ICC Test Team: ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ
ICC Test Team of the Year 2023: ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡಂತೆ ಐಸಿಸಿ 2023ರ ಸಾಲಿನ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಸ್ಥಾನ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2023ರ ಸಾಲಿನ ಟೆಸ್ಟ್ ತಂಡವನ್ನು ಪ್ರಕಟಿಸಿದೆ. ಈ ಬಳಗದ ನಾಯಕರಾಗಿ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ (Pat Cummins) ಆಯ್ಕೆಯಾಗಿದ್ದಾರೆ. ಇನ್ನು ತಂಡದಲ್ಲಿ ಭಾರತದ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಭಾರತ ಟೆಸ್ಟ್ ತಂಡದಿಂದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಐಸಿಸಿ ವರ್ಷದ ಟೀಮ್ಗೆ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಇಬ್ಬರು ಆಟಗಾರರು ಆಲ್ರೌಂಡರ್ಗಳು. ಇದರ ಹೊರತಾಗಿ ಟೀಮ್ ಇಂಡಿಯಾದ ಯಾವುದೇ ಬ್ಯಾಟರ್ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಐಸಿಸಿ ಪ್ಲೇಯಿಂಗ್ ಇಲೆವೆನ್:
2023 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 11 ಆಟಗಾರರನ್ನು ಒಳಗೊಂಡಿರುವ ಈ ತಂಡದಲ್ಲಿ ಆರಂಭಿಕರಾಗಿ ಆಸ್ಟ್ರೇಲಿಯಾದ ಉಸ್ಮಾನ್ ಖ್ವಾಜಾ ಹಾಗೂ ಶ್ರೀಲಂಕಾದ ದಿಮುತ್ ಕರುಣರತ್ನೆ ಆಯ್ಕೆಯಾಗಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಈ ತಂಡದಲ್ಲಿ 4ನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದರೆ, 5ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ದಾಂಡಿಗ ಟ್ರಾವಿಸ್ ಹೆಡ್ ಕಾಣಿಸಿಕೊಂಡಿದ್ದಾರೆ.
ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವುದು ಆಸ್ಟ್ರೇಲಿಯಾದ ಅಲೆಕ್ಸ್ ಕ್ಯಾರಿ. ಇನ್ನು ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಕಾಣಿಸಿಕೊಂಡರೆ, ಸ್ಪಿನ್ನರ್ ಆಲ್ರೌಂಡರ್ಗಳಾಗಿ ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ.
ವೇಗಿಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ತಂಡದಲ್ಲಿದ್ದಾರೆ. ಇವರ ಜೊತೆಗೆ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಕೂಡ ಐಸಿಸಿ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಐಸಿಸಿ ವರ್ಷದ ಟೆಸ್ಟ್ ತಂಡ:
- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)
- ದಿಮುತ್ ಕರುಣಾರತ್ನೆ (ಶ್ರೀಲಂಕಾ)
- ಕೇನ್ ವಿಲಿಯಮ್ಸನ್ (ನ್ಯೂಝಿಲೆಂಡ್)
- ಜೋ ರೂಟ್ (ಇಂಗ್ಲೆಂಡ್)
- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
- ರವೀಂದ್ರ ಜಡೇಜಾ
- ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ)
- ಪ್ಯಾಟ್ ಕಮಿನ್ಸ್ (ನಾಯಕ/ಆಸ್ಟ್ರೇಲಿಯಾ)
- ರವಿಚಂದ್ರನ್ ಅಶ್ವಿನ್ (ಭಾರತ)
- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
- ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್).
ಇದನ್ನೂ ಓದಿ: Josh Brown: ಜೋಶ್ ಅಬ್ಬರಕ್ಕೆ ಕ್ರಿಸ್ ಗೇಲ್ ದಾಖಲೆ ಧೂಳೀಪಟ
ಏಕದಿನ ತಂಡದಲ್ಲಿ ಭಾರತೀಯದ್ದೇ ದರ್ಬಾರ್:
ಐಸಿಸಿ ಪ್ರಕಟಿಸಿದ ಟೆಸ್ಟ್ ತಂಡದಲ್ಲಿ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದರೂ, ಅತ್ತ ಏಕದಿನ ತಂಡದಲ್ಲಿ ಟೀಮ್ ಇಂಡಿಯಾದ 6 ಆಟಗಾರರು ಕಾಣಿಸಿಕೊಂಡಿದ್ದಾರೆ. ಅಲ್ಲದೆ ಈ ತಂಡದ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ಈ ಮೂಲಕ ಐಸಿಸಿ ಪ್ರಕಟಿಸಿರುವ 2023 ರ ಏಕದಿನ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನ ಪಡೆಯುವಲ್ಲಿ ಭಾರತೀಯ ಆಟಗಾರರು ಯಶಸ್ವಿಯಾಗಿದ್ದಾರೆ.
ಐಸಿಸಿ ವರ್ಷದ ಏಕದಿನ ತಂಡ:
- ರೋಹಿತ್ ಶರ್ಮಾ (ನಾಯಕ/ಭಾರತ)
- ಶುಭ್ಮನ್ ಗಿಲ್ (ಭಾರತ)
- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)
- ವಿರಾಟ್ ಕೊಹ್ಲಿ (ಭಾರತ)
- ಡೇರಿಲ್ ಮಿಚೆಲ್ (ನ್ಯೂಝಿಲೆಂಡ್)
- ಹೆನ್ರಿಕ್ ಕ್ಲಾಸೆನ್ (ಸೌತ್ ಆಫ್ರಿಕಾ)
- ಮಾರ್ಕೊ ಯಾನ್ಸೆನ್ (ಸೌತ್ ಆಫ್ರಿಕಾ)
- ಆ್ಯಡಂ ಝಂಪಾ (ಆಸ್ಟ್ರೇಲಿಯಾ)
- ಮೊಹಮ್ಮದ್ ಸಿರಾಜ್ (ಭಾರತ)
- ಕುಲ್ದೀಪ್ ಯಾದವ್ (ಭಾರತ)
- ಮೊಹಮ್ಮದ್ ಶಮಿ (ಭಾರತ)