ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್; ರಣಜಿಯಲ್ಲಿ ದಾಖಲೆ ಬರೆದ ಯುವ ವೇಗಿ; ವಿಡಿಯೋ ನೋಡಿ
Ranji Trophy 2024: ರಣಜಿ ಟ್ರೋಫಿಯಲ್ಲಿ ಹರಿಯಾಣದ ವೇಗದ ಬೌಲರ್ ಅಂಶುಲ್ ಕಾಂಬೋಜ್ ಅವರು ಕೇರಳ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇದು 39 ವರ್ಷಗಳ ಬಳಿಕ ಈ ಸಾಧನೆಯ ಪುನರಾವರ್ತನೆಯಾಗಿದೆ. ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಆರನೇ ಬಾರಿ ಈ ಸಾಧನೆ ಸಂಭವಿಸಿದೆ.
ರಣಜಿ ಟ್ರೋಫಿಯಲ್ಲಿ ದಾಖಲೆಗಳ ಸರಣಿ ಮುಂದುವರಿದಿದೆ. ನಿನ್ನೆ ಒಂದೇ ದಿನ ಮೂವರು ಬ್ಯಾಟರ್ಸ್ಗಳು ತ್ರಿಶತಕ ಸಿಡಿಸಿ ಮಿಂಚಿದ್ದರು. ಇದೀಗ ಯುವ ವೇಗಿಯೊಬ್ಬ ಎಲ್ಲ 10 ವಿಕೆಟ್ ಕಬಳಿಸಿ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ರಣಜಿಯಲ್ಲಿ ಎಲೈಟ್ ಗುಂಪಿನ ಐದನೇ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಆ ಪ್ರಕಾರ, ರೋಹ್ಟಕ್‌ನಲ್ಲಿ ಕೇರಳ ಮತ್ತು ಹರಿಯಾಣ ನಡುವೆ ಪಂದ್ಯ ನಡೆಯುತ್ತಿದೆ. ಈ ವೇಳೆ ಕೇರಳ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ಹರಿಯಾಣದ ವೇಗದ ಬೌಲರ್ ಅಂಶುಲ್ ಕಾಂಬೋಜ್ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಈ ಟೂರ್ನಿಯ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಂಶುಲ್ ಪಾತ್ರರಾಗಿದ್ದಾರೆ.
39 ವರ್ಷಗಳ ನಂತರ ದಾಖಲೆ
ಕೇರಳ ವಿರುದ್ಧದ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 30 ಓವರ್‌ಗಳನ್ನು ಬೌಲ್ ಮಾಡಿದ ಅನ್ಶುಲ್ 49 ರನ್‌ಗಳನ್ನು ನೀಡಿ, ಎಲ್ಲಾ 10 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ರಣಜಿ ಟ್ರೋಫಿ ಇತಿಹಾಸದಲ್ಲಿ 39 ವರ್ಷಗಳ ನಂತರ ಅನ್ಶುಲ್ ಈ ಸಾಧನೆಯನ್ನು ಪುನರಾವರ್ತಿಸಿದರು. ಇದಕ್ಕೂ ಮುನ್ನ 1985-86ರ ಸೀಸನ್ನಲ್ಲಿ ರಾಜಸ್ಥಾನ ವೇಗಿ ಪ್ರದೀಪ್ ಸುಂದರಂ ವಿದರ್ಭ ವಿರುದ್ಧ ಒಂದೇ ಇನ್ನಿಂಗ್ಸ್‌ನಲ್ಲಿ 78 ರನ್‌ಗಳಿಗೆ 10 ವಿಕೆಟ್ ಪಡೆದಿದ್ದರು. ಮೊದಲ ಬಾರಿಗೆ,ಬಂಗಾಳದ ಪರ ಆಡಿದ್ದ ಪ್ರೇಮಾಂಗ್ಶು ಚಟರ್ಜಿ, 1956-57 ರ ಸೀಸನ್ನಲ್ಲಿ ಅಸ್ಸಾಂ ವಿರುದ್ಧ ಕೇವಲ 20 ರನ್ ನೀಡಿ ಎಲ್ಲಾ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದರು.
6ನೇ ಬಾರಿಗೆ ಸಂಭವಿಸಿದೆ
ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್ಗಳು ಒಬ್ಬನೇ ಬೌಲರ್ ಉರುಳಿಸಿರುವುದು ಇದು 6 ಬಾರಿ. ದೇಶೀಯ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ದೇಬಶಿಶ್ ಮೊಹಂತಿ ಈ ಕೆಲಸ ಮಾಡಿದರು. ದುಲೀಪ್ ಟ್ರೋಫಿಯ 2000-01ರ ಸೀಸನ್ನಲ್ಲಿ ಅವರು 46 ರನ್‌ಗಳಿಗೆ 10 ವಿಕೆಟ್‌ಗಳನ್ನು ಪಡೆದಿದ್ದರು.
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲಿಗರು ಸುಭಾಷ್ ಗುಪ್ತೆ. ಅವರು 1954-55ರಲ್ಲಿ ಬಾಂಬೆ ಪರ ಆಡುತ್ತಿದ್ದಾಗ, ಪಾಕಿಸ್ತಾನದ ಕಂಬೈನ್ಡ್ ಸರ್ವಿಸಸ್ ವಿರುದ್ಧ 10 ವಿಕೆಟ್ ಕಬಳಿಸಿದ್ದರು. ಆದರೆ ಈ ಕೆಲಸವನ್ನು ಅನಿಲ್ ಕುಂಬ್ಳೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾಡಿದ್ದಾರೆ. ಅವರು 1999 ರಲ್ಲಿ ಕೋಟ್ಲಾ ಟೆಸ್ಟ್‌ನಲ್ಲಿ ಏಕಾಂಗಿಯಾಗಿ ಪಾಕಿಸ್ತಾನದ 10 ವಿಕೆಟ್‌ಗಳನ್ನು ಪಡೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ