AUS vs NZ: 11 ವರ್ಷಗಳ ಬಳಿಕ ತವರಿನಲ್ಲೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿದ ಕಿವೀಸ್..!

T20 World Cup 2022: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು 89 ರನ್​ಗಳಿಂದ ಮಣಿಸಿದ ನ್ಯೂಜಿಲೆಂಡ್ ತಂಡ ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

AUS vs NZ: 11 ವರ್ಷಗಳ ಬಳಿಕ ತವರಿನಲ್ಲೇ ಕಾಂಗರೂಗಳಿಗೆ ಸೋಲಿನ ಶಾಕ್ ನೀಡಿದ ಕಿವೀಸ್..!
AUS vs NZ
Follow us
TV9 Web
| Updated By: ಪೃಥ್ವಿಶಂಕರ

Updated on:Oct 22, 2022 | 4:36 PM

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಇಂದಿನಿಂದ ಸೂಪರ್ 12 ಸುತ್ತು ಆರಂಭವಾಗಿದ್ದು, ಇಂದು ನಡೆದ ಮೊದಲ ಪಂದ್ಯದಲ್ಲಿಯೇ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (Australia) ತಂಡವನ್ನು 89 ರನ್​ಗಳಿಂದ ಮಣಿಸಿದ ನ್ಯೂಜಿಲೆಂಡ್ (New Zealand) ತಂಡ ಕಳೆದ ಬಾರಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇದರೊಂದಿಗೆ ಕಾಂಗರೂಗಳನ್ನು ಬರೋಬ್ಬರಿ 11 ವರ್ಷಗಳ ಬಳಿಕ ಅವರ ನೆಲದಲ್ಲೇ ಬಗ್ಗುಬಡಿದ ದಾಖಲೆಯನ್ನು ನ್ಯೂಜಿಲೆಂಡ್ ಬರೆದಿದೆ. ಸಿಡ್ನಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಆ್ಯರನ್ ಫಿಂಚ್ ಬೌಲಿಂಗ್ ಆಯ್ದುಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಪಡೆ ಕಾನ್ವೇ ಅವರ ಅಜೇಯ 92 ರನ್​ಗಳ ನೆರವಿನಿಂದ 3 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್​ಗಳಲ್ಲಿ 200 ರನ್ ದಾಖಲಿಸಿತು. ಗುರಿ ಬೆನ್ನಟ್ಟಿದ ಫಿಂಚ್ ಪಡೆ 11.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಾನು ಆಡಿದ ಮೊದಲ ಪಂದ್ಯದಲ್ಲೇ 89 ರನ್​ಗಳ ಭಾರೀ ಸೋಲಿನ ಮುಖಭಂಗವನ್ನು ಎದುರಿಸಿದೆ.

ಅಲೆನ್ ಅಬ್ಬರ

ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಅಲೆನ್ ಹಾಗೂ ಡೆವೋನ್ ಕಾನ್ವೇ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಆಸೀಸ್ ಬೌಲಿಂಗ್ ಪಾಳಯದ ಸ್ಟಾರ್ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್ ಕಮ್ಮಿನ್ಸ್​ ಅವರನ್ನು ಮನಬಂದಂತೆ ದಂಡಿಸಿದ ಈ ಆರಂಭಿಕ ಜೋಡಿ ಪವರ್ ಪ್ಲೇಯಲ್ಲಿಯೇ ತಂಡವನ್ನು 50 ರ ಗಡಿ ದಾಟಿಸಿದರು. ಅದರಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ ಅಲೆನ್ ಕೇವಲ 16 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 42 ರನ್ ಚಚ್ಚಿದರು.

ಅಲೆನ್ ವಿಕೆಟ್ ಬಳಿಕ ಬಂದ ನಾಯಕ ವಿಲಿಯಮ್ಸನ್ ನಿದಾನಗತಿಯ ಆಟಕ್ಕೆ ಮುಂದಾದರೆ, ತನ್ನ ಎಂದಿನ ಶೈಲಿಯನ್ನು ಮುಂದುವರೆಸಿದ ಕಾನ್ವೇ ಅರ್ಧಶತಕ ಪೂರೈಸಿದಲ್ಲದೆ, ನಾಯಕ ಕೇನ್ ವಿಲಿಯಮ್ಸನ್ ಜೊತೆಗೂಡಿ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಆದರೆ 23 ಎಸೆತಗಳಲ್ಲಿ 23 ರನ್ ಗಳಿಸಿದ್ದ ನಾಯಕ ಕೇನ್ ಪೆವಿಲಿಯನ್ ಸೇರಿಕೊಂಡರೆ, ಅವರ ಬಳಿಕ ಬಂದ ಗ್ಲೆನ್ ಫಿಲಿಪ್ ಕೂಡ 10 ಎಸೆತಗಳಲ್ಲಿ 12 ರನ್​ಗಳಿಸಿ ತಮ್ಮ ಇನ್ನಿಂಗ್ಸ್ ಮುಗಿಸಿದರು.

ಇದನ್ನೂ ಓದಿ: NZ vs AUS: ನ್ಯೂಜಿಲೆಂಡ್ ಸ್ಫೋಟಕ ಬ್ಯಾಟಿಂಗ್: ಆಸ್ಟ್ರೇಲಿಯಾಕ್ಕೆ 201 ರನ್​ಗಳ ಬಿಗ್ ಟಾರ್ಗೆಟ್

ಅಜೇಯ 93 ರನ್ ಸಿಡಿಸಿದ ಕಾನ್ವೇ

200 ರ ಗಡಿ ದಾಟುವಂತೆ ಕಾಣುತ್ತಿದ್ದ ಕಿವೀಸ್ ಸ್ಕೋರ್ ಬೋರ್ಡ್ ಒಂದು ಹಂತದಲ್ಲಿ ತನ್ನ ವೇಗ ಕಳೆದುಕೊಂಡಿತು. ಆದರೆ ಕೊನೆಯ 4 ಓವರ್​ಗಳ ಆಟ ಬಾಕಿ ಉಳಿದಿದ್ದಾಗ ಕಾನ್ವೆ ಜೊತೆಯಾದ ಜೇಮ್ಸ್ ನೀಶಮ್ ತಗ್ಗಿದ ರನ್​ರೇಟ್​ಗೆ ವೇಗ ನೀಡಿದರು. ಹೀಗಾಗಿ ಅಂತಿಮ 24 ಎಸೆತಗಳಲ್ಲಿ 42 ರನ್ ಮೂಡಿಬಂದವು. ನೀಶಮ್ 13 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಅಜೇಯ 26 ರನ್ ಚಚ್ಚಿದರೆ, ಡೆವೋನ್ ಕಾನ್ವೆ ಕೇವಲ 58 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್​​ನೊಂದಿಗೆ ಅಜೇಯ 92 ರನ್​ಗಳ ಕೊಡುಗೆ ನೀಡಿದರು. ಅಂತಿಮವಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜ್ಲೆವುಡ್ 2 ವಿಕೆಟ್ ಕಿತ್ತರೆ, ಆ್ಯಡಂ ಝಂಪಾ 1 ವಿಕೆಟ್ ಪಡೆದರು. 4 ಓವರ್​ಗೆ 46 ರನ್ ನೀಡಿದ ಪ್ಯಾಟ್ ಕಮಿನ್ಸ್ ದುಬಾರಿ ಬೌಲರ್ ಎನಿಸಿಕೊಂಡರು. ​

ಕಾಂಗರೂಗಳ ಪೆವಿಲಿಯನ್ ಪರೇಡ್

ಇನ್ನು 200 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ನಾಯಕ ಫಿಂಚ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ವಾರ್ನರ್ ಕೇವಲ 5 ರನ್ ​ಗಳಿಸಿ 2ನೇ ಓವರ್​ನಲ್ಲೇ ಟಿಮ್ ಸೌಥಿಗೆ ಬಲಿಯಾದರೆ, ನಾಯಕ ಫಿಂಚ್ ಕೂಡ 13 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಬಂದ ಮಾರ್ಷ್​ ಕೂಡ ಒಂದು ಓವರ್ ಅಂತರದಲ್ಲಿ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ 16 ರನ್​ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದರು.

ಹೀಗೆ ಆಸೀಸ್ ತಂಡದ ಪ್ರಮುಖ 3 ವಿಕೆಟ್​ಗಳು ಪವರ್​ಪ್ಲೇನಲ್ಲಿಯೇ ಉರುಳಿದವು. ಹೀಗಾಗಿ ಆಸೀಸ್ ಇನ್ನಿಂಗ್ಸ್ ವೇಗವೂ ನಿದಾನಗತಿಯಲ್ಲಿ ಸಾಗಿತ್ತು. ಈ 3 ವಿಕೆಟ್​ಗಳ ಬಳಿಕ ಬಂದ ಮ್ಯಾಕ್ಸ್​ವೆಲ್ 28 ರನ್​ಗಳಿಸಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೆನಿಸಿಕೊಂಡರೆ, ಕೆಳ ಕ್ರಮಾಂಕದಲ್ಲಿ ಬಂದ ಪ್ಯಾಟ್​ಕಮ್ಮಿನ್ಸ್ 21 ರನ್​ಗಳಿಸಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಈ ಇಬ್ಬರನ್ನು ಬಿಟ್ಟರೆ ಆಸೀಸ್ ತಂಡದ ಆಟಗಾರರು ಒಂದಂಕ್ಕಿಗೆ ಸುಸ್ತಾಗಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ 18ನೇ ಓವರ್​ ಆಗುವಷ್ಟರಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡ ಆಸೀಸ್ ಪಡೆ 111 ರನ್​ ಗಳಿಸಿ, 89 ರನ್​ಗಳಿಂದ ಸೋಲೊಪ್ಪಿಕೊಂಡಿತು. ಕಿವೀಸ್ ಪರ ಸೌಥಿ ಹಾಗೂ ಸ್ಯಾಂಟ್ನರ್ ತಲಾ 3 ವಿಕೆಟ್ ಪಡೆದರೆ, ಬೌಲ್ಟ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಹಾಗೆಯೇ ಫಗ್ರ್ಯುಸನ್ ಹಾಗೂ ಸೋಧಿ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು. ಅದ್ಭುತ ಆಟ ಪ್ರದರ್ಶಿಸಿ ಶತಕ ವಂಚಿತರಾದ ಕಾನ್ವೇ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sat, 22 October 22