
2025 ರ ಏಷ್ಯಾಕಪ್ (Asia Cup 2025) ಫೈನಲ್ಗೂ ಮುನ್ನ ಟೂರ್ನಿಯ ಆರಂಭದ ಹಂತದಲ್ಲಿ ಹುಟ್ಟಿಕೊಂಡಿದ್ದ ಹ್ಯಾಂಡ್ಶೇಕ್ ವಿವಾದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ವಿಚಾರಣೆ ನಡೆಸಿದ್ದ ಐಸಿಸಿ (ICC), ರಾಜಕೀಯವಾಗಿ ಅರ್ಥೈಸಿಕೊಳ್ಳಬಹುದಾದ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿರುವುದು ಮಾತ್ರವಲ್ಲದೆ ಶೇ. 30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಲಾಗಿದೆ. ವಾಸ್ತವವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ಪಂದ್ಯ ಪ್ರಸ್ತುತಿಯಲ್ಲಿ ಸೂರ್ಯಕುಮಾರ್ ಯಾದವ್ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆ. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ಈ ಬಗ್ಗೆ ದೂರು ನೀಡಿತ್ತು.
ಮೇಲೆ ಹೇಳಿದಂತೆ ಸೆಪ್ಟೆಂಬರ್ 14 ರಂದು ನಡೆದಿದ್ದ ಪಾಕಿಸ್ತಾನ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಸಂತಾಪ ಸೂಚಿಸಿ ಮತ್ತು ಆಪರೇಷನ್ ಸಿಂಧೂರ್‌ನಲ್ಲಿ ಭಾಗಿಯಾಗಿದ್ದ ಭಾರತೀಯ ಸೇನೆಗೆ ಈ ವಿಜಯವನ್ನು ಅರ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಪಿಸಿಬಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ವಿಷಯದ ಕುರಿತು ಸೆಪ್ಟೆಂಬರ್ 25 ರಂದು ವಿಚಾರಣೆ ನಡೆಯಿತು.
ಪಿಟಿಐ ವರದಿಗಳ ಪ್ರಕಾರ, ನಾಯಕ ಸೂರ್ಯಕುಮಾರ್ ಅಂದಿನ ಪಂದ್ಯದ ರೆಫರಿ ರಿಚಿ ರಿಚರ್ಡ್ಸನ್ ಅವರ ಮುಂದೆ ವಿಚಾರಣೆ ಹಾಜರಾಗಿದ್ದರು. ಸೂರ್ಯ ಅವರೊಂದಿಗೆ ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ಮತ್ತು ಕ್ರಿಕೆಟ್ ಕಾರ್ಯಾಚರಣೆ ವ್ಯವಸ್ಥಾಪಕ ಸಮರ್ ಮಲ್ಲಾಪುರ್ಕರ್ ಕೂಡ ಹಾಜರಿದ್ದರು. ವಿಚಾರಣೆಯ ಸಂದರ್ಭದಲ್ಲಿ ಸೂರ್ಯಕುಮಾರ್ ನನ್ನ ಹೇಳಿಕೆ ಯಾವುದೇ ರಾಜಕೀಯ ಪ್ರೇರಿತವಲ್ಲ. ಹೀಗಾಗಿ ನಾನು ತಪ್ಪೊಪ್ಪಿಗೆ ನೀಡುವುದಿಲ್ಲ ಎಂದಿ ವಾದಿಸಿದ್ದರು ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ರಾಜಕೀಯವಾಗಿ ಅರ್ಥೈಸಿಕೊಳ್ಳಬಹುದಾದ ಹೇಳಿಕೆಗಳನ್ನು ನೀಡದಂತೆ ಮ್ಯಾಚ್ ರೆಫರಿ ರಿಚರ್ಡ್ಸನ್, ಸೂರ್ಯಕುಮಾರ್ ಯಾದವ್ ಅವರಿಗೆ ಶೇ. 30 ರಷ್ಟು ಪಂದ್ಯ ಶುಲ್ಕವನ್ನು ದಂಡವಾಗಿ ವಿಧಿಸಿದ್ದಾರೆ. ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧಗಳಿಗೆ ಸಾಮಾನ್ಯವಾಗಿ ಎಚ್ಚರಿಕೆ ಅಥವಾ ಪಂದ್ಯ ಶುಲ್ಕದ 15% ದಂಡ ವಿಧಿಸಲಾಗುತ್ತದೆ.
Asia Cup 2025: ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ- ಪಾಕ್ ನಡುವೆ ಫೈನಲ್ ಫೈಟ್
ಏತನ್ಮಧ್ಯೆ, ಬಿಸಿಸಿಐ ಪಾಕಿಸ್ತಾನದ ಇಬ್ಬರು ಆಟಗಾರರಾದ ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ವಿರುದ್ಧ ದುರ್ವರ್ತನೆಯ ದೂರು ದಾಖಲಿಸಿದೆ. ಸೆಪ್ಟೆಂಬರ್ 26 ರಂದು ಇವರಿಬ್ಬರ ವಿಚಾರಣೆ ನಡೆಯಲಿದೆ. ಇಬ್ಬರು ಆಟಗಾರರು ತಪ್ಪಿತಸ್ಥರೆಂದು ಕಂಡುಬಂದರೆ, ಇಬ್ಬರು ಗಂಭೀರ ಕ್ರಮವನ್ನು ಎದುರಿಸಬೇಕಾಗುತ್ತದೆ. ಸೆಪ್ಟೆಂಬರ್ 28 ರಂದು ಭಾರತ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತವಾಗಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Fri, 26 September 25