AUS vs SL: ಟಿ20 ವಿಶ್ವಕಪ್ನಲ್ಲಿಂದು ಆಸ್ಟ್ರೇಲಿಯಾ-ಶ್ರೀಲಂಕಾ ನಡುವೆ ಹೈವೋಲ್ಟೇಜ್ ಪಂದ್ಯ: ಫಿಂಚ್ ಪಡೆಗೆ ಗೆಲುವು ಅನಿವಾರ್ಯ
Australia vs Sri Lanka, T20 World Cup: ಈಗಾಗಲೇ ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳ ಭಾರೀ ಅಂತರದ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.
ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಯಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಪರ್ತ್ ಸ್ಟೇಡಿಯಂನಲ್ಲಿ ಆಥಿತೇಯ ಆಸ್ಟ್ರೇಲಿಯಾಕ್ಕೆ ಶ್ರೀಲಂಕಾ (Australia vs Sri Lanka) ಸವಾಲೊಡ್ಡಲಿದೆ. ಈಗಾಗಲೇ ನ್ಯೂಜಿಲೆಂಡ್ ವಿರುದ್ಧ 89 ರನ್‌ಗಳ ಭಾರೀ ಅಂತರದ ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಆಸ್ಟ್ರೇಲಿಯಾಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಇನ್ನೊಂದೆಡೆ ಶ್ರೀಲಂಕಾ ಪಾಯಿಂಟ್ ಟೇಬಲ್ನಲ್ಲಿ (Point Table) ಎರಡನೇ ಸ್ಥಾನದಲ್ಲಿದ್ದು ಅಗ್ರಸ್ಥಾನಕ್ಕೇರಲು ಈ ಪಂದ್ಯವನ್ನು ಗೆಲ್ಲುವ ಯೋಜನೆ ಮಾಡಿಕೊಂಡಿದೆ. ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿರುವ ಪಂದ್ಯ ಇದಾಗಿದ್ದು, ಪರ್ತ್ನಲ್ಲಿ ಹೈವೋಲ್ಟೇಜ್ ಕದನ ನಿರೀಕ್ಷಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಪ್ರದರ್ಶನ ತೋರಿತ್ತು. 201 ರನ್‌ಗಳ ಟಾರ್ಗೆಟ್ ಬೆನ್ನಟ್ಟಲು ಸಾಧ್ಯವಾಗದೆ ಕೇವಲ 111 ರನ್ಗೆ ಸರ್ವಪತನ ಕಂಡಿತು. ತಂಡದ ಪರ ಗ್ಲೆನ್ ಮ್ಯಾಕ್ಸ್‌ವೆಲ್ 28 ರನ್ ಗಳಿಸಿದ್ದೇ ಹೆಚ್ಚು. ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ನಾಯಕ ಆ್ಯರೋನ್ ಫಿಂಚ್ ಮಂಕಾಗಿರುವುದು ತಂಡಕ್ಕೆ ದೊಡ್ಡ ತಲೆನೋವು.
ಡೇವಿಡ್ ವಾರ್ನರ್ ಬ್ಯಾಟ್ನಿಂದ ಕೂಡ ರನ್ ಬರುತ್ತಿಲ್ಲ. ಸ್ಟೀವ್ ಸ್ಮಿತ್ ಇಂದಿನ ಪಂದ್ಯದಲ್ಲಿ ಆಡಬಹುದು. ಮಿಚೆಲ್ ಮಾರ್ಶ್, ಸ್ಟೋಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ ಕೊಡುಗೆ ತಂಡಕ್ಕೆ ಬೇಕಿದೆ. ಮಿಚೆಲ್ ಸ್ಟಾರ್ಕ್, ಹ್ಯಾಜ್ಲೆವುಡ್, ಪ್ಯಾಟ್ ಕಮಿನ್ಸ್, ಸ್ಟಾಯಿನಿಸ್ ಹಾಗೂ ಆ್ಯಡಂ ಝಂಪಾ ಎಲ್ಲ ಬೌಲರ್ಗಳು ಕಳೆದ ಪಂದ್ಯದಲ್ಲಿ ದುಬಾರಿ ಆಗಿದ್ದರು.
ಶ್ರೀಲಂಕಾ ತಂಡವು ಮೊದಲ ಹಣಾಹಣಿಯಲ್ಲಿ ಸ್ಪಿನ್ನರ್‌ಗಳಾದ ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗ ಅವರ ಬೌಲಿಂಗ್ ನೆರವಿನಿಂದ ಐರ್ಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತ್ತು. ಹೀಗಾಗಿ ಲಂಕಾ ಆತ್ಮವಿಶ್ವಾಸದಲ್ಲಿದೆ. ವನಿಂದು ಹಸರಂಗ ಟ್ರಂಪ್‌ಕಾರ್ಡ್ ಆಗಿದ್ದಾರೆ. ದಾಖಲೆಗಳನ್ನು ನೋಡುವುದಾದರೆ ಆಸ್ಟ್ರೇಲಿಯ ಮುಂದಿದೆ. ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು, ಆಸ್ಟ್ರೇಲಿಯ 7ರಲ್ಲಿ, ಲಂಕಾ 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಇತ್ತಂಡಗಳ 4 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಆಸೀಸ್ ಮೂರನ್ನು ಗೆದ್ದಿದೆ. ಉಳಿದೊಂದು ಪಂದ್ಯ ಲಂಕಾ ಗೆದ್ದಿದೆ.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಆಯರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ / ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.
ಶ್ರೀಲಂಕಾ ತಂಡ: ಅಶೆನ್ ಬಂಡಾರ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನ, ಬಿನೂರ ಫೆರ್ನಾಂಡೋ, ಮಹೇಶ್ ತೀಕ್ಷಣ, ಲಹಿರು ಕುಮಾರ.
ಪಂದ್ಯ ಆರಂಭ: ಸಂಜೆ 4.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಡಿಸ್ನಿ+ ಹಾಟ್‌ಸ್ಟಾರ್.