AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯುವಂತಿಲ್ಲ’; ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡಿದ ಐಸಿಸಿ

ICC Champions Trophy 2025: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯಲ್ಲಿ ಹಲವು ಅಡೆತಡೆಗಳು ಎದುರಾಗುತ್ತಿವೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸಲು ಪಾಕಿಸ್ತಾನ ಇನ್ನೂ ಒಪ್ಪಿಲ್ಲ. ಇದೀಗ ವಿವಾದಿತ ಪ್ರದೇಶವಾದ ಪಿಒಕೆಗೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯದಂತೆ ಪಾಕಿಸ್ತಾನಕ್ಕೆ, ಐಸಿಸಿ ಸೂಚನೆ ನೀಡಿದೆ.

‘ಈ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯುವಂತಿಲ್ಲ’; ಪಾಕಿಸ್ತಾನಕ್ಕೆ ಖಡಕ್ ಸೂಚನೆ ನೀಡಿದ ಐಸಿಸಿ
ಚಾಂಪಿಯನ್ಸ್ ಟ್ರೋಫಿ
ಪೃಥ್ವಿಶಂಕರ
|

Updated on: Nov 15, 2024 | 5:18 PM

Share

2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ನಾನಾ ಅಡೆತಡೆಗಳು ಎದುರಾಗುತ್ತಿವೆ. ಈ ಐಸಿಸಿ ಟೂರ್ನಿಯನ್ನು ಆಡಲು ಪಾಕಿಸ್ತಾನಕ್ಕೆ ಹೋಗಲು ಭಾರತ ತಂಡಕ್ಕೆ ಅನುಮತಿ ಸಿಕ್ಕಿಲ್ಲ. ಇತ್ತ ಪಾಕಿಸ್ತಾನ ಕೂಡ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪುತ್ತಿಲ್ಲ. ಈ ನಡುವೆ ಭಾರತವನ್ನು ಕೆರಳಿಸುವ ಕೆಲಸಕ್ಕೆ ಮುಂದಾಗಿದ್ದ ಪಾಕಿಸ್ತಾನಕ್ಕೆ, ಐಸಿಸಿ ಖಡಕ್ ಎಚ್ಚರಿಕೆ ನೀಡಿದೆ. ಅದರಂತೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯುವಂತಿಲ್ಲ ಎಂದು ಐಸಿಸಿ, ಪಾಕಿಸ್ತಾನಕ್ಕೆ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ವಾಸ್ತವವಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದುಬೈನಿಂದ ಇಸ್ಲಾಮಾಬಾದ್‌ಗೆ ಕಳುಹಿಸಿದೆ. ಇದೀಗ ಈ ಟ್ರೋಫಿಯನ್ನು ದೇಶದಾದ್ಯಂತ ಕೊಂಡೊಯ್ಯಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸಿದ್ಧವಾಗಿದೆ. ಅಂದರೆ ಪಾಕಿಸ್ತಾನದ ವಿವಿಧ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ನಡೆಸಲಾಗುತ್ತದೆ. ಇದಕ್ಕಾಗಿ ಪಾಕಿಸ್ತಾನ, ಯಾವ್ಯಾವ ಸ್ಥಳಗಳಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಏರ್ಪಡಿಸಬೇಕು ಎಂಬುದರ ಪಟ್ಟಿ ಮಾಡಿ, ಐಸಿಸಿಗೆ ಸಲ್ಲಿಸಿತ್ತು. ಆದರೆ ಪಾಕ್ ಸಲ್ಲಿಸಿದ ಪಟ್ಟಿಯಲ್ಲಿ ವಿವಾದಿತ ಜಾಗದ ಹೆಸರಿರುವುದನ್ನು ಮನಗಂಡಿರುವ ಐಸಿಸಿ, ಆ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯದಂತೆ ಪಾಕ್ ಮಂಡಳಿಗೆ ತಾಕೀತು ಮಾಡಿದೆ.

ಐಸಿಸಿ ಮಹತ್ವದ ನಿರ್ಧಾರ

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ನವೆಂಬರ್ 14 ರಂದು ಇಸ್ಲಾಮಾಬಾದ್ ತಲುಪಿದೆ. ಈಗ ನವೆಂಬರ್ 16 ರಿಂದ ನವೆಂಬರ್ 24 ರವರೆಗೆ ಅಭಿಮಾನಿಗಳ ನಡುವೆ ಪಾಕಿಸ್ತಾನದ ವಿವಿಧ ಸ್ಥಳಗಳಿಗೆ ಟ್ರೋಫಿಯನ್ನು ಪ್ರದರ್ಶನವನ್ನು ನಡೆಸಲಾಗುತ್ತದೆ. ವೇಳಾಪಟ್ಟಿಯ ಪ್ರಕಾರ, ಟ್ರೋಫಿಯು ಸ್ಕರ್ಡು, ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ನಲ್ಲಿ ಪ್ರದರ್ಶನಗೊಳಲ್ಲಿದೆ. ಇವುಗಳಲ್ಲಿ ಸ್ಕರ್ದು, ಹುಂಜಾ ಮತ್ತು ಮುಜಫರಾಬಾದ್ ನಗರಗಳು ವಿವಾದಿತ ಪ್ರದೇಶವಾದ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ದಲ್ಲಿ ಬರುತ್ತವೆ. ಹೀಗಾಗಿ ಈ ಪ್ರದೇಶಕ್ಕೆ ಚಾಂಪಿಯನ್ಸ್ ಟ್ರೋಫಿಯನ್ನು ಕೊಂಡೊಯ್ಯವಂತಿಲ್ಲ ಎಂದು ಪಾಕ್ ಮಂಡಳಿಗೆ ಐಸಿಸಿ ಸೂಚಿಸಿದೆ ಎಂದು ವರದಿಯಾಗಿದೆ.

ವೇಳಾಪಟ್ಟಿಗೂ ಮುನ್ನ ಟ್ರೋಫಿ ಪ್ರವಾಸ

ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಆದರೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದರಿಂದ ಮತ್ತು ಪಾಕಿಸ್ತಾನವು ಹೈಬ್ರಿಡ್ ಮಾದರಿಗೆ ಸಿದ್ಧವಾಗದ ಕಾರಣ, ವೇಳಾಪಟ್ಟಿ ಪ್ರಕಟಣೆ ವಿಳಂಬವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಐಸಿಸಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಯಾವುದೇ ಅಧಿಕೃತ ಪಂದ್ಯಾವಳಿಯ ವೇಳಾಪಟ್ಟಿಯಿಲ್ಲದೆ ಟ್ರೋಫಿಯ ಪ್ರದರ್ಶನ ನಡೆಯಲಿದೆ. ಸಾಮಾನ್ಯವಾಗಿ ಪಂದ್ಯಾವಳಿಯ ವೇಳಾಪಟ್ಟಿಯನ್ನು ಕನಿಷ್ಠ 100 ದಿನಗಳ ಮುಂಚಿತವಾಗಿ ಘೋಷಿಸಲಾಗುತ್ತದೆ. ಇದರ ನಂತರವೇ ಟ್ರೋಫಿಯ ಪ್ರದರ್ಶನ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ವಿಭಿನ್ನ ಪ್ರಯತ್ನಕ್ಕೆ ಐಸಿಸಿ ಕೈಹಾಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ