ಲೈಟ್​ಗಳು ಆಫ್​ ಆದವು… ಅದೇಗೆ ಲಕ್ ಯಾವಾಗ್ಲೂ ಮುಂಬೈ ಇಂಡಿಯನ್ಸ್​ ಪರ ಇರುತ್ತೆ?

IPL 2025 MI vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡವು ದ್ವಿತೀಯ ಕ್ವಾಲಿಫೈಯರ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಇಂದು (ಜೂನ್ 1) ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಲೈಟ್​ಗಳು ಆಫ್​ ಆದವು... ಅದೇಗೆ ಲಕ್ ಯಾವಾಗ್ಲೂ ಮುಂಬೈ ಇಂಡಿಯನ್ಸ್​ ಪರ ಇರುತ್ತೆ?
Ashwin

Updated on: Jun 01, 2025 | 12:01 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ (MI) ಜಯ ಸಾಧಿಸಿದೆ. ಚಂಡೀಗಢ್​ನ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದ್ದರು. ಆದರೆ ಪವರ್​ಪ್ಲೇನಲ್ಲಿ ಜೆರಾಲ್ಡ್ ಕೋಟ್ಝಿಯ ಹಾಗೂ ಕುಸಾಲ್ ಮೆಂಡಿಸ್ ಕೈಚೆಲ್ಲಿದ ಎರಡು ಕ್ಯಾಚ್​ಗಳ ಸಂಪೂರ್ಣ ಲಾಭ ಪಡೆದ ರೋಹಿತ್ ಶರ್ಮಾ 81 ರನ್​ ಚಚ್ಚಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡ 228 ರನ್ ಕಲೆಹಾಕಿತು.  ಅಂದರೆ ಇಲ್ಲಿ ಲಕ್ ಎಂಬುದು ಮುಂಬೈ ಇಂಡಿಯನ್ಸ್ ಪರವಿತ್ತು. ಇದನ್ನೇ ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿದ ಅಶ್ವಿನ್, ಐಪಿಎಲ್ ಪಂದ್ಯದ ವೇಳೆ ಲಕ್ ಎಂಬುದು ಯಾವಾಗ್ಲೂ ಮುಂಬೈ ಇಂಡಿಯನ್ಸ್ ಪರ ಇರುತ್ತದೆ. ಅದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಕಾಣಿಸಿಕೊಂಡಿದೆ.  ಪ್ರತಿ ಬಾರಿಯು ಅದೃಷ್ಟ ಎಂಬುದು ಮುಂಬೈ ಇಂಡಿಯನ್ಸ್ ಪರವೇ ಇರುತ್ತೆ? ಎಂಬುದೇ ಅರ್ಥವಾಗುತ್ತಿಲ್ಲ.

ಈ ಹಿಂದೆ, ಅಂದರೆ 2018 ರಲ್ಲಿ ನಾನು ಕಿಂಗ್ಸ್ ಇಲೆವೆನ್​ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ನಾಯಕನಾಗಿದ್ದೆ. ಅಂದು ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್​ ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 13 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 80 ರನ್​ ಮಾತ್ರ ಕಲೆಹಾಕಿತ್ತು.

ಇಡೀ ಪಂದ್ಯದ ಮೇಲೆ ನಾವು ಸಂಪೂರ್ಣ ಹಿಡಿತ ಸಾಧಿಸಿದ್ದೆವು. ಅಂದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಗಳೇ ಇರಲಿಲ್ಲ. ಇದ್ದಕ್ಕಿದ್ದಂತೆ, ಫ್ಲಡ್‌ಲೈಟ್‌ಗಳು ವಿದ್ಯುತ್ ಕಳೆದುಕೊಂಡವು. ಲೈಟ್​ಗಳೆಲ್ಲವೂ ಆಫ್ ಆದವು. ಇದರಿಂದ 20 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿತು.

ಆ ಬಳಿಕ ಮತ್ತೆ ಆಟ ಪುನರಾರಂಭವಾದಾಗ, ಕೀರನ್ ಪೊಲಾರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಪರಿಣಾಮ ಅಂದು ಮುಂಬೈ ಇಂಡಿಯನ್ಸ್ 180 ರಿಂದ 200 ರನ್​ಗಳೇನು ಕಲೆಹಾಕಿದ್ದರು. ಅಂದರೆ ನಮ್ಮ ಪರವಿದ್ದ ಪಂದ್ಯವು ಒಂದು ಫ್ಲಡ್​ಲೈಟ್​ ಆಫ್ ಆಗುವುದರೊಂದಿಗೆ ಮುಂಬೈ ಇಂಡಿಯನ್ಸ್ ಪರ ವಾಲಿತ್ತು.

ನನಗೆ ಅದೃಷ್ಟ ಬರುತ್ತದೆ ನಿಜ. ನೀವು ಕೂಡ ಅದೃಷ್ಟವನ್ನು ಗಳಿಸುತ್ತೀರಿ. ಆದರೆ ಮುಂಬೈ ಇಂಡಿಯನ್ಸ್ ಮಾತ್ರ ಯಾವಾಗಲೂ ಅದೃಷ್ಟಶಾಲಿಯಾಗಿರುತ್ತಾರೆ. ಅವರು ಹೇಗೆ ಅದೃಷ್ಟಶಾಲಿಯಾಗುತ್ತಿದ್ದಾರೆಂದು ಎಂಬುದನ್ನು ನಾವು ಕಂಡುಹಿಡಿಯಬೇಕು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಇದನ್ನೂ ಓದಿ: IPL 2025: ಈ ಬಾರಿ ಕಪ್ ಗೆಲ್ಲೋರು ಇವರೇ ಎಂದ ಡೇವಿಡ್ ವಾರ್ನರ್

ರವಿಚಂದ್ರನ್ ಅಶ್ವಿನ್ ಅವರ ಈ ಹೇಳಿಕೆಯು ಇದೀಗ ವೈರಲ್ ಆಗಿದ್ದು, ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

 

Published On - 11:54 am, Sun, 1 June 25