T20 World Cup 2021: ಟಿ20 ವಿಶ್ವಕಪ್ ಕಾವು ಶುರು: ಅರ್ಹಾತಾ ಸುತ್ತಿನಲ್ಲಿಂದು ಎರಡು ಪಂದ್ಯ: ಸೂಪರ್ 12ಗಾಗಿ ಹೋರಾಟ
ಇಂದಿನಿಂದ ದಿನಕ್ಕೆ ಎರಡು ಪಂದ್ಯಗಳಂತೆ ಅ. 22ರ ತನಕ ಅರ್ಹತಾ ಸುತ್ತು ನಡೆಯಲಿದೆ. ಅ. 23 ರಿಂದ ಕೂಟ ಕಾವೇರಿಸಿಕೊಳ್ಳಲಿದ್ದು, ಅಂದು ಸೂಪರ್-12 ಸ್ಪರ್ಧೆ ಮೊದಲ್ಗೊಳ್ಳುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2021ಕ್ಕೆ (IPL 2021) ತೆರೆಬಿದ್ದ ಬೆನ್ನಲ್ಲೇ ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2021) ಕ್ವಿಕ್ ಸ್ಟಾರ್ಟ್ ಸಿಗಲಿದೆ. ಏಳನೇ ಆವೃತ್ತಿಯ ಚುಟುಕು ವಿಶ್ವಕಪ್ನಲ್ಲಿ ಇಂದಿನಿಂದ ಸೂಪರ್ 12ಗೆ (Super 12) ಲಗ್ಗೆಯಿಡಲು ಅರ್ಹತಾ ಸುತ್ತಿನ ಪಂದ್ಯಕ್ಕೆ ಚಾಲನೆ ಸಿಗಲಿದೆ. ಕೂಟದ ಪ್ರಮುಖ ರೌಂಡ್ ಆಗಿರುವ ಸೂಪರ್-12 ಹಂತವನ್ನು ಪ್ರವೇಶಿಸಲಿರುವ 4 ತಂಡಗಳನ್ನು ನಿರ್ಧರಿಸುವ ಗ್ರೂಪ್ ಪಂದ್ಯಗಳು ಕಾವೇರಿಸಿಕೊಳ್ಳಲಿವೆ.
ಇಂದಿನಿಂದ ದಿನಕ್ಕೆ ಎರಡು ಪಂದ್ಯಗಳಂತೆ ಅ. 22ರ ತನಕ ಅರ್ಹತಾ ಸುತ್ತು ನಡೆಯಲಿದೆ. ಅ. 23 ರಿಂದ ಕೂಟ ಕಾವೇರಿಸಿಕೊಳ್ಳಲಿದ್ದು, ಅಂದು ಸೂಪರ್-12 ಸ್ಪರ್ಧೆ ಮೊದಲ್ಗೊಳ್ಳುತ್ತದೆ. ಇಂದಿನ ಮೊದಲ ಪಂದ್ಯದಲ್ಲಿ ಒಮಾನ್ ಮತ್ತು ಪಪುವಾ ನ್ಯೂಗಿನಿ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯ ಭಾರತದ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಇನ್ನು ಇಂದು ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಸ್ಕಾಟ್ಲೆಂಡ್ ವಿರುದ್ಧ ಸೆಣೆಸಾಟ ನಡೆಸಲಿದೆ. ಈ ಪಂದ್ಯ ರಾತ್ರಿ 7.30ಕ್ಕೆ ಶುರುವಾಗಲಿದೆ.
ಒಮಾನ್ ತಂಡವನ್ನು ಜೀಶನ್ ಮಸೂದ್ ನಾಯಕನಾಗಿ ಮುನ್ನಡೆಸುತ್ತಿದ್ದರೆ ಜತಿಂದರ್ ಸಿಂಗ್, ಖುರ್ರಮ್ ನವಾಜ್, ಅಖಿದ್ ಇಲ್ಯಾಸ್, ನಸೀಂ ಕೌಶಿ ಸೇರಿದಂತೆ ಪ್ರಮುಖ ಬ್ಯಾಟರ್ಗಳು ತಂಡದಲ್ಲಿದ್ದಾರೆ. ಅಂತೆಯೆ ಸಫಿಯಾನ್ ಮೆಹ್ಮೂದ್, ನೆಸ್ಟರ್ ಧಂಬಾ, ಸೂರಜ್ ಕುಮಾರ್ ಪ್ರಮುಖ ಬೌಲರ್ಗಳಾಗಿದ್ದಾರೆ. ಇತ್ತ ಪಪುವಾ ನ್ಯೂಗಿನಿ ತಂಡವನ್ನು ಅಸಾದ್ ವಾಲ ನಾಯಕನಾಗಿ ಮುನ್ನಡೆಸಿದರೆ, ಟೋನಿ ಉರಾ, ಲೆಗಾ ಸೈಕಾ, ಚಾರ್ಲೆಸ್ ಅಮಿನಿ ಪ್ರಮುಖ ಬ್ಯಾಟರ್ಗಳಾಗಿದ್ದಾರೆ.
ಇಂದು ನಡೆಯಲಿರುವ ಮತ್ತೊಂದು ಪಂದ್ಯ ಕುತೂಹಲ ಕೆರಳಿಸಿದೆ. ಇದರಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ತಂಡಗಳು ಸೆಣೆಸಾಟ ನಡೆಸಲಿವೆ. ಬಾಂಗ್ಲಾ ತಂಡವನ್ನು ಮೊಹಮ್ಮದುಲ್ಲ ಮುನ್ನಡೆಸುತ್ತಿದ್ದರೆ, ಮೊಹಮ್ಮದ್ ನೈಮ್, ಲಿಟನ್ ದಾಸ್, ಶಕಿಬ್ ಅಲ್ ಹಸನ್, ಮುಶ್ಫೀಕರ್ ರಹಿಮ್ ಪ್ರಮುಖ ಸ್ಟಾರ್ ಬ್ಯಾಟರ್ಗಳಾಗಿದ್ದಾರೆ. ಮಸ್ತಫಿಜುರ್ ರೆಹ್ಮಾನ್ ಅಪಾಯಕಾರಿ ಬೌಲರ್ ಆಗಿದ್ದರೆ, ಇವರಿಗೆ ನೌಸಮ್ ಅಹ್ಮದ್, ಟಸ್ಕಿನ್ ಅಹ್ಮದ್ ಸಾತ್ ನೀಡಲಿದ್ದಾರೆ. ಇತ್ತ ಸ್ಕಾಟ್ಲೆಂಡ್ ತಂಡಕ್ಕೆ ಖೈಲ್ ಸಿಯಾಟ್ಜೆರ್ ನಾಯಕನಾದರೆ, ಜಾರ್ಜ್ ಮುಸ್ನೆ, ರಿಚಿ ಬೆರ್ರಿಂಗ್ಟಾನ್, ಕಲುಮ್ ಮೆಕ್ಲೆಡ್ ಮ್ಯಾಥ್ಯೂ ಕ್ರಾಸ್ ಪ್ರಮುಖ ಬ್ಯಾಟರ್ಗಳಾಗಿದ್ದಾರೆ.
ಇಂದಿನಿಂದ ಸೂಪರ್-12 ಹಂತವನ್ನು ಪ್ರವೇಶಿಸಲು ಹೋರಾಟ ಶುರುವಾಗಲಿದೆ. ಇಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ 8 ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಈ ತಂಡಗಳನ್ನು ಎ-ಬಿ ಎಂದು ವಿಂಗಡಿಸಲಾಗಿದೆ. ಎರಡೂ ಗ್ರೂಪ್‌ಗ್ಳಲ್ಲಿ ತಲಾ 4 ತಂಡಗಳಿವೆ. ಇಲ್ಲಿ ಮೊದಲೆರಡು ಸ್ಥಾನ ಪಡೆದ ತಂಡ ಗಳು ಸೂಪರ್-12 ಹಂತವನ್ನು ಪ್ರವೇಶಿಸಲಿವೆ.“ಎ’ ವಿಭಾಗದಲ್ಲಿ ಐರ್ಲೆಂಡ್, ನಮೀಬಿಯಾ, ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ; “ಬಿ’ ವಿಭಾಗದಲ್ಲಿ ಬಾಂಗ್ಲಾ ದೇಶ, ಒಮಾನ್, ಪಪುವಾ ನ್ಯೂ ಗಿನಿ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ.
8 ತಂಡಗಳಿಗೆ ನೇರ ಪ್ರವೇಶ
ಈಗಾಗಲೇ ಸೂಪರ್-12 ಹಂತದಲ್ಲಿ 8 ತಂಡ ಗಳಿಗೆ ನೇರ ಪ್ರವೇಶ ಲಭಿಸಿದೆ. ಒಂದನೇ ವಿಭಾಗದಲ್ಲಿ ಆಸ್ಟ್ರೇಲಿಯ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. ಎ-1 ಮತ್ತು ಬಿ-2 ತಂಡಗಳು ಈ ವಿಭಾಗಕ್ಕೆ ಸೇರ್ಪಡೆಗೊಳ್ಳಲಿವೆ. ಎರಡನೇ ವಿಭಾಗದಲ್ಲಿರುವ ತಂಡಗಳೆಂದರೆ ಭಾರತ, ಪಾಕಿಸ್ಥಾನ, ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ಥಾನ. ಎ-2 ಮತ್ತು ಬಿ-1 ತಂಡಗಳು ಈ ವಿಭಾಗದಲ್ಲಿ ಸೆಣಸುವ ಅರ್ಹತೆ ಸಂಪಾದಿಸಲಿವೆ.
T20 World Cup: ಅ. 17ರಿಂದ ಟಿ20 ವಿಶ್ವಕಪ್ ಆರಂಭ; ಚುಟುಕು ಸಮರದ ಸಂಪೂರ್ಣ ವಿವರ ಇಲ್ಲಿದೆ
(ICC Mens T20 World Cup All you need to know ahead of 2021 tournament)