Rohit Sharma: T20 ಕ್ರಿಕೆಟ್ನಿಂದ ಹಿಂದೆ ಸರಿಯಲ್ಲ, IPL ಬಳಿಕ ನೋಡೋಣ ಎಂದ ರೋಹಿತ್ ಶರ್ಮಾ
Rohit Sharma: 35 ವರ್ಷದ ರೋಹಿತ್ ಶರ್ಮಾ 2024 ರಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಅವರ ಸ್ಥಾನದಲ್ಲಿ ಯುವ ಆರಂಭಿಕ ಆಟಗಾರನಿಗೆ ಚಾನ್ಸ್ ನೀಡಬೇಕೆಂದು ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ.
India vs Sri Lanka: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಜನವರಿ 10 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ (Rohit Sharma) ಮುನ್ನಡೆಸಲಿದ್ದಾರೆ. ಲಂಕಾ ವಿರುದ್ಧ ಟಿ20 ಸರಣಿಯಿಂದ ಹೊರಗುಳಿದಿದ್ದ ಹಿಟ್ಮ್ಯಾನ್ ಈ ಸರಣಿಯ ಮೂಲಕ ಕಂಬ್ಯಾಕ್ ಮಾಡುತ್ತಿರುವುದು ವಿಶೇಷ. ಮತ್ತೊಂದೆಡೆ ಅವರ ನಾಯಕತ್ವ ಕೂಡ ಈಗ ಚರ್ಚಾ ವಿಷಯವಾಗಿದೆ. ಹೀಗಾಗಿ ಈ ಸರಣಿಯು ರೋಹಿತ್ ಶರ್ಮಾ ಪಾಲಿಗೆ ಮಹತ್ವದ್ದು. ಏಕೆಂದರೆ ಟಿ20 ತಂಡದ ನಾಯಕನಾಗಿ ಎರಡು ಸರಣಿಗಳನ್ನು ಗೆದ್ದಿರುವ ಹಾರ್ದಿಕ್ ಪಾಂಡ್ಯ ಅವರನ್ನು ಮುಂದಿನ ಕ್ಯಾಪ್ಟನ್ ಎಂದು ಬಿಂಬಿಸಲಾಗುತ್ತಿದೆ. ಇದೇ ಕಾರಣದಿಂದಾಗಿ ರೋಹಿತ್ ಶರ್ಮಾ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗುತ್ತಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಬಿಸಿಸಿಐ ಮುಂದಿನ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಯುವ ಪಡೆಯನ್ನು ರೂಪಿಸುವ ಇರಾದೆಯಲ್ಲಿದ್ದು, ಹೀಗಾಗಿ 35 ವರ್ಷದ ರೋಹಿತ್ ಶರ್ಮಾ ಅವರನ್ನು ಟಿ20 ತಂಡಕ್ಕೆ ಆಯ್ಕೆ ಮಾಡಲು ಆಸಕ್ತಿ ಹೊಂದಿಲ್ಲ. ಇದರ ಜೊತೆಗೆ ಹಿಟ್‌ಮ್ಯಾನ್‌ನ ಫಿಟ್‌ನೆಸ್ ಕೂಡ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಒಂದು ವೇಳೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲೂ ಹಿಟ್ಮ್ಯಾನ್ ಕಳಪೆ ಪ್ರದರ್ಶನ ನೀಡಿದರೆ ಮುಂದಿನ ದಿನಗಳಲ್ಲಿ ಟಿ20 ತಂಡದಲ್ಲಿ ಸ್ಥಾನ ಸಿಗುವುದು ಅನುಮಾನ.
ಇದಾಗ್ಯೂ ನಾನು ಟಿ20 ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ರೋಹಿತ್ ಶರ್ಮಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಟ್ಮ್ಯಾನ್, ನಾನು ಟಿ20 ಕ್ರಿಕೆಟ್ನಿಂದ ದೂರ ಸರಿಸಲು ಬಯಸುತ್ತಿಲ್ಲ. ನಮಗೂ ವಿಶ್ರಾಂತಿ ಬೇಕಾಗಿರುತ್ತವೆ. ಅದಕ್ಕಾಗಿ ತಂಡದಿಂದ ಹೊರಗುಳಿದಿದ್ದೇನೆ ಎಂದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಆಡಲು ಯಾರಿಂದಲೂ ಸಾಧ್ಯವಿಲ್ಲ. ನೀವು ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಆಡುವ ಆಟಗಾರರಿಗೆ ಸಾಕಷ್ಟು ವಿಶ್ರಾಂತಿಗಳನ್ನು ನೀಡಬೇಕಾಗುತ್ತದೆ. ನಾನು ಕೂಡ ಅದರಲ್ಲಿ ಸೇರಿದ್ದೇನೆ. ನಾನು ಟಿ20 ಕ್ರಿಕೆಟ್ನಿಂದ ಹಿಂದೆ ಸರಿಯಲು ನಿರ್ಧರಿಸಿಲ್ಲ. ಐಪಿಎಲ್ ನಂತರ ಏನಾಗುತ್ತದೆ ಎಂಬುದನ್ನು ನೋಡೋಣ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರ ಈ ಹೇಳಿಕೆ ಕೂಡ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಅವರ ಹೇಳಿಕೆಯು ಮುಂಬರುವ ಟಿ20 ಸರಣಿಗಳಿಂದ ಅವರನ್ನು ಕೈ ಬಿಡುವುದು ಖಚಿತ ಎಂಬುದನ್ನು ಸೂಚಿಸುತ್ತಿದೆ. ಅಷ್ಟೇ ಅಲ್ಲದೆ ಐಪಿಎಲ್ ಬಳಿಕ ನೋಡೋಣ ಎಂದಿರುವುದು ಆ ಮೂಲಕ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: SAT20 league: ನಾಳೆಯಿಂದ ಮಿನಿ IPL ಶುರು
ಒಟ್ಟಿನಲ್ಲಿ 35 ವರ್ಷದ ರೋಹಿತ್ ಶರ್ಮಾ 2024 ರಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಹೀಗಾಗಿ ಅವರ ಸ್ಥಾನದಲ್ಲಿ ಯುವ ಆರಂಭಿಕ ಆಟಗಾರನಿಗೆ ಚಾನ್ಸ್ ನೀಡಬೇಕೆಂದು ಅಭಿಪ್ರಾಯಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿಯೇ ಬಿಸಿಸಿಐ ಕೂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಯುವ ಪಡೆಯನ್ನೇ ಆಯ್ಕೆ ಮಾಡಿತ್ತು. ಇದೀಗ ಹಾರ್ದಿಕ್ ಪಾಂಡ್ಯ ನೇತೃತ್ವದ ಯಂಗ್ ಟೀಮ್ ಇಂಡಿಯಾ ಟಿ20 ಸರಣಿ ಗೆದ್ದಿದೆ. ಹೀಗಾಗಿ ಇದೇ ಬಳಗ ಮುಂದಿನ ಸರಣಿಯಲ್ಲೂ ಮುಂದುವರೆದರೆ ಅಚ್ಚರಿಪಡಬೇಕಿಲ್ಲ.
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.