ಇಂದು ಬೆಂಗಳೂರಿನಲ್ಲಿ ಮಳೆ ಸುರಿದರೆ ಪಾಕ್ ತಂಡಕ್ಕೆ ಭಾರಿ ಲಾಭ! ಹೇಗೆ ಗೊತ್ತಾ?

|

Updated on: Nov 09, 2023 | 8:23 AM

ICC World Cup 2023: ಒಂದು ವೇಳೆ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ದೊರೆಯಲಿದೆ. ಈ 1 ಅಂಕವು ನ್ಯೂಜಿಲೆಂಡ್‌ಗೆ ಬಹಳ ಮಹತ್ವದ್ದಾಗಿರಲಿದ್ದು, ಈ ಒಂದು ಅಂಕದಿಂದ ಕಿವೀಸ್ ಬಳಿ 9 ಅಂಕಗಳು ಇದ್ದಂತಾಗುತ್ತದೆ. ಇದರಿಂದ ಪಾಕಿಸ್ತಾನಕ್ಕೆ ಲಾಭವಾಗಲಿದೆ.

ಇಂದು ಬೆಂಗಳೂರಿನಲ್ಲಿ ಮಳೆ ಸುರಿದರೆ ಪಾಕ್ ತಂಡಕ್ಕೆ ಭಾರಿ ಲಾಭ! ಹೇಗೆ ಗೊತ್ತಾ?
ಪಾಕಿಸ್ತಾನ ಕ್ರಿಕೆಟ್ ತಂಡ
Follow us on

2023ರ ವಿಶ್ವಕಪ್​ನ (ICC World Cup 2023) ಲೀಗ್ ಸುತ್ತು ಮುಗಿಯುವ ಹಂತಕ್ಕೆ ಬಂದಿದೆ. ಈಗಾಗಲೇ ಎಲ್ಲಾ ತಂಡಗಳು ತಲಾ 8 ಪಂದ್ಯಗಳನ್ನು ಆಡಿ ಮುಗಿಸಿದ್ದು, ಇದರಲ್ಲಿ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಇದೀಗ ಖಾಲಿ ಉಳಿದಿರುವ ಏಕೈಕ ಸೆಮಿಫೈನಲ್ ಸ್ಥಾನಕ್ಕಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ವಿಶ್ವಕಪ್‌ನ ಒಂಬತ್ತನೇ ಹಾಗೂ ಅಂತಿಮ ಸುತ್ತಿನ ಪಂದ್ಯಗಳು ಗುರುವಾರದಿಂದ ಆರಂಭವಾಗಲಿವೆ. ಈ ಒಂಬತ್ತನೇ ಸುತ್ತಿನ ಮೊದಲ ಪಂದ್ಯ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ (New Zealand vs Sri Lanka) ನಡುವೆ ನಡೆಯಲಿದೆ. ಈ ಎರಡೂ ತಂಡಗಳು ಲೀಗ್ ಸುತ್ತಿನ ಕೊನೆಯ ಪಂದ್ಯವನ್ನು ಆಡಲಿವೆ. ಈ ಪಂದ್ಯ ಇಂದು ಅಂದರೆ, ನವೆಂಬರ್ 9 ರಂದು ಬೆಂಗಳೂರಿನಲ್ಲಿ (M Chinnaswamy Stadium) ನಡೆಯಲಿದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಪಾಕಿಸ್ತಾನ ತಂಡಕ್ಕೆ ಭಾರಿ ಲಾಭವಾಗಲಿದೆ.

ಬೆಂಗಳೂರಿನಲ್ಲಿ ಶೇ. 80 ರಷ್ಟು ಮಳೆ

ಮೇಲೆ ಹೇಳಿದಂತೆ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇದು ಲೀಗ್ ಸುತ್ತಿನಲ್ಲಿ ಉಭಯ ತಂಡಗಳ ಕೊನೆಯ ಪಂದ್ಯವಾಗಿದೆ. ಶ್ರೀಲಂಕಾ ಈಗಾಗಲೇ ವಿಶ್ವಕಪ್​ನಿಂದ ಹೊರಬಿದ್ದಿದೆ. ಆದರೆ ನ್ಯೂಜಿಲೆಂಡ್‌ಗೆ ಮಾತ್ರ ಈ ಪಂದ್ಯದ ಗೆಲುವು ಬಹಳ ಅವಶ್ಯಕವಾಗಿದೆ. ಆದರೆ ಪಂದ್ಯದ ದಿನವಾದ ಇಂದು ಬೆಂಗಳೂರಿನಲ್ಲಿ ಶೇ. 80 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದು ಕಿವೀಸ್ ಪಡೆಯ ನಿದ್ದೆಗೆಡಿಸಿದೆ.

NZ vs SL: ಬೆಂಗಳೂರಿನಲ್ಲಿ ನ್ಯೂಜಿಲೆಂಡ್​ಗೆ ಮಹತ್ವದ ಪಂದ್ಯ; ಮಳೆಯಿಂದ ಪಂದ್ಯ ರದ್ದಾಗುವ ಸಾಧ್ಯತೆ..!

ಪಂದ್ಯ ರದ್ದಾದರೆ ಯಾರು ಸೆಮಿಫೈನಲ್‌ಗೆ?

ಒಂದು ವೇಳೆ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ದೊರೆಯಲಿದೆ. ಇದರಿಂದ ಶ್ರೀಲಂಕಾಕ್ಕೆ 5 ಅಂಕ ಲಭಿಸಲಿದೆ. ಶ್ರೀಲಂಕಾ ಈಗಾಗಲೇ ವಿಶ್ವಕಪ್‌ನಿಂದ ಹೊರಬಿದ್ದಿರುವುದರಿಂದ ಅದಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ ಈ 1 ಅಂಕವು ನ್ಯೂಜಿಲೆಂಡ್‌ಗೆ ಬಹಳ ಮಹತ್ವದ್ದಾಗಿರಲಿದ್ದು, ಈ ಒಂದು ಅಂಕದಿಂದ ಕಿವೀಸ್ ಬಳಿ 9 ಅಂಕಗಳು ಇದ್ದಂತಾಗುತ್ತದೆ. ಇದರಿಂದ ಪಾಕಿಸ್ತಾನಕ್ಕೆ ಲಾಭವಾಗಲಿದೆ. ಏಕೆಂದರೆ ಲೀಗ್ ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದರೆ ನೇರವಾಗಿ ಸೆಮಿಫೈನಲ್ ತಲುಪಲಿದೆ. ಆದರೆ ಅದಕ್ಕಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಅಫ್ಘಾನಿಸ್ತಾನ ಸೋಲಲೇಬೇಕಾಗುತ್ತದೆ.

ಪಾಕ್ ಕೇವಲ ಪಂದ್ಯ ಗೆದ್ದರೆ ಸಾಕಾಗುವುದಿಲ್ಲ

ಮತ್ತೊಂದೆಡೆ ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ಮತ್ತು ಪಾಕಿಸ್ತಾನ, ಇಂಗ್ಲೆಂಡ್ ವಿರುದ್ಧ ಸೋತರೆ, ಅಫ್ಘಾನಿಸ್ತಾನವು ತನ್ನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದರೆ ಸೆಮಿಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯುತ್ತದೆ. ಇಲ್ಲಿ ಒಂದು ವೇಳೆ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾ ವಿರುದ್ಧ ಸೋತರೆ ಮತ್ತು ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ಗೆದ್ದರೆ, ಪಾಕಿಸ್ತಾನ ತಂಡ ಸೆಮಿಫೈನಲ್​ಗೇರಲು ಕೇವಲ ಪಂದ್ಯವನ್ನು ಗೆದ್ದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ಅತ್ಯಧಿಕ ನೆಟ್​ ರನ್​ರೇಟ್​ನಿಂದ ಗೆಲ್ಲಬೇಕು. ಆಗ ಮಾತ್ರ ಬಾಬರ್ ಪಡೆ ಸೆಮಿಫೈನಲ್​ಗೇರಬಹುದಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ