AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cup: ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯ; ನ.6ರಿಂದ ಆರಂಭ! ಫೈನಲ್ ಪಂದ್ಯ ಎಲ್ಲಿ ಗೊತ್ತಾ?

World Cup 2023: ಮೂಲಗಳ ಪ್ರಕಾರ, ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಲಿದ್ದು, ನವೆಂಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ.

World Cup: ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯ; ನ.6ರಿಂದ ಆರಂಭ! ಫೈನಲ್ ಪಂದ್ಯ ಎಲ್ಲಿ ಗೊತ್ತಾ?
ಏಕದಿನ ವಿಶ್ವಕಪ್
ಪೃಥ್ವಿಶಂಕರ
|

Updated on:Mar 22, 2023 | 3:58 PM

Share

ಈ ವರ್ಷ ಏಕದಿನ ವಿಶ್ವಕಪ್ (ICC world cup 2023) ನಡೆಯಲಿದ್ದು, ಇದರ ಆಯೋಜನೆಯ ಹಕ್ಕನ್ನು ಭಾರತ ಪಡೆದುಕೊಂಡಿರುವುದು ಈ ಮಹಾ ಸಮರಕ್ಕೆ ಮತ್ತಷ್ಟು ಬೆರಗು ತಂದಿದೆ. ಇದೇ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ವಿಶ್ವಕಪ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಮೂಲಗಳ ಪ್ರಕಾರ, ಏಕದಿನ ವಿಶ್ವಕಪ್ (ODI world cup) ಅಕ್ಟೋಬರ್ 5 ರಿಂದ ಪ್ರಾರಂಭವಾಲಿದ್ದು, ನವೆಂಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಟೂರ್ನಿಯ ಆಯೋಜನೆಗಾಗಿ ಬಿಸಿಸಿಐ (BCCI) ಕೆಲವು ಸ್ಥಳಗಳನ್ನು ಆಯ್ಕೆ ಮಾಡಿದೆ ಎಂದು ವರದಿಯಾಗಿದ್ದು, ಇದರ ಅಂತಿಮ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ESPNcricinfo ವೆಬ್‌ಸೈಟ್ ತನ್ನ ವರದಿಯಲ್ಲಿ ಬರೆದುಕೊಂಡಿದೆ. ಅಹಮದಾಬಾದ್ ಹೊರತುಪಡಿಸಿ, ಈ ವಿಶ್ವಕಪ್‌ನ ಪಂದ್ಯಗಳನ್ನು ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈನಲ್ಲಿ ಆಡಿಸಲಾಗುತ್ತದೆ ಎಂದು ವರದಿಯಾಗಿದೆ. ಮೂರು ನಾಕೌಟ್ ಪಂದ್ಯಗಳನ್ನು ಒಳಗೊಂಡಿರುವ ಈ ಟೂರ್ನಿಯಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು, ಈ ಟೂರ್ನಿ 46 ದಿನಗಳ ಕಾಲ ನಡೆಯಲಿದೆ.

ವಿಶ್ವಕಪ್​ಗೆ ಮುಂಗಾರು ಭಯ

ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಬಿಸಿಸಿಐ, ಅಂತಿಮ ಪಂದ್ಯವನ್ನು ಎಲ್ಲಿ ನಡೆಸಬೇಕು ಎಂಬುದನ್ನು ಮಾತ್ರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆದರೆ ಆಯ್ಕೆ ಮಾಡಿದ ಮೈದಾನಗಳಲ್ಲಿ ಯಾವಾಗ ಮತ್ತು ಯಾವ ತಂಡದ ಪಂದ್ಯಗಳನ್ನು ನಡೆಸಬೇಕು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇದಕ್ಕೆ ಕಾರಣವೂ ಇದ್ದು, ವಿಶ್ವಕಪ್ ಆಯೋಜನೆ ಸಮಯದಲ್ಲಿ ಭಾರತಕ್ಕೆ ಮುಂಗಾರು ಎಂಟ್ರಿಕೊಟ್ಟಿರುತ್ತದೆ. ಹೀಗಾಗಿ ಯಾವ ಮೈದಾನದಲ್ಲಿ ಯಾವಾಗ ಪಂದ್ಯವನ್ನಾಡಿಸಬೇಕು ಎಂಬುದನ್ನು ತೀರ್ಮಾನಿಸಲು ವಿಳಂಬವಾಗಿದೆ. ಸಾಮಾನ್ಯವಾಗಿ ಐಸಿಸಿ ವಿಶ್ವಕಪ್‌ಗೆ ಒಂದು ವರ್ಷ ಮುಂಚಿತವಾಗಿ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆದರೆ ತೆರಿಗೆ ವಿನಾಯಿತಿ ಹಾಗೂ ಪಾಕಿಸ್ತಾನಿ ಆಟಗಾರರ ವೀಸಾ ಬಗ್ಗೆ ಭಾರತ ಸರ್ಕಾರದಿಂದ ಇನ್ನು ಯಾವುದೇ ಅನುಮತಿ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರದಿಂದ ಈ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಬಳಿಕ ಬಿಸಿಸಿಐ, ವಿಶ್ವಕಪ್ ಬಗ್ಗೆ ಪೂರ್ಣ ಚಿತ್ರಣ ನೀಡಲಿದೆ.

IND vs AUS: ಭಾರತ ಬೌಲಿಂಗ್, ಆಸೀಸ್ ತಂಡದಲ್ಲಿ ಬದಲಾವಣೆ; ಉಭಯ ತಂಡಗಳು ಹೀಗಿವೆ

ಕಳೆದ ವಾರ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪಾಕಿಸ್ತಾನಿ ಆಟಗಾರರು ಭಾರತ ಸರ್ಕಾರದಿಂದ ವೀಸಾ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಿಸುವುದಿಲ್ಲ ಎಂದು ಬಿಸಿಸಿಐ, ಐಸಿಸಿಗೆ ಭರವಸೆ ನೀಡಿತ್ತು. ಮತ್ತೊಂದೆಡೆ, ತೆರಿಗೆ ವಿಷಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಐಸಿಸಿಗೆ ಮಾಹಿತಿ ನೀಡಲಿದೆ ಎಂದು ತಿಳಿಸಿತ್ತು.

ತೆರಿಗೆ ಬಿಲ್ ಶೇ.21.84ಕ್ಕೆ ಹೆಚ್ಚಳ

2014 ರಲ್ಲಿ ಐಸಿಸಿ ಮೂರು ಪಂದ್ಯಾವಳಿಗಳ ಆತಿಥ್ಯವನ್ನು ಬಿಸಿಸಿಐಗೆ ನೀಡಿದಾಗ, ಈ ಪಂದ್ಯಾವಳಿಗಳನ್ನು ಆಯೋಜಿಸಲು ಬಿಸಿಸಿಐ, ಭಾರತ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುತ್ತದೆ ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು. ಆದರೆ 20ರಷ್ಟು ತೆರಿಗೆಯನ್ನು ಪಾವತಿಸಬೇಕೆಂದು ಕಳೆದ ವರ್ಷ ಐಸಿಸಿಗೆ ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದರು. ಈ ವಿಚಾರದಲ್ಲಿ ಅಂತಿಮ ನಿಲುವು ಏನೆಂಬುದನ್ನು ಬಿಸಿಸಿಐ ಶೀಘ್ರದಲ್ಲೇ ಐಸಿಸಿಗೆ ತಿಳಿಸಬೇಕಾಗಿದೆ. ಭಾರತ ಕೊನೆಯದಾಗಿ 2016 ರಲ್ಲಿ ಟಿ20 ವಿಶ್ವಕಪ್ ಆಯೋಜಿಸಿತ್ತು. ಆ ಸಮಯದಲ್ಲಿಯೂ ಬಿಸಿಸಿಐ ತೆರಿಗೆ ಸಮಸ್ಯೆಯನ್ನು ಪರಿಹರಿಸಲು ವಿಫಲವಾಗಿತ್ತು. ಹೀಗಾಗಿ ಐಸಿಸಿ, ಬಿಸಿಸಿಐಗೆ ನೀಡಬೇಕಿದ್ದ ವಾರ್ಷಿಕ ಷೇರಿನಿಂದ 190 ಕೋಟಿ ರೂ.ಗಳನ್ನು ಕಡಿತಗೊಳಿಸಿತ್ತು. ಈಗ ಈ ಬಾರಿ ಐಸಿಸಿ ತೆರಿಗೆ ಬಿಲ್ ಅನ್ನು ಶೇ.21.84ಕ್ಕೆ ಹೆಚ್ಚಿಸಿದ್ದು, ಒಂದು ವೇಳೆ ಬಿಸಿಸಿಐ ಕೇಂದ್ರ ಸರ್ಕಾರದಿಂದ ವಿಶ್ವಕಪ್‌ಗೆ ತೆರಿಗೆ ವಿನಾಯಿತಿ ಪಡೆಯದಿದ್ದರೆ, ಮಂಡಳಿಯು 900 ಕೋಟಿ ರೂಪಾಯಿಗೂ ಹೆಚ್ಚು ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಐಸಿಸಿ ನೀತಿ ಹೇಳುವುದೇನು?

ಐಸಿಸಿ ನಿಯಮದ ಪ್ರಕಾರ ಯಾವುದೇ ದೇಶ ಐಸಿಸಿ ಈವೆಂಟ್​ಗಳನ್ನು ಆಯೋಜಿಸಲು ಮುಂದಾದರೆ, ಆ ಆತಿಥೇಯ ದೇಶವು ತನ್ನ ಸರ್ಕಾರದಿಂದ ತೆರಿಗೆ ವಿನಾಯಿತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ, ಈ ಟೂರ್ನಿಯಿಂದ ಬರುವ ಆದಾಯದಲ್ಲಿ ಆತಿಥೇಯ ದೇಶಕ್ಕೆ ಸಿಗುವ ಶೇರಿನಲ್ಲಿ ತೆರಿಗೆ ಹಣವನ್ನು ಕಡಿತಗೊಳಿಸಿ, ಮಿಕ್ಕ ಹಣವನ್ನು ನೀಡುತ್ತದೆ. ಇದರ ಪ್ರಕಾರ ಹೊದರೆ, ಬಿಸಿಸಿಐ ತೆರಿಗೆ ವಿನಾಯತಿ ಪಡೆಯದಿದ್ದರೆ, ಅದರ ಬೋಕ್ಕಸಕ್ಕೆ ಭಾರಿ ನಷ್ಟವಾಗಲಿದೆ.

ಮೊದಲ ಬಾರಿಗೆ ಭಾರತದಲ್ಲಿ ಪೂರ್ಣ ಪಂದ್ಯಾವಳಿ

ಐಸಿಸಿಯ ಇಡೀ ಟೂರ್ನಿ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು. 1987 ರಲ್ಲಿ, ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಆತಿಥ್ಯ ವಹಿಸಿದ್ದವು. 1996 ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದ್ದವು. 2011 ರ ವಿಶ್ವಕಪ್ ಅನ್ನು ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆಯೋಜಿಸಿತ್ತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ, ಇಡೀ ಪಂದ್ಯಾವಳಿಯನ್ನು ಭಾರತ ಆಯೋಜಿಸಲಿದೆ. ಆದರೆ ಅದಕ್ಕೂ ಮೊದಲು ಮಂಡಳಿಯು ತೆರಿಗೆ ಸಂಬಂಧಿತ ಸಮಸ್ಯೆಗೆ ಸಮಯೋಚಿತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:50 pm, Wed, 22 March 23