Finn Allen: ತುಂಬಾ ವರ್ಷಗಳಿಂದ ಕಾಯುತ್ತಿದ್ದೆ, ಕೊನೆಗೂ ಚಾನ್ಸ್ ಸಿಕ್ತು!

Finn Allen: ಫಿನ್ ಅಲೆನ್ ನ್ಯೂಝಿಲೆಂಡ್ ತಂಡದ ಸ್ಫೋಟಕ ಆರಂಭಿಕ ದಾಂಡಿಗ. 2021 ರಿಂದ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಅಲೆನ್ ಚೊಚ್ಚಲ ಪಂದ್ಯವಾಡಿರುವುದು 2026 ರಲ್ಲಿ ಎಂಬುದು ವಿಶೇಷ. ಅದು ಸಹ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ.

Finn Allen: ತುಂಬಾ ವರ್ಷಗಳಿಂದ ಕಾಯುತ್ತಿದ್ದೆ, ಕೊನೆಗೂ ಚಾನ್ಸ್ ಸಿಕ್ತು!
Finn Allen

Updated on: Mar 30, 2026 | 9:31 AM

ನ್ಯೂಝಿಲೆಂಡ್​ನ ಸ್ಫೋಟಕ ದಾಂಡಿಗ ಫಿನ್ ಅಲೆನ್ (Finn Allen) ಐಪಿಎಲ್​ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ಮೂಲಕ ಅಲೆನ್ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಫಿನ್ ಅಲೆನ್, “ಈ ಕ್ಷಣಕ್ಕಾಗಿ ನಾನು ಬಹಳ ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ವಿಶ್ವದ ಅತಿದೊಡ್ಡ ಟಿ20 ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಇದು ನಿಜಕ್ಕೂ ಸಂತಸದ ಕ್ಷಣ” ಎಂದಿದ್ದಾರೆ.

ಅಂದಹಾಗೆ ಫಿನ್ ಅಲೆನ್ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದು 2021 ರಲ್ಲಿ. 5 ವರ್ಷಗಳ ಹಿಂದೆಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ಪಡೆದರೂ ಅವರಿಗೆ ಕಣಕ್ಕಿಳಿಯಲು ಚಾನ್ಸ್ ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ.

2021ರ ಐಪಿಎಲ್​ ಸೀಸನ್​ನಲ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಅವರ ಬದಲಿಗೆ ಫಿನ್ ಅಲೆನ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.

ಹೀಗೆ ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದ ಫಿನ್ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂದರೆ ನಂಬಲೇಬೇಕು. ಅಂದರೆ ಅಲೆನ್​ಗೆ ಒಂದೇ ಒಂದು ಪಂದ್ಯವಾಡಲು ಆರ್​ಸಿಬಿ ಅವಕಾಶ ನೀಡಿರಲಿಲ್ಲ. ಇದಾಗ್ಯೂ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದರು.

ಆ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿವಿಧ ಲೀಗ್​ಗಳಲ್ಲೂ ಅಬ್ಬರಿಸಿದ್ದರು. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಕೂಡ ಆಡಿದ್ದರು. ಇದಾಗ್ಯೂ ಐಪಿಎಲ್​ಗೆ ಬಂದರೆ ಬೆಂಚ್ ಕಾಯುವುದೇ ಬಂತು.

ಕುತೂಹಲಕಾರಿ ವಿಷಯ ಎಂದರೆ ಈ ಮೂರು ಸೀಸನ್​ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 45 ಪಂದ್ಯಗಳನ್ನಾಡಿತ್ತು. ಅಂದರೆ ಫಿನ್ ಅಲೆನ್ ಬರೋಬ್ಬರಿ 45 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ 2024 ರಲ್ಲಿ ಫಿನ್ ಅಲೆನ್ ಆರ್​ಸಿಬಿ ತಂಡದಿಂದ ಹೊರಬರುವ ಮೂಲಕ ಈ ಕಾಯುವಿಕೆಗೆ ಬ್ರೇಕ್ ಹಾಕಿದ್ದರು.

ಇದನ್ನೂ ಓದಿ: ಮೊದಲ ಗೆಲುವನ್ನು 11 ಮಂದಿಗೆ ಅರ್ಪಿಸಿದ RCB

ಇದೀಗ ಅಲೆನ್ ಕೊಲ್ಕತ್ತಾ ನೈಟ್ ರೈಡರ್ಡ್ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷವೇ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿದೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 17 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

 

Follow Us