ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿದೆ ಚಾಂಪಿಯನ್ಸ್ ಟ್ರೋಫಿ; ಐಸಿಸಿ ಅಧಿಕೃತ ಘೋಷಣೆ

|

Updated on: Dec 19, 2024 | 5:00 PM

Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಎಂದು ಐಸಿಸಿ ಘೋಷಿಸಿದೆ. ಆ ಪ್ರಕಾರ ಭಾರತದ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿದ್ದು, ಇದಕ್ಕೆ ಪರಿಹಾರವಾಗಿ ಪಾಕಿಸ್ತಾನಕ್ಕೆ 2028ರಲ್ಲಿ ನಡೆಯಲ್ಲಿರುವ ಹೊಸ ಪಂದ್ಯಾವಳಿಯ ಆತಿಥ್ಯ ಹಕ್ಕನ್ನು ನೀಡಲಾಗುವುದು. ಇದಲ್ಲದೆ 2027ರವರೆಗೆ ನಡೆಯುವ ಎಲ್ಲಾ ಐಸಿಸಿ ಪಂದ್ಯಾವಳಿಗಳಲ್ಲಿ ಈ ಹೈಬ್ರಿಡ್ ಮಾದರಿ ಅನ್ವಯವಾಗಲಿದೆ.

ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿದೆ ಚಾಂಪಿಯನ್ಸ್ ಟ್ರೋಫಿ; ಐಸಿಸಿ ಅಧಿಕೃತ ಘೋಷಣೆ
ಚಾಂಪಿಯನ್ಸ್ ಟ್ರೋಫಿ
Follow us on

ಮುಂದಿನ ವರ್ಷ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ನಿರೀಕ್ಷಿತ ನಿರ್ಧಾರ ಹೊರಬಿದ್ದಿದೆ. ಈ ಈವೆಂಟ್​ನ ಆಯೋಜಕತ್ವಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಸಾಕಷ್ಟು ಗೊಂದಲಗಳಿಗೆ ತೆರೆ ಎಳೆದಿರುವ ಐಸಿಸಿ ಅಂತಿಮವಾಗಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಔಪಚಾರಿಕ ಅನುಮೋದನೆಯನ್ನು ಪಡೆದುಕೊಂಡಿದೆ. ಮುಂದಿನ ವರ್ಷ ಫೆಬ್ರುವರಿ-ಮಾರ್ಚ್‌ನಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಭಾರತ ತಂಡದ ಪಂದ್ಯಗಳನ್ನು ಪಾಕಿಸ್ತಾನದ ಬದಲಿಗೆ ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಐಸಿಸಿ ಇಂದು ಘೋಷಿಸಿದೆ. ಇದಕ್ಕೆ ಪ್ರತಿಯಾಗಿ, ಐಸಿಸಿ ಪಾಕಿಸ್ತಾನಕ್ಕೆ ಹೊಸ ಪಂದ್ಯಾವಳಿಯ ಆತಿಥ್ಯವನ್ನು ಸಹ ಬಹುಮಾನವಾಗಿ ನೀಡಿದ್ದು, ಈ ಪಂದ್ಯಾವಳಿಯೂ 2028 ರಲ್ಲಿ ನಡೆಯಲಿದೆ. ಇದೀಗ ಚಾಂಪಿಯನ್ಸ್ ಟ್ರೋಫಿ ಆಯೋಜನೆಗೆ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದು ಇನ್ನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ವೇಳಾಪಟ್ಟಿ ಕೂಡ ಬಿಡುಗಡೆಯಾಗಲಿದೆ.

ತಟಸ್ಥ ಸ್ಥಳದಲ್ಲಿ ಭಾರತದ ಪಂದ್ಯಗಳು

ಎಲ್ಲಾ ಕ್ರಿಕೆಟ್ ಮಂಡಳಿಗಳ ಜೊತೆಗಿನ ಸಭೆಯ ನಂತರ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ತೀರ್ಮಾನಕ್ಕೆ ಬರಲಾಗಿದೆ. ಆದಾಗ್ಯೂ, ಇಡೀ ಪಂದ್ಯಾವಳಿಯ ಹೋಸ್ಟಿಂಗ್ ಅಧಿಕಾರವನ್ನು ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ನೀಡಲಾಗಿದೆ. ಇಡೀ ಪಂದ್ಯಾವಳಿಯ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಮತ್ತು ತಟಸ್ಥ ಸ್ಥಳಗಳಲ್ಲಿ ಆಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುವ ಐಸಿಸಿ, ಆ ತಟಸ್ಥ ಸ್ಥಳ ಯಾವುದು ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ದುಬೈನಲ್ಲಿ ಟೀಂ ಇಂಡಿಯಾದ ಪಂದ್ಯಗಳನ್ನು ಆಡಲು ಬಿಸಿಸಿಐ ಒಲವು ತೋರಿರುವುದರಿಂದ ಟೀಂ ಇಂಡಿಯಾದ ಪಂದ್ಯವನ್ನು ಅಲ್ಲಿಯೇ ನಡೆಸುವ ನಿರೀಕ್ಷೆಯಿದೆ.

ಇತರ ಪಂದ್ಯಾವಳಿಗೂ ಹೈಬ್ರಿಡ್ ಮಾದರಿ

ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾತ್ರವಲ್ಲದೆ 2027 ರವರೆಗೆ ನಡೆಯಲಿರುವ ಪ್ರತಿಯೊಂದು ಪಂದ್ಯಾವಳಿಯಲ್ಲೂ ಇದೇ ವ್ಯವಸ್ಥೆ ಅನ್ವಯವಾಗಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ. ಇದರ ಅಡಿಯಲ್ಲಿ, ಭಾರತದಲ್ಲಿ ನಡೆಯಲಿರುವ ಐಸಿಸಿ ಪಂದ್ಯಾವಳಿಗಳಲ್ಲಿ ಪಾಕಿಸ್ತಾನ ತಂಡವು ತನ್ನ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಡಲಿದೆ. ವಾಸ್ತವವಾಗಿ ಭಾರತ 2025 ರಲ್ಲಿ ನಡೆಯಲ್ಲಿರುವ ಮಹಿಳೆಯರ ಏಕದಿನ ವಿಶ್ವಕಪ್​ಗೆ ಏಕಾಂಗಿಯಾಗಿ ಆತಿಥ್ಯವಹಿಸುತ್ತದೆ. ಉಳಿದಂತೆ 2026 ರಲ್ಲಿ ನಡೆಯಲ್ಲಿರುವ ಪುರುಷರ ಟಿ20 ವಿಶ್ವಕಪ್​ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಈ ಎರಡೂ ಟೂರ್ನಿಗಳಲ್ಲಿ ಭಾರತದ ಹೊರಗೆ ತನ್ನ ಪಂದ್ಯಗಳನ್ನು ಆಡಲಿದೆ. ಅಂತೆಯೇ, 2028 ರ ಮಹಿಳಾ ಟಿ20 ವಿಶ್ವಕಪ್‌ನ ಆತಿಥ್ಯ ಹಕ್ಕುಗಳನ್ನು ಸಹ ಪಾಕಿಸ್ತಾನ ಪಡೆದುಕೊಂಡಿದ್ದು, ಈ ಟೂರ್ನಿ ಕೂಡ ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Thu, 19 December 24