Olympics 2028: ಒಲಿಂಪಿಕ್ಸ್​ನಲ್ಲಿ 6 ತಂಡಗಳು: ಪಾಕಿಸ್ತಾನ್ ಔಟ್

Olympics 2028: 1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಪಂದ್ಯವೊಂದನ್ನು ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳು ಸೆಣಸಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ ಮತ್ತೆ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

Olympics 2028: ಒಲಿಂಪಿಕ್ಸ್​ನಲ್ಲಿ 6 ತಂಡಗಳು: ಪಾಕಿಸ್ತಾನ್ ಔಟ್
Ind Vs Pak

Updated on: Jul 31, 2025 | 2:30 PM

ಬರೋಬ್ಬರಿ 128 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿದೆ. ಲಾಸ್ ಏಂಜಲೀಸ್​ನಲ್ಲಿ 2028 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್​ಗೂ ಅವಕಾಶ ನೀಡಲಾಗಿದೆ. ಅಲ್ಲದೆ ಇದಕ್ಕಾಗಿ ತಂಡಗಳನ್ನು ಫೈನಲ್ ಮಾಡುವಂತೆ ಐಸಿಸಿಗೆ ಸೂಚಿಸಿದೆ. ಇತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ಐಸಿಸಿ) ಅರ್ಹತಾ ಮಾರ್ಗವನ್ನು ಅಂತಿಮಗೊಳಿಸಲು ಮುಂದಾಗಿದೆ.

ಗಾರ್ಡಿಯನ್‌ನ ವರದಿಯ ಪ್ರಕಾರ, ಜಾಗತಿಕ ಕ್ರೀಡಾಕೂಟದಲ್ಲಿ 6 ತಂಡಗಳಿಗೆ ಅವಕಾಶ ನೀಡಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಜುಲೈನಲ್ಲಿ ಸಿಂಗಾಪುರದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಐಸಿಸಿ ಸಹ ಚರ್ಚೆ ನಡೆಸಿದೆ. ಇದೇ ವೇಳೆ ತಂಡಗಳ ಆಯ್ಕೆಗಾಗಿ ಪ್ರಾದೇಶಿಕ ಅರ್ಹತಾ ವ್ಯವಸ್ಥೆಯನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಲ್ಲಿ ತಂಡಗಳ ಆಯ್ಕೆಗಾಗಿ ಏಷ್ಯಾ, ಓಷಿಯಾನಿಯಾ, ಯುರೋಪ್ ಮತ್ತು ಆಫ್ರಿಕಾ ಪ್ರಾದೇಶಿಕತೆಯನ್ನು ಪರಿಗಣಿಸಲಾಗುತ್ತಿದ್ದು, ಈ ಪ್ರದೇಶದ ತಂಡಗಳಲ್ಲಿ ಹೆಚ್ಚಿನ ಶ್ರೇಯಾಂಕ ಹೊಂದಿರುವ ಟೀಮ್​ಗಳು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲಿದೆ.

ಪ್ರಸ್ತುತ, ಐಸಿಸಿ ಶ್ರೇಯಾಂಕದ ಪ್ರಕಾರ.. ಏಷ್ಯಾದಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದೆ. ಇನ್ನು ಓಷಿಯಾನಿಯಾದಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಆಫ್ರಿಕಾದಲ್ಲಿ ಸೌತ್ ಆಫ್ರಿಕಾ ತಂಡ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಯುರೋಪ್​ನಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಈ ನಾಲ್ಕು ತಂಡಗಳ ಜೊತೆ ಆತಿಥೇಯ ಅಮೆರಿಕ ತಂಡಕ್ಕೂ ಅವಕಾಶ ನೀಡಲಾಗುತ್ತದೆ ಎಂದು ವರದಿಯಾಗಿದೆ.

ಅತ್ತ ಆತಿಥೇಯ ರಾಷ್ಟ್ರ ಅಮೆರಿಕಕ್ಕೆ ಅವಕಾಶ ನೀಡಿದರೆ, ವೆಸ್ಟ್ ಇಂಡೀಸ್‌ ಅನ್ನು ಸಂಯೋಜಿತ ತಂಡವೆಂದು ಪರಿಗಣಿಸುವ ಸಾಧ್ಯತೆಯಿದೆ. ಸದ್ಯ ಐದು ಸ್ಥಾನಗಳಿಗೆ ಅರ್ಹತೆಯನ್ನು ಅಂತಿಮಗೊಳಿಸಲಾಗಿದ್ದರೂ, ಆರನೇ ತಂಡದ ಪ್ರಕ್ರಿಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ವರದಿ ತಿಳಿಸಿದೆ.

ಪಾಕಿಸ್ತಾನಕ್ಕೆ ಬಿಗ್ ಶಾಕ್:

ಐಸಿಸಿ ಪ್ರಾದೇಶಿಕ ಅರ್ಹತಾ ಆಧಾರದ ಮೇಲೆ ತಂಡಗಳನ್ನು ಆಯ್ಕೆ ಮಾಡಿದರೆ ಪಾಕಿಸ್ತಾನಕ್ಕೆ ಚಾನ್ಸ್ ಸಿಗುವುದಿಲ್ಲ. ಏಕೆಂದರೆ ಪ್ರಸ್ತುತ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ್ 8ನೇ ಸ್ಥಾನದಲ್ಲಿದೆ. ಇದರಿಂದ ಚೊಚ್ಚಲ ಬಾರಿ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯುವ ಅವಕಾಶವನ್ನು ಪಾಕಿಸ್ತಾನ್ ಕಳೆದುಕೊಳ್ಳಲಿದೆ.

ಅತ್ತ ಟಿ20 ತಂಡಗಳ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ ಕೂಡ ಅವಕಾಶ ವಂಚಿತರಾಗಲಿದ್ದಾರೆ. ಏಕೆಂದರೆ ಓಷಿಯಾನಿಯಾ ವಿಭಾಗದಿಂದ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಇದರಿಂದ ನೆರೆ ರಾಷ್ಟ್ರವಾಗಿರುವ ನ್ಯೂಝಿಲೆಂಡ್​ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ.

ಇದನ್ನೂ ಓದಿ: ದಿ ಹಂಡ್ರೆಡ್ ಲೀಗ್​ಗೆ ಕಾಲಿಟ್ಟ IPLನ 4 ಫ್ರಾಂಚೈಸಿಗಳು..!

ಐಸಿಸಿ ಈ ಪ್ರಸ್ತಾವನೆಯನ್ನು ಇತರೆ ಮಂಡಳಿಗಳು ಇನ್ನೂ ಸಹ ಔಪಚಾರಿಕವಾಗಿ ಅಂಗೀಕರಿಸಿಲ್ಲ. ಇದಾಗ್ಯೂ ಒಲಿಂಪಿಕ್ಸ್​ ನಿಯಮಗಳನ್ನು ಪರಿಗಣಿಸಿ ಐಸಿಸಿ ಮುಂದಿಡುವ ಪ್ರಸ್ತಾಪನೆಯನ್ನು ತಿರಸ್ಕರಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಮುಂಬರುವ ಒಲಿಂಪಿಕ್ಸ್​ನಿಂದ ಕೆಲ ಪ್ರಮುಖ ತಂಡಗಳು ಹೊರಗುಳಿಯುವುದು ಬಹುತೇಕ ಖಚಿತ ಎನ್ನಬಹುದು.