T20 World Cup: ವಿಶ್ವಕಪ್ನಿಂದ ಹೊರಬಿದ್ದ ಪಾಕಿಸ್ತಾನ; ಸೆಮಿಸ್ನಲ್ಲಿ ಭಾರತಕ್ಕೆ ಆಸೀಸ್ ಎದುರಾಳಿ!
ICC Women‘s T20 World Cup 2023: ಸೋಮವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಐರ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್-2023 (ICC Women’s T20 World Cup) ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿದ ಪಾಕಿಸ್ತಾನ ತಂಡ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಈ ತಂಡವು ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಗುಳಿದಿತ್ತು ಆದರೆ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಕೊನೆಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಲಿಷ್ಠ ಇಂಗ್ಲೆಂಡ್ ಮುಂದೆ ಪಾಕ್ ಆಟ ನಡೆಯಲಿಲ್ಲ. ಪಾಕ್ ತಂಡವನ್ನು 114 ರನ್ಗಳಿಂದ ಹೀನಾಯವಾಗಿ ಸೋಲಿಸಿದ ಇಂಗ್ಲೆಂಡ್ ವನಿತಾ ತಂಡ ಗ್ರೂಪ್ 2 ರಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದೆ. ಇದರರ್ಥ ಗುಂಪಿನ ಎರಡನೇ ಸ್ಥಾನದಲ್ಲಿರುವ ಭಾರತ ತಂಡವು ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು (India vs Australia) ಎದುರಿಸಲಿದೆ.
ಪಾಕಿಸ್ತಾನದ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಇಂಗ್ಲೆಂಡ್ ಐದು ವಿಕೆಟ್‌ಗೆ 213 ರನ್ ಗಳಿಸಿತು. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ತಂಡವೊಂದು 200 ರನ್‌ಗಳ ಗಡಿ ದಾಟಿದ್ದು ಇದೇ ಮೊದಲು. ಆದರೆ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 99 ರನ್ ಗಳಿಸಲಷ್ಟೇ ಶಕ್ತವಾಯಿತು.
T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ
ಭಾರತಕ್ಕೆ ಆಸೀಸ್ ಎದುರಾಳಿ
ಸೋಮವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ಐರ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತ್ತು. ಹೀಗಾಗಿ ಟೀಂ ಇಂಡಿಯಾದ ಈ ಗೆಲುವು ಪಾಕಿಸ್ತಾನದ ಸೆಮಿಫೈನಲ್ ಕನಸನ್ನು ಭಗ್ನಗೊಳಿಸಿತು. ಗ್ರೂಪ್ ಎರಡರಲ್ಲಿ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಎಂಟು ಅಂಕಗಳನ್ನು ಪಡೆದುಕೊಂಡಿದೆ. ಹೀಗಾಗಿ ಸೆಮಿಫೈನಲ್‌ನಲ್ಲಿ ಮೊದಲನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಎದುರಿಸಲಿದೆ. ಭಾರತ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆರು ಅಂಕಗಳೊಂದಿಗೆ ಎರಡನೇ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಭಾರತ ಸೆಮಿಫೈನಲ್‌ನಲ್ಲಿ, ಗುರುವಾರದಂದು ಮೊದಲನೇ ಗುಂಪಿನಲ್ಲಿ ನಂ.1 ಸ್ಥಾನದಲ್ಲಿರುವ ಆಸ್ಟ್ರೇಲಿಯಾ ತಂಡವವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದು ಎಂಟು ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಇಂಗ್ಲೆಂಡ್- ಪಾಕ್ ಪಂದ್ಯ ಹೀಗಿತ್ತು
ಪಾಕ್ ವಿರುದ್ಧದ ಪಂದ್ಯದಲ್ಲಿ ನ್ಯಾಟ್ ಸೀವರ್ ಬ್ರಂಟ್ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ ಕೇವಲ 40 ಎಸೆತಗಳನ್ನು ಎದುರಿಸಿದ ಬ್ರಂಟ್, 12 ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ ಅಜೇಯ 81 ರನ್ ಗಳಿಸಿದರು. ಇವರಲ್ಲದೆ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ 33 ಎಸೆತಗಳಲ್ಲಿ 59 ರನ್ ಗಳಿಸುವ ಮೂಲಕ ಇಂಗ್ಲೆಂಡ್ಗೆ ಉತ್ತಮ ಆರಂಭ ನೀಡಿದರು. ಇವರಿಬ್ಬರನ್ನು ಹೊರತುಪಡಿಸಿ ಆಮಿ ಜೋನ್ಸ್ 31 ಎಸೆತಗಳಲ್ಲಿ 47 ರನ್ ಗಳಿಸಿ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು.
ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಆರಂಭದಲ್ಲೇ ಪಂದ್ಯದಿಂದ ಹೊರಬಿತ್ತು. ಪಾಕ್ ತಂಡದ ನಾಲ್ವರು ಬ್ಯಾಟರ್ಗಳು ಎರಡಂಕಿ ಮುಟ್ಟುವಲ್ಲಿ ಯಶಸ್ವಿಯಾದರು. ಅವರಲ್ಲಿ ಒಂಬತ್ತನೇ ಕ್ರಮಾಂಕದ ಬ್ಯಾಟರ್ ತುಬಾ ಹಸನ್ ಅತ್ಯಧಿಕ 28 ರನ್ ಗಳಿಸಿದರು. ಇಂಗ್ಲೆಂಡ್ ಪರ ಕ್ಯಾಥರೀನ್ ಸೀವರ್ ಬ್ರಂಟ್ ಮತ್ತು ಚಾರ್ಲೊಟ್ ಡೀನ್ ತಲಾ ಎರಡು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Wed, 22 February 23