ಪಟ್ಟು ಬಿಡದ ಪಾಕಿಸ್ತಾನ; ಸಭೆಯನ್ನು ನ.30ಕ್ಕೆ ಮುಂದೂಡಿದ ಐಸಿಸಿ

|

Updated on: Nov 29, 2024 | 5:59 PM

ICC Champions Trophy Meeting: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಗೊಂದಲಗಳಿಗೆ ತೆರೆ ಎಳೆಯುವ ಸಲುವಾಗಿ ಇಂದು ವರ್ಚುವಲ್ ಸಭೆಯನ್ನು ನಡೆಸಲಾಯಿತು. ಆದರೆ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರದ ಕಾರಣ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ.

ಪಟ್ಟು ಬಿಡದ ಪಾಕಿಸ್ತಾನ; ಸಭೆಯನ್ನು ನ.30ಕ್ಕೆ ಮುಂದೂಡಿದ ಐಸಿಸಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ
Follow us on

ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಐಸಿಸಿ ಇಂದು ವರ್ಚುವಲ್ ಸಭೆಯನ್ನು ಏರ್ಪಡಿಸಿತ್ತು. ಈ ಸಭೆಯಲ್ಲಿ ಬಿಸಿಸಿಐ ಮತ್ತು ಪಿಸಿಬಿ ಸೇರಿದಂತೆ ಎಲ್ಲಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಅದರಂತೆ ಈ ಸಭೆಯಲ್ಲಿ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಬೇಕೇ ಅಥವಾ ಬೇಡವೇ?. ಹಾಗೂ ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ಆಯೋಜಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಈ ಸಭೆಯ ನಂತರವೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಐಸಿಸಿಗೆ ಸಾಧ್ಯವಾಗಿಲ್ಲ. ಹೀಗಾಗಿ ಈ ಸಭೆಯನ್ನು ನಾಳೆಗೆ ಅಂದರೆ ನವೆಂಬರ್ 30 ಕ್ಕೆ ಮುಂದೂಡಲಾಗಿದೆ.

ವಾಸ್ತವವಾಗಿ ಐಸಿಸಿ ಈ ಸಭೆಯನ್ನು ಆಯೋಜಿಸಿದ್ದೇ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯಾವಳಿಯಲ್ಲಿ ಭಾಗವಹಿಸುವಿಕೆಯ ಬಗ್ಗೆ ಎದ್ದಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು. ವರದಿಯ ಪ್ರಕಾರ, 10 ರಿಂದ 15 ನಿಮಿಷಗಳವರೆಗೆ ನಡೆದ ಈ ಸಭೆಯಲ್ಲಿ ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಈ ಸಭೆಯನ್ನು ನವೆಂಬರ್ 30 ಕ್ಕೆ ಅಂದರೆ ನಾಳೆಗೆ ಮುಂದೂಡಲಾಗಿದೆ. ಈಗ ಈ ಟೂರ್ನಿಯ ಅಂತಿಮ ನಿರ್ಧಾರ ನವೆಂಬರ್ 30 ರಂದು ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

ಸಭೆಯಲ್ಲಿ ಮೂರು ಆಯ್ಕೆಗಳ ಬಗ್ಗೆ ಚರ್ಚೆ

ಐಸಿಸಿಯ ಈ ಸಭೆಯಲ್ಲಿ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಮೂರು ಆಯ್ಕೆಗಳನ್ನು ಇಟ್ಟುಕೊಂಡು ಚರ್ಚೆ ನಡೆಸಲಾಗಿದೆ. ಮೊದಲ ಆಯ್ಕೆಯಾಗಿ, ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವುದು. ಆ ಪ್ರಕಾರ, ಟೀಂ ಇಂಡಿಯಾದ ಪಂದ್ಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ನಡೆಸುವುದು. ಎರಡನೆಯ ಆಯ್ಕೆಯೆಂದರೆ, ಇಡೀ ಪಂದ್ಯಾವಳಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದ ಹೊರಗೆ ನಡೆಸುವುದು. ಆದರೆ ಪಂದ್ಯಾವಳಿಯ ಹೋಸ್ಟಿಂಗ್ ಹಕ್ಕುಗಳನ್ನು ಪಿಸಿಬಿಗೆ ನೀಡುವುದು. ಕೊನೆಯ ಆಯ್ಕೆಯೆಂದರೆ ಟೀಂ ಇಂಡಿಯಾವನ್ನು ಹೊರಗಿಟ್ಟು ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲೇ ನಡೆಸುವುದು.

ಸಂಕಷ್ಟಕ್ಕೆ ಸಿಲುಕಿದ ಐಸಿಸಿ

ಆದರೆ ಐಸಿಸಿ ನೀಡಿರುವ ಈ ಮೂರು ಆಯ್ಕೆಗಳಲ್ಲಿ ಎರಡು ಆಯ್ಕೆಗಳಿಗೆ ಪಾಕಿಸ್ತಾನ ಒಪ್ಪಿಗೆ ಸೂಚಿಸಿಲ್ಲ ಎಂದು ವರದಿಯಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ದವಿಲ್ಲ. ಇತ್ತ ಎರಡನೇ ಆಯ್ಕೆಗೆ ಒಪ್ಪಿಗೆ ಸೂಚಿಸಿದರೆ, ಪಾಕಿಸ್ತಾನಕ್ಕೆ ಭಾರಿ ನಷ್ಟವುಂಟಾಗಲಿದೆ. ಏಕೆಂದರೆ ಈ ಪಂದ್ಯಾವಳಿಯನ್ನು ನಡೆಸುವ ಸಲುವಾಗಿಯೇ ಪಿಸಿಬಿ, ಸಾವಿರಾರು ಕೋಟಿಗಳನ್ನು ಖರ್ಚು ಮಾಡಿ ದೇಶದ ಮೂರು ಪ್ರಮುಖ ಕ್ರೀಡಾಂಗಣಗಳನ್ನು ನವೀಕರಿಸುತ್ತಿದೆ. ಒಂದು ವೇಳೆ ಪಂದ್ಯಾವಳಿ ಪಾಕಿಸ್ತಾನದಲ್ಲಿ ನಡೆಯದಿದ್ದರೆ, ಪಾಕಿಸ್ತಾನಕ್ಕೆ ನಷ್ಟದ ಜೊತೆಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ಇನ್ನು ಮೂರನೇ ಆಯ್ಕೆಗೆ ಅಂದರೆ ಭಾರತವನ್ನು ಹೊರಗಿಟ್ಟು ಪಂದ್ಯಾವಳಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ದವಿದೆ. ಆದರೆ ಇದಕ್ಕೆ ಐಸಿಸಿ ಸಿದ್ದವಿಲ್ಲ. ಏಕೆಂದರೆ ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡದಿದ್ದರೆ, ಐಸಿಸಿ ಖಜಾನೆಗೆ ತುಂಬಲಾರದ ನಷ್ಟವುಂಟಾಗಲಿದೆ. ಹೀಗಾಗಿ ನಾಳಿನ ಸಭೆಯ ಬಳಿಕ ಐಸಿಸಿ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:56 pm, Fri, 29 November 24