ಕಳೆಗುಂದಿರುವ ಏಕದಿನ ಕ್ರಿಕೆಟ್ಗೆ ಮರುಜೀವ ನೀಡಲು ಐಸಿಸಿ ಮಹತ್ವದ ನಿರ್ಧಾರ
ODI Super League Set for 2028 Return: ಏಕದಿನ ಕ್ರಿಕೆಟ್ಗೆ ಮರುಜೀವ ನೀಡಲು ಐಸಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. 2023ರ ವಿಶ್ವಕಪ್ ನಂತರ ಸ್ಥಗಿತಗೊಂಡಿದ್ದ ಏಕದಿನ ಸೂಪರ್ ಲೀಗ್ ಅನ್ನು 2028ರಿಂದ ಪುನರಾರಂಭಿಸಲು ಸಿದ್ಧತೆ ನಡೆಸಿದೆ. T20 ಅಬ್ಬರದ ನಡುವೆ 50 ಓವರ್ ಸ್ವರೂಪದ ಮಹತ್ವವನ್ನು ಹೆಚ್ಚಿಸುವುದು ಇದರ ಉದ್ದೇಶ. ವಿಶ್ವಕಪ್ ಅರ್ಹತೆ ಹಾಗೂ ಕಡಿಮೆ ಶ್ರೇಯಾಂಕದ ತಂಡಗಳಿಗೆ ಅವಕಾಶ ಕಲ್ಪಿಸುವುದು ಈ ಲೀಗ್‌ನ ಪ್ರಮುಖ ಗುರಿ.

ಟಿ20 ಕ್ರಿಕೆಟ್ನ ಅಬ್ಬರದಿಂದಾಗಿ ಮೂಲೆ ಗುಂಪಾಗಿರುವ ಏಕದಿನ ಕ್ರಿಕೆಟ್ಗೆ ಮರು ಜೀವ ನೀಡುವ ಸಲುವಾಗಿ ಐಸಿಸಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಅದರಂತೆ 2023 ರ ಏಕದಿನ ವಿಶ್ವಕಪ್ ನಂತರ ಸ್ಥಗಿತಗೊಂಡಿದ್ದ ಏಕದಿನ ಸೂಪರ್ ಲೀಗ್ (ODI Super League) ಅನ್ನು ಪುನರಾರಂಭಿಸಲು ಐಸಿಸಿ (ICC) ತೀರ್ಮಾನಿಸಿದೆ. ವರದಿ ಪ್ರಕಾರ ಈ ಲೀಗ್ ಅನ್ನು 2028 ರಿಂದ ಪುನರಾರಂಭಿಸಲು ಯೋಜನೆಗಳು ನಡೆಯುತ್ತಿವೆ. 2020 ರಲ್ಲಿ ಪ್ರಾರಂಭವಾದ ಈ ಲೀಗ್ 50-ಓವರ್ ಕ್ರಿಕೆಟ್ಗೆ ಮರುಜೀವ ನೀಡುವ ಗುರಿಯನ್ನು ಹೊಂದಿತ್ತು. ಆದಾಗ್ಯೂ, ಕಾರ್ಯನಿರತ ಕ್ಯಾಲೆಂಡರ್‌ನಿಂದಾಗಿ ಈ ಲೀಗ್‌ನ ಅನ್ನು ಐಸಿಸಿ ಸ್ಥಗಿತಗೊಳಿಸಿತ್ತು.
ಏಕದಿನ ಸೂಪರ್ ಲೀಗ್ ಮತ್ತೆ ಆರಂಭ
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಏಕದಿನ ಸೂಪರ್ ಲೀಗ್ ಅನ್ನು ಮರು ಆರಂಭಿಸಲು ಮುಂದಾಗಿದೆ. ಕ್ರಮೇಣ ಕ್ಷೀಣಿಸುತ್ತಿರುವ 50-ಓವರ್ ಸ್ವರೂಪವನ್ನು ಸುಧಾರಿಸಲು ಈ 13 ತಂಡಗಳ ಲೀಗ್ ಅನ್ನು 2020 ರಲ್ಲಿ ಪ್ರಾರಂಭಿಸಲಾಯಿತು. ಆದರೆ 2023 ರ ವಿಶ್ವಕಪ್ ನಂತರ ಈ ಲೀಗ್ಗೆ ತೀಲಾಂಜಲಿ ಇಡಲಾಗಿತ್ತು. ಆದರೀಗ ಈ ಲೀಗ್ 2028 ರಲ್ಲಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಈ ಬಾರಿ ಭಾಗವಹಿಸುವ ತಂಡಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ.
ಏಕದಿನ ಸೂಪರ್ ಲೀಗ್ ಎಂದರೇನು?
ಏಕದಿನ ಸೂಪರ್ ಲೀಗ್ ಅನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ ಮತ್ತು 50 ಓವರ್‌ಗಳ ಪಂದ್ಯಗಳ ಪ್ರಾಮುಖ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2019 ರ ಏಕದಿನ ವಿಶ್ವಕಪ್ ನಂತರ ಏಕದಿನ ಸೂಪರ್ ಲೀಗ್ ಅನ್ನು ಒಮ್ಮೆ ಮಾತ್ರ ಆಡಲಾಯಿತು. ಈ ಲೀಗ್ನಲ್ಲಿ ಒಟ್ಟು 13 ತಂಡಗಳು ಆಡಿದ್ದವು. ಅದರಂತೆ ಮೊದಲ ಆವೃತ್ತಿಯ ಸೂಪರ್ ಲೀಗ್, 2023 ರ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಿರ್ಧರಿಸಲು ಸಹಾಯ ಮಾಡಿತು. ಸೂಪರ್ ಲೀಗ್‌ನಲ್ಲಿರುವ ಪ್ರತಿಯೊಂದು ತಂಡವು ಇತರ ಎಂಟು ತಂಡಗಳ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡುತ್ತದೆ. ಅವುಗಳಲ್ಲಿ ನಾಲ್ಕು ಸರಣಿಗಳನ್ನು ತವರು ನೆಲದಲ್ಲಿ ಮತ್ತು ನಾಲ್ಕು ಸರಣಿಗಳನ್ನು ಎದುರಾಳಿ ತಂಡದ ತವರು ನೆಲದಲ್ಲಿ ಆಡುತ್ತದೆ. ಇದರರ್ಥ ಮುಂದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಗಳಿಸಲು ಪ್ರತಿ ತಂಡವು ಒಟ್ಟು 24 ಏಕದಿನ ಪಂದ್ಯಗಳನ್ನು ಆಡುತ್ತದೆ.
ಈ ಲೀಗ್‌ನ ಮತ್ತೊಂದು ಪ್ರಯೋಜನವೆಂದರೆ, ಶ್ರೇಯಾಂಕದಲ್ಲಿ ಅಗ್ರ 10 ರ ಹೊರಗೆ ಸ್ಥಾನ ಪಡೆದಿರುವ ತಂಡಗಳು ಅಗ್ರ ತಂಡಗಳ ವಿರುದ್ಧ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುವ ಅವಕಾಶವನ್ನು ಹೊಂದಿರುತ್ತವೆ. ಇದು ಆ ತಂಡಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ತಂಡಗಳು ಸೂಪರ್ ಲೀಗ್‌ನ ಹೊರತುಪಡಿಸಿಯೂ ಪರಸ್ಪರ ವಿರುದ್ಧ ಏಕದಿನ ಪಂದ್ಯಗಳನ್ನು ಸಹ ಆಡುತ್ತವೆ. ಕೆಲವು ಸಂದರ್ಭಗಳಲ್ಲಿ ಸರಣಿಯಲ್ಲಿ ನಾಲ್ಕು ಅಥವಾ ಐದು ಪಂದ್ಯಗಳನ್ನು ಆಡಬಹುದು, ಆದರೆ ಕೇವಲ ಮೂರು ಪಂದ್ಯಗಳು ಸೂಪರ್ ಲೀಗ್ ಪಾಯಿಂಟ್‌ಗಳಿಗೆ ಎಣಿಕೆಯಾಗುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Wed, 12 November 25
