2036ರ ಒಲಿಂಪಿಕ್ಸ್‌ಗೆ ಸರ್ಕಾರ ಸಿದ್ಧತೆ; 3000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ.
Olympics: 2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯುಎಸ್ಎನ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಹಾಗೆಯೇ 2032ರ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಈ ಎರಡು ಒಲಿಂಪಿಕ್ಸ್ಗಳ ಬಳಿಕ ಭಾರತದಲ್ಲಿ ಜಾಗತಿಕ ಕ್ರೀಡಾಕೂಟ ಆಯೋಜಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಭಾರತ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಿದೆ.

ಅಕ್ಟೋಬರ್ 15, 2023… ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದಲ್ಲಿ ಮಾತನಾಡಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2036 ರಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧವಾಗಿದ್ದು, ಅಂತಹ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದು ಉಚ್ಛರಿಸಿದ್ದರು. ಅಲ್ಲದೆ ಮುಂಬರುವ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತ ಬಿಡ್ಡಿಂಗ್ ನಡೆಸುವುದನ್ನು ಇದೇ ವೇಳೆ ಪ್ರಧಾನಿ ಖಚಿತ ಪಡಿಸಿದ್ದರು. ಇದಾದ ಬಳಿಕ ನವೆಂಬರ್ 2024 ರಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್‌ನ ಆತಿಥೇಯ ಆಯೋಗಕ್ಕೆ ಆಶಯ ಪತ್ರವನ್ನು ಕಳುಹಿಸಿ, 2036 ರ ಜಾಗತಿಕ ಕ್ರೀಡಾಕೂಟದ ಆತಿಥ್ಯಕ್ಕೆ ಔಪಚಾರಿಕ ಬಿಡ್ ಸಲ್ಲಿಸಿತು.
ಇದೀಗ 2036ರ ಒಲಿಂಪಿಕ್ಸ್ಗಾಗಿ ಭಾರತ ಸಕಲ ರೀತಿಯಲ್ಲೂ ಸನ್ನದ್ಧರನ್ನಾಗಬೇಕು ಎಂಬ ಆಶಯವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ 3 ಸಾವಿರ ಕ್ರೀಡಾಪಟುಗಳಿಗೆ ಮಾಸಿಕ 50,000 ರೂ.ಗಳ ಸಹಾಯ ಧನ ನೀಡುವುದಾಗಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಗೆಲುವು ಮತ್ತು ಸೋಲು ಆಟದ ಒಂದು ಭಾಗ. ಆದರೆ ನಾವು ಗೆಲ್ಲುವನ್ನು ಗುರಿಯನ್ನು ಹೊಂದಿರಬೇಕು. ಗೆಲುವಿಗಾಗಿ ಯೋಜಿಸುವುದು ಪ್ರತಿಯೊಬ್ಬರ ಸ್ವಭಾವದಲ್ಲಿ ಅಂತರ್ಗತವಾಗಿರಬೇಕು. ಅಲ್ಲದೆ ಗೆಲುವು ಅಭ್ಯಾಸವಾಗಬೇಕು. ಗೆಲ್ಲುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ವ್ಯಕ್ತಿಗಳು ನಿರಂತರವಾಗಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದರು.
ಕೇಂದ್ರ ಸರ್ಕಾರವು ಪ್ರತಿಯೊಂದು ಹಳ್ಳಿಯಲ್ಲೂ ಕ್ರೀಡೆಗಳನ್ನು ಉತ್ತೇಜಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದೆ. ಎಲ್ಲಾ ಕ್ರೀಡೆಗಳಲ್ಲಿ ವಿವಿಧ ವಯೋಮಾನದ ಮಕ್ಕಳನ್ನು ವೈಜ್ಞಾನಿಕವಾಗಿ ಆಯ್ಕೆ ಮಾಡಿ ತರಬೇತಿ ನೀಡುತ್ತಿದೆ. ಈ ಮೂಲಕ ದೇಶದ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಕ್ರೀಡಾಪಟುಗಳಿಗೆ ಆರ್ಥಿಕ ಬೆಂಬಲ:
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಕಳೆದ ದಶಕದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಕಂಡು ಬಂದಿವೆ. ಬಜೆಟ್ನಲ್ಲಿ ಕ್ರೀಡೆಗಳಿಗಾಗಿ ನೀಡಲಾಗುವ ಅನುದಾನ ಐದು ಪಟ್ಟು ಹೆಚ್ಚಿಸಲಾಗಿದೆ. ಅಲ್ಲದೆ ಸರ್ಕಾರವು ಸುಮಾರು 3,000 ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಬೆಂಬಲ ನೀಡುವ ಮೂಲಕ ಒಲಿಂಪಿಕ್ಸ್‌ಗೆ ಸಿದ್ಧತೆಯನ್ನು ರೂಪಿಸುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸುಮಾರು 3,000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ.ಗಳ ಸಹಾಯವನ್ನು ನೀಡಲಿದೆ. ಈ ಮೂಲಕ 2036 ರ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿ ವಿವರವಾದ ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ನಡೆಸಲು ಉದ್ದೇಶಿಸಲಾಗಿರುವ ಒಲಿಂಪಿಕ್ಸ್ಗಾಗಿ ಪೂರ್ವ ತಯಾರಿಗಳನ್ನು ಆರಂಭಿಸಿರುವುದಾಗಿ ಅಮಿತ್ ಶಾ ಹೇಳಿದ್ದಾರೆ.
ಜಾಗತಿಕ ಕ್ರೀಡಾ ವೇದಿಕೆಯಲ್ಲಿ ಭಾರತ ಮುನ್ನಡೆಯುತ್ತಿದೆ. ಭಾರತೀಯರು ವಿಶ್ವಾದ್ಯಂತ ಗಮನ ಸೆಳೆಯುವ ರೀತಿಯಲ್ಲಿ ಪ್ರದರ್ಶನ ನೀಡಬೇಕು. ಈ ಮೂಲಕ ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸಬೇಕಿದೆ. ಇದೀಗ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ 2036 ರ ಒಲಿಂಪಿಕ್ಸ್‌ನಲ್ಲಿ ಅತ್ಯಧಿಕ ಪದಕ ಗೆಲ್ಲುವ ಅಗ್ರ ಐದು ದೇಶಗಳಲ್ಲಿ ಭಾರತ ಕೂಡ ಒಂದಾಗಿರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸ್ಮೃತಿ ಮಂಧಾನ ಮುಡಿಗೆ ಮತ್ತೊಂದು ದಾಖಲೆ ಸೇರ್ಪಡೆ
ಒಟ್ಟಿನಲ್ಲಿ 2036 ರಲ್ಲಿ ಭಾರತದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಬೇಕೆಂಬ ಸಂಕಲ್ಪ ತೊಟ್ಟಿರುವ ಕೇಂದ್ರ ಸರ್ಕಾರವು ಈಗಾಗಲೇ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಆಯೋಜನೆಗಾಗಿ ಔಪಚಾರಿಕ ಬಿಡ್ ಸಲ್ಲಿಸಿದೆ. ಈ ಬಿಡ್ ಗೆಲ್ಲುವಲ್ಲಿ ಭಾರತ ಯಶಸ್ವಿಯಾದರೆ, 2036 ರಲ್ಲಿ ಭಾರತವು ಚೊಚ್ಚಲ ಬಾರಿ ಜಾಗತಿಕ ಕ್ರೀಡಾಕೂಟಕ್ಕೆ ಆತಿಥ್ಯವಹಿಸಲಿದೆ.
