24 ರನ್‌ಗಳ ಆಘಾತಕಾರಿ ಸೋಲಿನ ಹಿಂದೆ ಇಂತಹುದೇ ಒಂದು ಅಚ್ಚರಿಯ ಲೆಕ್ಕಾಚಾರ ಅಡಗಿದೆ.

ಟೀಮ್ ಇಂಡಿಯಾ ಸೋಲಿಗೆ ಕಾರಣವಾದ ಆ 18 ರನ್‌ಗಳು
Team India
Image Credit source: GettyImages

Updated on: Oct 15, 2026 | 8:03 AM

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ 24 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ವೆಸ್ಟ್ ಇಂಡೀಸ್ ನೀಡಿದ 248 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ದಿಟ್ಟ ಹೋರಾಟ ನಡೆಸಿದರೂ ಅಂತಿಮವಾಗಿ 223 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳು ಉತ್ತಮ ಪ್ರದರ್ಶನ ನೀಡಿದರೂ, ಬೌಲಿಂಗ್ ಅವಧಿಯಲ್ಲಿ ಬೌಲರ್‌ಗಳು ಮಾಡಿದ ಸಣ್ಣ ತಪ್ಪುಗಳು ಇಡೀ ಪಂದ್ಯದ ಫಲಿತಾಂಶವನ್ನು ಬದಲಾಯಿಸಿತು ಎಂದರೆ ತಪ್ಪಾಗಲಾರದು. ಏಕೆಂದರೆ,ಈ ಮ್ಯಾಚ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಎದುರಾಳಿಗೆ ಉಡುಗೊರೆಯಾಗಿ ನೀಡಿದ ಹೆಚ್ಚುವರಿ ರನ್‌ಗಳು ಬರೋಬ್ಬರಿ 18!

ಪಂದ್ಯದ ಅಂತಿಮ ಫಲಿತಾಂಶ ಕೇವಲ 24 ರನ್‌ಗಳ ಅಂತರದಿಂದ ನಿರ್ಧಾರವಾಗಿರುವುದರಿಂದ, ಭಾರತೀಯ ಬೌಲರ್‌ಗಳು ಶಿಸ್ತಿಲ್ಲದೆ ಎಸೆದ ಆ 18 ರನ್‌ಗಳೇ ಸೋಲಿಗೆ ನೇರ ಕಾರಣ ಎನ್ನಬಹುದು. ಏಕೆಂದರೆ ಹೈದರಾಬಾದ್‌ನ ಫ್ಲಾಟ್ ಪಿಚ್‌ನಲ್ಲಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಅಬ್ಬರಿಸುತ್ತಿದ್ದರೆ, ಭಾರತೀಯ ಬೌಲರ್‌ಗಳು ಒತ್ತಡಕ್ಕೆ ಮಣಿದು ಲೈನ್ ಮತ್ತು ಲೆಂತ್ ಕಳೆದುಕೊಂಡರು. ಪರಿಣಾಮ ವೆಸ್ಟ್ ಇಂಡೀಸ್ ಸ್ಕೋರ್​ ಕಾರ್ಡ್​ಗೆ 18 ರನ್​ಗಳು ಹೆಚ್ಚುವರಿಯಾಗಿ ಸೇರ್ಪಡೆಯಾಯಿತು.

13 ವೈಡ್ ಎಸೆತಗಳು:

ಟಿ20 ಕ್ರಿಕೆಟ್‌ನಲ್ಲಿ ಪ್ರತಿ ಎಸೆತವೂ ಅತ್ಯಂತ ಅಮೂಲ್ಯ. ಆದರೆ ಭಾರತೀಯ ಬೌಲರ್‌ಗಳು ದಿಕ್ಕು ತಪ್ಪಿದ ಬೌಲಿಂಗ್ ನಡೆಸಿ ಬರೋಬ್ಬರಿ 13 ವೈಡ್‌ಗಳನ್ನು ಎಸೆದರು. ಇದು ಎದುರಾಳಿಗೆ 13 ರನ್‌ಗಳನ್ನು ನೀಡಿದ್ದಲ್ಲದೆ, ವೆಸ್ಟ್ ಇಂಡೀಸ್ ಬ್ಯಾಟರ್‌ಗಳಿಗೆ ಮತ್ತಷ್ಟು ಎಸೆತಗಳನ್ನು ಎದುರಿಸಲು ಮತ್ತು ರನ್ ವೇಗ ಹೆಚ್ಚಿಸಲು ಮುಕ್ತ ಅವಕಾಶ ಮಾಡಿಕೊಟ್ಟಿತು.

1 ನೋ-ಬಾಲ್- ಫ್ರೀ-ಹಿಟ್:

ಪಂದ್ಯದ ಆರಂಭದಲ್ಲೇ ಮಯಾಂಕ್ ಯಾದವ್ ನೋ-ಬಾಲ್ ಎಸೆದರು. ನಿಯಮದ ಪ್ರಕಾರ ಸಿಕ್ಕ 1 ರನ್ ಜೊತೆಗೆ ವೆಸ್ಟ್ ಇಂಡೀಸ್‌ಗೆ ‘ಫ್ರೀ-ಹಿಟ್’ ಲಭಿಸಿತು. ಈ ಅವಕಾಶವನ್ನು ಬಳಸಿಕೊಂಡ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಭರ್ಜರಿ ಸಿಕ್ಸರ್​ ಸಿಡಿಸಿದರು.

4 ಲೆಗ್ ಬೈಸ್:

ಇದರೊಂದಿಗೆ ದಿಕ್ಕು ತಪ್ಪಿದ ಎಸೆತಗಳಿಂದಾಗಿ  4 ಲೆಗ್ ಬೈಸ್ ರನ್‌ಗಳು ವೆಸ್ಟ್ ಇಂಡೀಸ್ ಖಾತೆಗೆ ಸೇರಿದವು.

ಅಂದರೆ 13 ವೈಡ್ + 1 ನೋ ಬಾಲ್ ಹಾಗೂ 4 ಲೆಗ್ ಬೈಸ್​ನೊಂದಿಗೆ ಟೀಮ್ ಇಂಡಿಯಾ ಬೌಲರ್​ಗಳು 18 ರನ್​ಗಳನ್ನು ಹೆಚ್ಚುವರಿಯಾಗಿ ನೀಡಿದ್ದರು. ಇದರ ಜೊತೆಗೆ ಫ್ರೀ ಹಿಟ್​ನಲ್ಲಿ ಸಿಕ್ಸ್ ಬಾರಿಸಿ ವೆಸ್ಟ್ ಇಂಡೀಸ್ 6 ರನ್ ಕಲೆಹಾಕಿತು. ಅಂದರೆ ಈ ಹೆಚ್ಚುವರಿ ಎಸೆತಗಳಿಂದ ವೆಸ್ಟ್ ಇಂಡೀಸ್​ಗೆ ಬರೋಬ್ಬರಿ 24 ರನ್​ಗಳು ದಕ್ಕಿದ್ದವು. ಇತ್ತ ಟೀಮ್ ಇಂಡಿಯಾ ಸೋತಿರುವುದು ಕೂಡ ಕೇವಲ 24 ರನ್​ಗಳ ಅಂತರದಿಂದ!

ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ಪ್ರತಿ ರನ್ ಮತ್ತು ಪ್ರತಿ ಎಸೆತವೂ ಎಷ್ಟು ನಿರ್ಣಾಯಕ ಎಂಬುದಕ್ಕೆ ಈ ಪಂದ್ಯವೇ ಅತ್ಯುತ್ತಮ ಉದಾಹರಣೆ. ಭಾರತೀಯ ಬ್ಯಾಟರ್‌ಗಳು 223 ರನ್ ಬಾರಿಸಿ ದಿಟ್ಟ ಹೋರಾಟ ನೀಡಿದರೂ, ಬೌಲರ್‌ಗಳು ಉಡುಗೊರೆಯಾಗಿ ನೀಡಿದ ಆ 18+6 ರನ್‌ಗಳೇ ಅಂತಿಮವಾಗಿ ಗೆಲುವು ಮತ್ತು ಸೋಲಿನ ನಡುವಿನ ಗೋಡೆಯಾಗಿ ನಿಂತವು. ಈ ಸಣ್ಣ ತಪ್ಪುಗಳಿಂದ ಪಾಠ ಕಲಿಯಲಿರುವ ಟೀಮ್ ಇಂಡಿಯಾ, ಬೆಂಗಳೂರಿನಲ್ಲಿ ನಡೆಯಲಿರುವ ಸರಣಿ ನಿರ್ಣಾಯಕ ಅಂತಿಮ ಪಂದ್ಯದಲ್ಲಿ ಹೇಗೆ ಕಂಬ್ಯಾಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us