AUS vs PAK: ಬೆಂಗಳೂರಿನಲ್ಲಿರುವ ಪಾಕ್ ತಂಡದ ಹಲವು ಆಟಗಾರರಿಗೆ ವೈರಲ್ ಫೀವರ್..!
AUS vs PAK, ICC World Cup 2023: ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಬೆಂಗಳೂರಿಗೆ ಆಗಮಿಸಿರುವ ಪಾಕಿಸ್ತಾನ ತಂಡ ಸಂಕಷ್ಟದಲ್ಲಿದೆ. ಭಾರತದ ವಿರುದ್ಧ ಸೋಲಿನ ಬಳಿಕ ಪಾಕ್ ತಂಡದ ಆಟಗಾರರು ವೈರಲ್ ಫೀವರ್ನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ಏಕದಿನ ವಿಶ್ವಕಪ್ನಲ್ಲಿ (ICC World cup 2023) ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಬೆಂಗಳೂರಿಗೆ ಆಗಮಿಸಿರುವ ಪಾಕಿಸ್ತಾನ ತಂಡ (Australia vs Pakistan) ಸಂಕಷ್ಟದಲ್ಲಿದೆ. ಭಾರತದ ವಿರುದ್ಧ ಸೋಲಿನ ಬಳಿಕ ಪಾಕ್ ತಂಡದ ಆಟಗಾರರು ವೈರಲ್ ಫೀವರ್ನಿಂದ (Viral Fever) ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ತಂಡದ ಹಲವು ಆಟಗಾರರಲ್ಲಿ ವೈರಲ್ ಫೀವರ್ ಕಾಣಿಸಿಕೊಂಡಿದ್ದು, ಇದರಲ್ಲಿ ಬಹುತೇಕ ಆಟಗಾರರ ಆರೋಗ್ಯ ಈಗ ಸುಧಾರಿಸಿದೆ. ಆದರೆ ಇನ್ನೂ ಇಬ್ಬರು ಆಟಗಾರರ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ ಎಂದು ವರದಿಯಾಗಿದೆ.
ಸದ್ಯ ಪಾಕಿಸ್ತಾನ ತಂಡ ಬೆಂಗಳೂರಿನಲ್ಲಿದೆ. ಅಕ್ಟೋಬರ್ 20 ರಂದು ಈ ತಂಡವು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಮಾಧ್ಯಮ ವರದಿಗಳ ಪ್ರಕಾರ, ವೈರಲ್ ಸೋಂಕಿನಿಂದಾಗಿ ಅನೇಕ ಪಾಕಿಸ್ತಾನಿ ಆಟಗಾರರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ತಂಡದ ಹೆಚ್ಚಿನವರು ಪರಿಣಾಮ ಬೀರದಿದ್ದರೂ ಅಥವಾ ಈಗ ಚೇತರಿಸಿಕೊಂಡಿದ್ದರೂ, ಇಬ್ಬರು ಆಟಗಾರರು ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದು,ಇದರಲ್ಲಿ ಒಬ್ಬರು ಇನ್ನೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ನೀಡಿದ ಅತಿ ಕಡಿಮೆ ಟಾರ್ಗೆಟ್ ಎಷ್ಟು ಗೊತ್ತಾ?
ಒಂದು ಗಂಟೆ ಕಡಿಮೆ ಅಭ್ಯಾಸ
ನಿನ್ನೆ ಸಂಜೆ, ಬೆಂಗಳೂರಿನ ತಮ್ಮ ಹೋಟೆಲ್‌ನಿಂದ ಟೀಮ್ ಡಿನ್ನರ್‌ಗೆ ತೆರಳಿದ್ದ ಪಾಕಿಸ್ತಾನ ತಂಡ, ಅಕ್ಟೋಬರ್ 17 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಥಳೀಯ ಕಾಲಮಾನ ಸಂಜೆ 6 ರಿಂದ ರಾತ್ರಿ 9 ರವರೆಗೆ ಅಭ್ಯಾಸ ನಡೆಸಬೇಕಿತ್ತು. ಆದರೆ ಆಟಗಾರರ ಅನಾರೋಗ್ಯದಿಂದಾಗಿ ಅಭ್ಯಾಸ ಅವದಿಯನ್ನು ಒಂದು ಗಂಟೆ ಕಡಿಮೆ ಮಾಡಲಾಗಿದೆ.
ವೈದ್ಯಕೀಯ ಸಮಿತಿಯ ಮೇಲ್ವಿಚಾರಣೆಯಲ್ಲಿದ್ದಾರೆ
ಆಟಗಾರರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನದ ಮಾಧ್ಯಮ ವ್ಯವಸ್ಥಾಪಕ ಅಹ್ಸಾನ್ ನಾಗಿ, ಕಳೆದ ಕೆಲವು ದಿನಗಳಿಂದ ನಮ್ಮ ತಂಡದ ಕೆಲವು ಆಟಗಾರರು ಜ್ವರದಿಂದ ಬಳಲುತ್ತಿದ್ದರು. ಆದರೀಗ ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇನ್ನು ಚೇತರಿಕೆಯ ಹಂತದಲ್ಲಿರುವವರು ತಂಡದ ವೈದ್ಯಕೀಯ ಸಮಿತಿಯ ಮೇಲ್ವಿಚಾರಣೆಯಲ್ಲಿದ್ದಾರೆ ಎಂದರು.
ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ
ಹೈದರಾಬಾದ್‌ನಲ್ಲಿ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಬಲವಾಗಿ ಪ್ರಾರಂಭಿಸಿದ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ತನ್ನ ಮೊದಲ ಎರಡು ಪಂದ್ಯಗಳನ್ನು ಗೆದ್ದಿತು. ಆದಾಗ್ಯೂ, ಅಕ್ಟೋಬರ್ 14 ರಂದು ಅಹಮದಾಬಾದ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋಲನ್ನು ಎದುರಿಸಿತ್ತು. ಸದ್ಯ ಆಟಗಾರರ ಅನಾರೋಗ್ಯದಿಂದ ಕೊಂಚ ಹಿನ್ನಡೆ ಅನುಭವಿಸಿರುವ ಪಾಕ್ ತಂಡ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಎಲ್ಲಾ ಆಟಗಾರರು ಚೇತರಿಸಿಕೊಂಡು, ಫಿಟ್ ಆಗಲಿದ್ದಾರೆ ಎಂಬ ಭರವಸೆ ಹೊಂದಿದೆ. ಪ್ರಸ್ತುತ, ಪಾಕಿಸ್ತಾನ ಮೂರು ಪಂದ್ಯಗಳಿಂದ ನಾಲ್ಕು ಅಂಕಗಳೊಂದಿಗೆ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:59 am, Wed, 18 October 23